ಬೆಂಗಳೂರು: ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ದೆಹಲಿ ಮಾದರಿಯಲ್ಲಿ ಕೋವಿಡ್-19 ಸೆಸ್ ಹಾಕಿದರೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಮದ್ಯ ಮಾರಾಟ ಆರಂಭವಾಗಿದೆ. ಒಂದೇ ದಿನ ಕರ್ನಾಟಕ ಅಬಕಾರಿ ಇಲಾಖೆಗೂ 45 ಕೋಟಿ ರೂಪಾಯಿ ಹಣ ಹರಿದು ಬಂದಿದೆ.
ಬಜೆಟ್ ನಲ್ಲಿ ಅಬಕಾರಿ ಹೆಚ್ಚಳ ತೆರಿಗೆ ಮಾಡಿದ್ದು, ಮಂಗಳವಾರದಿಂದ ರಾಜ್ಯದಲ್ಲಿ ಹೊಸ ದರ ಜಾರಿಯಾಗಲಿದೆ. ಸೋಮವಾರ ಖರೀದಿ ಮಾಡಿದ್ದ ದರಕ್ಕಿಂತ ಶೇಕಡ 6ರಷ್ಟು ಹೆಚ್ಚಳವಾಗಿದೆ. 2020ನೇ ಸಾಲಿನಲ್ಲಿ 20,950 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಈ ಬಾರಿಯ ಹಣಕಾಸು ವರ್ಷದಲ್ಲಿ 25 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹ ಗುರಿಯನ್ನು ಅಬಕಾರಿ ಇಲಾಖೆಗೆ ಹಣಕಾಸು ಇಲಾಖೆ ನೀಡಿದೆ.
ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ ದೆಹಲಿ ಮಾದರಿಯಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಿದರೆ ಅನುಕೂಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೆಹಲಿ ಸರ್ಕಾರ ಆರ್ಥಿಕ ನಷ್ಟ ಸರಿದೂಗಿಲು ಮದ್ಯ ಮಾರಾಟದ ಮೇಲೆ 70 ಪರ್ಸೆಂಟ್ ವಿಶೇಷ ಕೋವಿಡ್-19 ಸೆಸ್ ಹಾಕಿದೆ. ಅಂದರೆ 1 ಸಾವಿರ ರೂಪಾಯಿ ಮದ್ಯದ ಬಾಟೆಲ್ ಬೆಲೆ ಇಂದಿನಿಂದ 1,700 ಆಗಲಿದೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎನ್ನುವ ಕಾರಣಕ್ಕೆ ಎಲ್ಲಾ ಅಭಿವೃದ್ಧಿ ಕೆಲಸಗಳನ್ನೂ ಕೂಡಲೇ ಸ್ಥಗಿತ ಮಾಡಿ ಎಂದು ಸರ್ಕಾರವೇ ನಿರ್ದೇಶನ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ಮದ್ಯ ಮಾರಾಟ ಮಾಡುವುದು ಬೇಡ ಎಂಬ ಕೂಡ ರಾಜ್ಯಾದ್ಯಂತ ಕೇಳಿ ಬರುತ್ತಿದೆ. ಇದೀಗ ದೆಹಲಿ ಮಾದರಿಯಲ್ಲಿ ವಿಶೇಷ ಕೋವಿಡ್-19 ಸೆಸ್ ಹಾಕಿದರೆ, ಮದ್ಯ ಕುಡಿಯಲೇ ಬೇಕು ಎನ್ನುವ ಹಣವಂತರು ಹೆಚ್ಚಿನ ದರ ಕೊಟ್ಟು ಮದ್ಯಪಾನ ಮಾಡಲಿ, ಅಗರ್ಭ ಶ್ರೀಮಂತರು ಹೆಚ್ಚು ಹಣ ಕೊಟ್ಟರೆ ಯಾವುದೇ ನಷ್ಟವಿಲ್ಲ. ಸರ್ಕಾರದ ಬೊಕ್ಕಸಕ್ಕೂ ವಿಪರೀತ ಪ್ರಮಾಣದಲ್ಲಿ ಹಣ ಹರಿದು ಬರಲಿದ್ದು, ಬರಿದಾಗಿರುವ ಖಜಾನೆ ಭರ್ತಿ ಮಾಡುವುದಕ್ಕೂ ಅನುಕೂಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಕೂಡ ದೆಹಲಿ ಮಾದರಿಯಲ್ಲಿ ಸೆಸ್ ಹಾಕಲು ಮುಂದಾದರೆ ಬಡವರು ಮದ್ಯ ಕುಡಿಯುವುದು ತಪ್ಪಲಿದೆ. ಜೊತೆಗೆ ಸರ್ಕಾರದ ಖಜಾನೆಯೂ ಭರ್ತಿಯಾಗಲಿದೆ. ಈ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯ ಕೂಡ ಹೆಚ್ಚಾಗಿದೆ ಎಂದು ಸಲಹೆ ನೀಡಿದ್ದಾರೆ.