Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಎಲ್ಲ ರಿಟೇಲ್ ಮತ್ತು ಹೋಲ್‌ಸೇಲ್ ಮಳಿಗೆಗಳು ಬಾಗಿಲು ಹಾಕಿವೆ. ಕೋವಿಡ್ 19ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಕ್ರಮ ಅನಿವಾರ್ಯ. ಆದರೆ ಇದು ಅನಧಿಕೃತ ಮತ್ತು ನಕಲಿ ಮದ್ಯದ ಅಕ್ರಮ ಮಾರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದಿರುವ ಆಲ್ಕೋಹಾಲ್ ಉದ್ಯಮದ ಅತ್ಯುನ್ನತ ಮಂಡಳಿಯು, ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ದಿಲ್ಲಿ, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಲ ಸಹಿತ 10 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಜತೆಗೆ ಮದ್ಯ ಮಾರಾಟ ಪರವಾನಿಗೆ ಮತ್ತು ಅನುಮತಿಗಳನ್ನು ಎ. 30 ಇಲ್ಲವೇ ಲಾಕ್‌ಡೌನ್ ಅವಧಿ ಮುಗಿದ ಬಳಿಕ ಒಂದು ತಿಂಗಳವರೆಗೆ ವಿಸ್ತರಿಸುವಂತೆಯೂ ಮನವಿ ಮಾಡಿದೆ ಎಂದು ಸಿಐಎಬಿಸಿ ಮಹಾನಿರ್ದೇಶಕ ವಿನೋದ್ ಗಿರಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿನದ ಸೀಮಿತ ಅವಧಿಗಾದರೂ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಿದ್ದ ಹುಬ್ಬಳ್ಳಿಯ ಮನೋರೋಗ ವೈದ್ಯ ಡಾ| ವಿನೋದ್ ಕುಲಕರ್ಣಿ ಅವರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿದೆ. ದಿ| ಬಿ.ಜಿ. ಕುಲಕರ್ಣಿ ಮೆಮೋರಿಯಲ್ ಲೀಗಲ್ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಡಾ| ವಿನೋದ್ ಕುಲಕರ್ಣಿ ಸಲ್ಲಿಸಿದ ಪಿಐಎಲ್‌ನ್ನು ಬುಧವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಸರಕಾರಕ್ಕೆ ನಿರ್ದೇಶ ನೀಡಬೇಕು ಎಂಬ ಅರ್ಜಿದಾರರ ಮನವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
Related Articles
Advertisement