“ಲಿಪ್‌ಸ್ಟಿಕ್ ಮರ್ಡರ್’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆ ಸಿದ್ಧವಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ರಾಜೇಶ್ ಮೂರ್ತಿ ನಿರ್ದೇಶಿಸಿದ್ದಾರೆ. ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಯುವಕರು ಯಾವ ರೀತಿ ಮೋಸ ಹೋಗುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳಲಾಗಿದೆಯಂತೆ.
ಈ ಚಿತ್ರದ ಕಥೆಯಲ್ಲಿ ಡೇಟಿಂಗ್ ಆ್ಯಪ್ ನಂಬಿ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಮರ್ಡರ್ ಆಗುವ ಕಥೆಯಿದೆ. ಈ ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಬಯಲಿಗೆಳೆಯಲು ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಕಥೆಯಲ್ಲಿ ಎಂಟ್ರಿ ಕೊಡುತ್ತಾನೆ. ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು ಕಿಲ್ಲರಾ, ಒಬ್ಬ ಸೈಕೋನಾ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋಗುತ್ತಾನೆ ಎನ್ನುವುದು ಚಿತ್ರ ತಂಡದ ಮಾತು.
ಚಿತ್ರದಲ್ಲಿ ಆರ್ಯನ್ ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಅಲೆಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್ ಮಿಶ್ರಾ ಈ ಚಿತ್ರದಲ್ಲಿದ್ದಾರೆ. ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.