Advertisement

ಗೌಡರ ಕೈಗೆ ಸೇರಿದೆ 100 ಅಭ್ಯರ್ಥಿಗಳ ಪಟ್ಟಿ

03:45 AM Apr 21, 2017 | |

ಬೆಂಗಳೂರು:ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್‌ ಕೋರ್‌ ಕಮಿಟಿ ತೀರ್ಮಾನಿಸಿದ್ದು, 100 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು  ಪಕ್ಷದ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರ ಕೈಗೆ ತಲುಪಿಸಲಾಗಿದೆ.

Advertisement

ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಗುರುವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ 224 ವಿಧಾನಸಭೆ ಕ್ಷೇತ್ರಗಳಲ್ಲೂ ಮತಗಟ್ಟೆವಾರು ಸಮಿತಿ ರಚಿಸಿ  ಈಗಿನಿಂದಲೇ ಚುನಾವಣೆ ಸಿದ್ಧತೆ ಪ್ರಾರಂಭಿಸಲು ನಿರ್ಧರಿಸಲಾಯಿತು.

ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ನಿಗದಿಯಾದರೂ ಎದುರಿಸಲು ಪಕ್ಷ ಸಜ್ಜುಗೊಳಿಸಬೇಕು. ಸಾಮಾಜಿಕ ಜಾಲತಾಣ ಸಂವಾದ ಜಿಲ್ಲಾ ಮಟ್ಟದಲ್ಲೂ ನಡೆಸಬೇಕು. ಎಚ್‌.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿ ನೀಡಿರುವ ಕೊಡುಗೆ, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆಗಳ ಆಧಾರದಲ್ಲಿ ಮತದಾರರ ಮುಂದೆ ಹೋಗಬೇಕು ಎಂದು ಕೋರ್‌ಕಮಿಟಿಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ರಮೇಶ್‌ಬಾಬು, ಮುಂದಿನ ವಿಧಾನಸಭೆ ಚುನಾವಣೆಗೆ‌ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಹಾಗೂ ಈಗಿನಿಂದಲೇ ಸಜ್ಜಾಗಲು ಇಂದಿನ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕಾಗಿ ಬೂತ್‌ ಮಟ್ಟದಲ್ಲಿ ಸಮಿತಿ ಸಹ ರಚನೆ ಮಾಡಲಾಗುವುದು ಎಂದು ಹೇಳಿದರು.

ಮುಂದಿನ ಚುನಾವಣೆಗೆ ಸ್ಪರ್ಧೆಗೆ ಇಳಿಸುವ 100 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೂ ಇಂದಿನ ಕೋರ್‌ ಕಮಿಟಿ ಸಭೆಯಲ್ಲಿ ದೇವೇಗೌಡರಿಗೆ ನೀಡಲಾಗಿದ್ದು, ಅವರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಮಹಿಳಾ ಸಮಾವೇಶ ನಡೆಸುವುದು. ಬೂತ್‌ ಮಟ್ಟದ ಸಮಿತಿ ರಚನೆಗೆ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ಬಾಬು ಅವರ ನೇತೃತ್ವದಲ್ಲಿ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾದರೂ ಎದುರಿಸಲು ಸಿದ್ಧವಾಗಿರುವಂತೆ ತತಕ್ಷಣದಿಂದ ಪಕ್ಷ ಸಂಘಟಿಸಲು ತೀರ್ಮಾನಿಸಲಾಗಿದೆ. ಸಾಮಾಜಿಕ ತಾಲತಾಣಗಳ ಸಮರ್ಪಕ ಬಳಕೆ, ಜಿಲ್ಲಾ ಮಟ್ಟದಲ್ಲಿ “ಕುಮಾರಪಥ’ ಸಾಮಾಜಿಕ ಜಾಲತಾಣ ಅಭಿಮಾನಿಗಳ ಸಂವಾದ ನಡೆಸಲು ಕೋರ್‌ ಕಮಿಟಿ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಕುಪೇಂದ್ರರೆಡ್ಡಿ, ಸಿ.ಎಸ್‌.ಪುಟ್ಟರಾಜು, ಬಂಡೆಪ್ಪ ಕಾಶಂಪುರ್‌, ಶಾರದಾ ಪೂರ್ಯನಾಯಕ್‌, ಜಿ.ಟಿ.ದೇವೇಗೌಡ, ಬಿ.ಎಂ.ಫ‌ರೂಕ್‌, ಎಚ್‌.ಸಿ.ನೀರಾವರಿ, ಮಧು ಬಂಗಾರಪ್ಪ, ಬಿ.ಬಿ.ನಿಂಗಯ್ಯ, ಟಿ.ಎ.ಶರವಣ, ಸಿ.ಆರ್‌.ಮನೋಹರ್‌ ಪಾಲ್ಗೊಂಡಿದ್ದರು.

ಕೋರ್‌ ಕಮಿಟಿ ಸದಸ್ಯರ ಸಂಖ್ಯೆ 17ಕ್ಕೆ
*ಕೋರ್‌ ಕಮಿಟಿಗೆ ಹೊಸದಾಗಿ ಇಬ್ಬರು ಸದಸ್ಯರನ್ನು ನೇಮಿಸಲಾಗಿದ್ದು, ಇದರಿಂದಾಗಿ 15 ಮಂದಿಯಿದ್ದ ಕೋರ್‌ ಕಮಿಟಿ  ಸದಸ್ಯರ ಸಂಖ್ಯೆ 17 ಕ್ಕೆ ವಿಸ್ತರಣೆಯಾಗಿದೆ. ವಿಧಾನಪರಿಷತ್‌ ಸದಸ್ಯನ ಮಾಜಿ ಸದಸ್ಯ ಎಚ್‌.ಸಿ.ನೀರಾವರಿ ಹಾಗೂ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ಅವರನ್ನು ಹೊಸದಾಗಿ ಸಮಿತಿಗೆ ಸೇರಿಸಲಾಗಿದೆ.

ಉಪ್ಪಾರ ಮುಖಂಡರ ಸಭೆ
*ಕೋರ್‌ ಕಮಿಟಿ ಸಭೆಗೂ ಮುನ್ನ ಉಪ್ಪಾರ ಸಮುದಾಯದ ಮುಖಂಡರ ಸಭೆ ನಡೆಸಲಾಯಿತು. ವಿಧಾನಪರಿಷತ್‌ನ ಮಾಜಿ ಸದಸ್ಯ ಎಚ್‌.ಸಿ.ನೀರಾವರಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಮಾತನಾಡಿದ ಎಚ್‌.ಡಿ.ದೇವೇಗೌಡ, ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಜನತಾಪಕ್ಷ, ಜನತಾದಳ ಸರ್ಕಾರದಲ್ಲಿ ಹೆಚ್ಚು ಒತ್ತು ನೀಡಲಾಗಿತ್ತು.  ಈ ಬಾರಿಯ ಚುನಾವಣೆಯಲ್ಲಿ ಸಮುದಾಯ ನಮ್ಮೊಂದಿಗೆ ಇರಿ. 33 ಕ್ಷೇತ್ರಗಳಲ್ಲಿ ನೀವೇ ನಿರ್ಣಾಯಕರು, ನಿಮ್ಮ ಸಮುದಾಯದ ಹಿತಾಸಕ್ತಿ ಕಾಪಾಡಲಿದೆ ಎಂದು ಭರವಸೆ ನೀಡಿದರು. 

ಎಚ್‌.ಸಿ.ನೀರಾವರಿ ಮಾತನಾಡಿ,  ರಾಜಕೀಯದಿಂದ ದೂರವೇ ಉಳಿದಿದ್ದ ನಾನು ದೇವೇಗೌಡರ ಮಾತಿಗೆ ಒಪ್ಪಿ ಮತ್ತೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ರಾಜಕೀಯಕ್ಕೆ ಬುದ್ಧಿವಂತರು, ಯುವಕರು, ಪ್ರಜ್ಞಾವಂತರು ಬರಬೇಕು. ರಾಜಕೀಯ ಕ್ಷೇತ್ರ ಶುದ್ಧೀಕರಣ ಆಗಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next