Advertisement

ಚಳಿಗಾಲದಲ್ಲಿ ತುಟಿಗಳಸೌಂದರ್ಯ ವರ್ಧನೆ…ಲಿಪ್‌ಬಾಮ್‌ಗಳು

11:22 AM Nov 27, 2020 | |

ಚಳಿಗಾಲದಲ್ಲಿ ತುಟಿಗಳು ಕಪ್ಪಾಗುವುದು, ಒಣಗುವುದು, ಒಡೆಯುವುದು ಸರ್ವೇಸಾಮಾನ್ಯ. ತುಟಿಗಳ ಆರೋಗ್ಯ ಹಾಗೂ ಸೌಂದರ್ಯ ವರ್ಧನೆಗೆ ಮನೆಯಲ್ಲಿಯೇ ತಯಾರಿಸುವ ಬಗೆಬಗೆಯ ನೈಸರ್ಗಿಕ ಲಿಪ್‌ಬಾಮ್‌ಗಳು ಇಲ್ಲಿವೆ.

Advertisement

ಬಾದಾಮಿ ತೈಲದ ಲಿಪ್‌ಬಾಮ್‌
4 ಚಮಚ ಬಾದಾಮಿ ತೈಲ, 2 ಚಮಚ ಜೇನುತುಪ್ಪ , 2 ಚಮಚ ಜೇನುಮೇಣ, 3 ಚಮಚ ಶೀ ಬಟರ್‌, 2 ಚಮಚ ಕೋಕಾಬಟರ್‌.

ವಿಧಾನ: ಮೊದಲು ಜೇನುಮೇಣ, ಶೀ ಬಟರ್‌ ಹಾಗೂ ಕೋಕಾ ಬಟರ್‌ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಒಂದು ಡಬಲ್‌ ಬಾಯ್ಲರ್‌ನಲ್ಲಿ ಅಥವಾ ಒಂದು ಅಗಲ ಬಾಯಿಯ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಬಿಸಿ ಮಾಡಬೇಕು. ತದನಂತರ ಇನ್ನೊಂದು ಚಿಕ್ಕ ಪಾತ್ರೆಯನ್ನು ಅದರಲ್ಲಿಟ್ಟು , ಈ ಮಿಶ್ರಣವನ್ನು ಸೇರಿಸಬೇಕು. ಮಿಶ್ರಣ ಕರಗುತ್ತಾ ಬಂದಾಗ ಬಾದಾಮಿ ತೈಲ ಬೆರೆಸಬೇಕು. ತದನಂತರ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಕಿ ಆರಿಸಬೇಕು. ಇದನ್ನು ಚೆನ್ನಾಗಿ ಬ್ಲೆಂಡ್‌ ಮಾಡಿದರೆ ಬಾದಾಮಿ ತೈಲದ ಲಿಪ್‌ಬಾಮ್‌ ರೆಡಿ. ಶುದ್ಧ ಗಾಜಿನ ಕರಡಿಗೆ ಅಥವಾ ಬಾಟಲ್‌ನಲ್ಲಿ ಸಂಗ್ರಹಿಸಿ ಬಳಸಿದರೆ ನಿತ್ಯೋಪಯೋಗಿ ಲಿಪ್‌ಬಾಮ್‌. ಇದು ತುಟಿ ಒಣಗುವುದನ್ನು , ಒಡೆಯುವುದನ್ನು ತಡೆಗಟ್ಟುವುದಲ್ಲದೆ, ತುಟಿಗಳಿಗೆ ಅವಶ್ಯ ಪೋಷಕಾಶಂಗಳನ್ನು ಒದಗಿಸುತ್ತದೆ. ಯಾವುದೇ ರಾಸಾಯನಿಕಗಳಿಲ್ಲ ಹಾಗೂ ಎಲ್ಲ ಕಾಲಗಳಲ್ಲೂ ಬಳಸಬಹುದಾದ ಲಿಪ್‌ಬಾಮ್‌ ಇದಾಗಿದೆ. ಫ್ರಿಜ್‌ನಲ್ಲಿ ಇಟ್ಟು ಬಳಸಿದರೆ ದೀರ್ಘ‌ಕಾಲ ಉಪಯೋಗಿಸಬಹುದು.

ಕೊಬ್ಬರಿ ಎಣ್ಣೆ ಜೇನುಮೇಣದ ಲಿಪ್‌ಬಾಮ್‌
5 ಚಮಚ ಜೇನುಮೇಣ, 5 ಚಮಚ ಕೊಬ್ಬರಿ ಎಣ್ಣೆ, 1 ಚಮಚ ಜೇನು, 2 ವಿಟಮಿನ್‌ “ಈ’ ಕ್ಯಾಪ್ಸೂಲ್‌ಗ‌ಳು.

ವಿಧಾನ: ಮೊದಲು ಜೇನುಮೇಣವನ್ನು ತುರಿಯಬೇಕು. ಅದನ್ನು ಬಿಸಿ ಮಾಡುವಾಗ ನಂತರದಲ್ಲಿ ಕೊಬ್ಬರಿ ಎಣ್ಣೆ ಸೇರಿಸಬೇಕು. ಕೊನೆಯಲ್ಲಿ ವಿಟಮಿನ್‌ “ಈ’ ತೈಲ (ಕ್ಯಾಪ್ಸೂಲಿನಲ್ಲಿರುವ) ಬೆರೆಸಿ, ಜೇನು ಸೇರಿಸಿ, ಚೆನ್ನಾಗಿ ಮಿಶ್ರಮಾಡಬೇಕು. ಆರಿದ ಬಳಿಕ ಸಣ್ಣ ಟಿನ್‌ ಅಥವಾ ಕರಡಿಗೆಯಲ್ಲಿ ಸಂಗ್ರಹಿಸಿ, ಬಳಸಬೇಕು. ದಿನದ ಸಮಯದಲ್ಲಿ ಮಾತ್ರವಲ್ಲದೆ, ರಾತ್ರಿ ಮಲಗುವಾಗ ತುಟಿಗಳಿಗೆ ಲೇಪಿಸಿದರೆ ತುಟಿಯು ಒಣಗಿ ಒಡೆಯದೇ ತೇವಾಂಶದಿಂದ ಕೂಡಿರುತ್ತದೆ.

Advertisement

ಚಾಕೊಲೇಟ್‌ ಲಿಪ್‌ಬಾಮ್‌
ಬಿಳಿ ಚಾಕೊಲೇಟ್‌ ಚಿಪ್ಸ್‌- 5, ಶೀಬಟರ್‌- 5 ಚಮಚ, ಜೇನು- 1 ಚಮಚ, ಬಾದಾಮಿ ತೈಲ- 1 ಚಮಚ, ಆಲಿವ್‌ ತೈಲ- 1 ಚಮಚ, ತುರಿದ ಜೇನುಮೇಣ- 1 ಚಮಚ, 2 ಚಿಟಿಕೆ ಬೀಟ್‌ಮೀಲ್‌ ಪುಡಿ.

ವಿಧಾನ: ಮೊದಲು ಎಲ್ಲ ತೈಲಗಳನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಒಂದು ಪಾತ್ರೆಯಲ್ಲಿ ಜೇನುಮೇಣ ಬಿಸಿ ಮಾಡಬೇಕು. ಇನ್ನೊಂದು ಪಾತ್ರೆಯಲ್ಲಿ ಚಾಕೊಲೇಟ್‌ ಹುಡಿಯನ್ನು , ಓಟ್‌ ಮೀಲ್‌ ಪುಡಿಯನ್ನು ಬಿಸಿ ಮಾಡಬೇಕು. ತದನಂತರ ಬಿಸಿಮಾಡಿದ ಜೇನುಮೇಣ ಹಾಗೂ ಬಿಸಿಮಾಡಿದ ಚಾಕೋಲೇಟ್‌ ಹುಡಿಯನ್ನು ಬೆರೆಸಬೇಕು. ಬಳಿಕ ವಿವಿಧ ತೈಲ ಹಾಗೂ ಜೇನು ಬೆರೆಸಿ ಕಲಕಬೇಕು. ಗಾಳಿಯಾಡದ ಕರಡಿಗೆಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಟ್ಟು ಬಳಸಬೇಕು.

ರಾಸ್‌³ಬೆರಿ ಲಿಪ್‌ಬಾಮ್‌
10 ಚಮಚ ಕೊಬ್ಬರಿ ಎಣ್ಣೆ , 3 ಚಮಚ ಶೀತಲೀಕರಿಸಿ, ಒಣಗಿಸಿ ಹುಡಿಮಾಡಿದ ರಾಸ್‌³ಬೆರಿ ಹಣ್ಣಿನ ಪುಡಿ, 1 ಚಮಚ ತುರಿದ ಜೇನುಮೇಣ.

ವಿಧಾನ: ಒಣಗಿಸಿದ ರಾಸ್‌³ಬೆರಿ ಹಣ್ಣುಗಳನ್ನೂ ಬಳಸಬಹುದು. ಮೊದಲು ಒಣಗಿಸಿದ ರಾಸ್‌³ಬೆರಿ ಹಣ್ಣುಗಳನ್ನು ನಯವಾಗಿ ಪುಡಿ ಮಾಡಬೇಕು (ಅಥವಾ ಪುಡಿಮಾಡಿದ ರಾಸ್‌³ಬೆರಿ ಹಣ್ಣಿನ ಮಿಶ್ರಣ ಬಳಸಬಹುದು).
ಮೊದಲು ಕೊಬ್ಬರಿ ಎಣ್ಣೆ ಬಿಸಿಮಾಡಿ, ತದನಂತರ ತುರಿದ ಜೇನುಮೇಣ ಬಿಸಿ ಮಾಡಿ ಅದಕ್ಕೆ ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಬೆರೆಸಬೇಕು. ತದನಂತರ ಒಣಗಿಸಿ ಪುಡಿಮಾಡಿದ ರಾಸ್‌³ಬೆರಿ ಹಣ್ಣಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಗಾಜಿನ ಬಾಟಲಲ್ಲಿ ಸಂಗ್ರಹಿಸಿ, ಘನೀಕರಿಸಲು ಫ್ರಿಜ್‌ನಲ್ಲಿಡಬೇಕು.

ಬೀಟ್‌ರೂಟ್‌ ಲಿಪ್‌ಬಾಮ್‌
ಮಧ್ಯಮ ಗಾತ್ರದ ಬೀಟ್‌ರೂಟ್‌, ಕೊಬ್ಬರಿ ಎಣ್ಣೆ 10 ಚಮಚ, ಆಲಿವ್‌ ತೈಲ 10 ಚಮಚ.

ವಿಧಾನ: ಮೊದಲು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದ ಬೀಟ್‌ರೂಟನ್ನು ಸಣ್ಣಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಬೇಕು. ತದನಂತರ ಮಿಕ್ಸರ್‌ನಲ್ಲಿ ನೀರು ಸೇರಿಸದೆ ನಯವಾಗಿ ಅರೆದು ಪೇಸ್ಟ್‌ ತಯಾರಿ ಸಬೇಕು. ತದನಂತರ ಸೋಸಿ ದಪ್ಪ ಬೀಟ್‌ರೂಟ್‌ ರಸವನ್ನು ಒಂದು ಸಣ್ಣ ಕರಡಿಗೆಯಲ್ಲಿ ಸಂಗ್ರಹಿಸಬೇಕು. ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಬೆರೆಸಬೇಕು. ಗಾಢ ಗುಲಾಬಿ ವರ್ಣದ ಲಿಪ್‌ಬಾಮ್‌ ತಯಾರಿಸಬೇಕಾದರೆ ಸ್ವಲ್ಪ ಅಧಿಕ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಬೆರೆಸಿ ಚೆನ್ನಾಗಿ ಕಲಕಬೇಕು. ತದನಂತರ ಆಲಿವ್‌ ತೈಲ ಬೆರೆಸಿ ಚೆನ್ನಾಗಿ ಕಲಕಿ, ಅದನ್ನು ಫ್ರಿಜ್‌ನಲ್ಲಿಡಬೇಕು. ಘನೀಕರಿಸಿದ ಬಳಿಕ ಯಾವುದೇ ರಾಸಾಯನಿಕಗಳಿಲ್ಲದ ಈ ಲಿಪ್‌ಬಾಮ್‌ನ್ನು ನಿತ್ಯವೂ ಬಳಸಿದರೆ ತುಟಿಗಳು ಕಪ್ಪಾಗುವುದು, ಒಡೆಯುವುದು ನಿವಾರಣೆಯಾಗುತ್ತದೆ.

ಆಲಿವ್‌ ತೈಲ ಕೊಬ್ಬರಿಎಣ್ಣೆಯ ಬದಲಾಗಿ ಜೇನುಮೇಣ ಹಾಗೂ ಜೇನುತುಪ್ಪ ಬೆರೆಸಿಯೂ ಇದೇ ರೀತಿಯಲ್ಲಿ ಬೀಟ್‌ರೂಟ್‌ನ ಲಿಪ್‌ಬಾಮ್‌ ತಯಾರಿಸಬಹುದು. ಅಧಿಕ ತೇವಾಂಶವಿರುವುದರಿಂದ ಇದು ಚಳಿಗಾಲದಲ್ಲಿ ತುಟಿಗಳಿಗೆ ಮಾಯಿಶ್ಚರೈಸ್‌ ಮಾಡುವ  ಲಿಪ್‌ಬಾಮ್‌ ಕೂಡ ಹೌದು.

ಗುಲಾಬಿ ದಳಗಳ ಲಿಪ್‌ಬಾಮ್‌
1/4 ಕಪ್‌ ಜೇನುಮೇಣ, 10 ಚಮಚ ಕೊಬ್ಬರಿ ಎಣ್ಣೆ , 1 ಚಮಚ ಆಲಿವ್‌ ತೈಲ, 1/4 ಕಪ್‌ ಕತ್ತರಿಸಿದ ಒಣಗಿದ ಗುಲಾಬಿ ದಳಗಳು, 1/4 ಚಮಚ ಜೇನು.

ವಿಧಾನ: ಮೊದಲು ಹುರಿದ ಜೇನುಮೇಣ, ಕೊಬ್ಬರಿ ಎಣ್ಣೆ ಹಾಗೂ ಆಲಿವ್‌ ತೈಲವನ್ನು ಬೆರೆಸಿ ಬಿಸಿ ಮಾಡಬೇಕು. ಬಿಸಿಯಾಗುತ್ತ ಬಂದಾಗ ಕತ್ತರಿಸಿದ ಒಣಗಿದ ಗುಲಾಬಿ ದಳಗಳನ್ನು ಬೆರೆಸಿ ಚೆನ್ನಾಗಿ ಕಲಕಿ ಮತ್ತೂಮ್ಮೆ ಬಿಸಿ ಮಾಡಬೇಕು. ಗುಲಾಬಿ ದಳಗಳ ಸಣ್ತೀ ಹಾಗೂ ಪರಿಮಳ ಮಿಶ್ರಣವನ್ನು ಸೇರಲು ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ಕೊನೆಯಲ್ಲಿ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಕಬೇಕು. ಗುಲಾಬಿದಳಗಳಿಂದ ಕೂಡಿರುವ ಈ ನೈಸರ್ಗಿಕ ಲಿಪ್‌ಬಾಮ್‌ ನೋಡಲೂ ಅಂದ, ಬಳಸಿದರೂ ಪರಿಣಾಮಕಾರಿ.

ಜೇನು ಹಾಗೂ ನಿಂಬೆಯ ಲಿಪ್‌ಬಾಮ್‌
5 ಚಮಚ ವ್ಯಾಸಲಿನ್‌, 5 ಚಮಚ ನಿಂಬೆರಸ ಹಾಗೂ 5 ಚಮಚ ಜೇನು.

ವಿಧಾನ: ವ್ಯಾಸಲಿನ್‌ನ್ನು ಗ್ಲಾಸ್‌ಬೌಲ್‌ನಲ್ಲಿ ತೆಗೆದುಕೊಂಡು ಬಿಸಿ ಮಾಡಬೇಕು. ಕೊನೆಯಲ್ಲಿ ಇದಕ್ಕೆ ನಿಂಬೆರಸ ಹಾಗೂ ಜೇನು ಬೆರೆಸಿ ಆರಲು ಬಿಡಬೇಕು. ಇದನ್ನು ಒಂದು ಸಣ್ಣ ಕರಡಿಗೆಯಲ್ಲಿ ಹಾಕಿ 10 ನಿಮಿಷ ಫ್ರಿಜ್‌ನಲ್ಲಿಡಬೇಕು. ತದನಂತರ ತೆಗೆದು 4 ಗಂಟೆ ಫ್ರೀಜರ್‌ನಲ್ಲಿಡಬೇಕು. ಹೀಗೆ ತಯಾರಾದ ಜೇನು ಹಾಗೂ ನಿಂಬೆಯ ಲಿಪ್‌ಬಾಮ್‌ ಎಲ್ಲ ಕಾಲಗಳಲ್ಲೂ ಬಳಸಲು ಯೋಗ್ಯ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next