Advertisement
ಹುಡುಗಿಯ ಸೌಂದರ್ಯದ ವ್ಯಾಖ್ಯಾನದಲ್ಲಿ ತುಟಿಯ ರಂಗಿಗೆ ಮಹತ್ವದ ಪಾತ್ರವಿದೆ. ಪ್ರತಿ ಕವಿಯೂ ಹೆಣ್ಣನ್ನು ಹೊಗಳುವಾಗ ಗುಲಾಬಿ ಬಣ್ಣದ, ಜೇನು ಸೂಸುವ ತುಟಿ ಎಂದು ಬರೆಯದೇ ಇರಲಾರ. ಆ ಮಾತುಗಳನ್ನೇ ಬಂಡವಾಳವಾಗಿಟ್ಟುಕೊಂಡು ನಾನಾ ಬಣ್ಣದ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಮೊದಲೆಲ್ಲ ತುಟಿಯ ನೈಜ ಬಣ್ಣಕ್ಕೆ ಹೋಲಿಕೆಯಾಗುವ ಗುಲಾಬಿ, ಕೆಂಪು ಬಣ್ಣಗಳು ಮಾತ್ರ ಲಭ್ಯವಿದ್ದವು. ಆನಂತರ ಬಣ್ಣಗಳ ಆಯ್ಕೆಯ ವ್ಯಾಪ್ತಿ ಹೆಚ್ಚಿತು. ಈಗಂತೂ ಡುಯಲ್ ಕಲರ್ಡ್ ಲಿಪ್‌ಸ್ಟಿಕ್‌ಗಳದ್ದೇ ಪಾರುಪತ್ಯ.
ಹೆಸರೇ ಹೇಳುವಂತೆ ಇದು ಎರಡು ಬಣ್ಣಗಳುಳ್ಳ ಲಿಪ್‌ಸ್ಟಿಕ್. ಲಿಪ್‌ಸ್ಟಿಕ್‌ನ ಎರಡೂ ಬದಿಗಳಲ್ಲಿ ಎರಡು ಬೇರೆ ಬೇರೆ ಬಣ್ಣಗಳಿರುತ್ತವೆ. ಮೇಕ್‌ಅಪ್ ಆರ್ಟಿಸ್ಟ್‌ಗಳು ಬಣ್ಣಗಳ ಜೊತೆ ಪ್ರಯೋಗ ಮಾಡಿದ ಫಲವಾಗಿ ಈ ಟ್ರೆಂಡ್ ಸೃಷ್ಟಿಯಾಯಿತು. ಈ ಟ್ರೆಂಡ್ ಫಾಲೋ ಮಾಡಲು ಬಹಳಷ್ಟು ಲಿಪ್‌ಸ್ಟಿಕ್‌ಗಳು ಬೇಕಾಗಿಲ್ಲ. ಗುಲಾಬಿ ಮತ್ತು ಕಿತ್ತಳೆ ಬಣ್ಣದ ಲಿಪ್‌ಸ್ಟಿಕ್‌ಗಳಿದ್ದರೆ ಸಾಕು. ಬಣ್ಣ ಹಚ್ಚೋದು ಹೇಗೆ?
ತುಟಿಯ ಮೇಲೆ ಎರಡೆರಡು ಬಣ್ಣಗಳನ್ನು ಹಚ್ಚುವುದು ಹೇಗೆ ಅಂದಿರಾ? ತುಂಬಾ ಸುಲಭ! ಮೇಲಿನ ತುಟಿಗೆ ಒಂದು ಬಣ್ಣ ಮತ್ತು ಕೆಳಗಿನ ತುಟಿಗೆ ಇನ್ನೊಂದು ಬಣ್ಣ ಹಚ್ಚಿದರಾಯಿತು. ಸಾಮಾನ್ಯವಾಗಿ, ಕೆಂಪು ಬಣ್ಣದ ಜೊತೆ ಗುಲಾಬಿ, ನೀಲಿ ಜೊತೆ ಹಸಿರು ಬಣ್ಣಗಳನ್ನು ಹಚ್ಚುತ್ತಾರೆ. ಹಸಿರಿನ ಜೊತೆ ಕೆಂಪು, ನೀಲಿ ಜೊತೆ ಗುಲಾಬಿ ಬಣ್ಣಗಳನ್ನು ಬಳಸುವುದಿಲ್ಲ. ಒಂದಕ್ಕೊಂದು ಹತ್ತಿರವಿರುವ ಬಣ್ಣಗಳನ್ನು ಹಚ್ಚಬಹುದು. ಶೇಡಿಂಗ್ ಟೆಕ್ನಿಕ್ ತಿಳಿದಿದ್ದರೆ ಬಣ್ಣಗಳ ಜೊತೆ ಆಟ ಆಡಬಹುದು.
Related Articles
ಇದು ಬ್ರಹ್ಮ ವಿದ್ಯೆಯೇನಲ್ಲ. ರಾಕೆಟ್ ಸೈನ್ಸೂ ಅಲ್ಲ. ಬಣ್ಣಗಳ ಚಮತ್ಕಾರವನ್ನು ಯುಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ನೋಡಿ ಕಲಿಯಬಹುದು. ಪ್ರೊಫೆಷನಲ್ ಮೇಕ್‌ಅಪ್ ಆರ್ಟಿಸ್ಟ್ ಗಳು ಇದನ್ನು ಸರಳವಾಗಿ ಹೇಳಿಕೊಡುತ್ತಾರೆ. ಒಂದೆರಡು ಬಾರಿ ಮನೆಯಲ್ಲಿ ಪ್ರಯೋಗ ಮಾಡಿ, ಚೆನ್ನಾಗಿ ಕಾಣಿಸುತ್ತೋ ಇಲ್ಲವೋ ಅಂತ ನೋಡಿಕೊಂಡು ನಂತರ ಮನೆಯಿಂದಾಚೆ ಹೋಗುವಾಗ ಧೈರ್ಯವಾಗಿ ಹಚ್ಚಿ.
Advertisement
ಒಂದರಿಂದ ಎರಡು!ನ್ಯೂಡ್ ಶೇಡ್ ಜೊತೆ ಕಂದು ಬಣ್ಣ, ಮರೂನ್, ಸ್ವರ್ಣ (ಗೋಲ್ಡನ್ ಕಲರ್) ಮತ್ತು ಇತರ ಗಾಢ ಬಣ್ಣಗಳನ್ನು ಹಚ್ಚಬಹುದು. ಇಲ್ಲವೆ ಒಂದೇ ಬಣ್ಣದ ಲಿಪ್‌ಸ್ಟಿಕ್‌ನಿಂದಲೂ ಡುಯಲ್ ಲಿಪ್ ಕಲರ್ ಮಾಡಬಹುದು. ಉದಾಹರಣೆಗೆ ಮೇಲಿನ ತುಟಿಗೆ ತಿಳಿಯಾಗಿ ಕೆಂಪು ಬಣ್ಣ ಹಚ್ಚಿ, ಕೆಳಗಿನ ತುಟಿಗೆ ಗಾಢವಾಗಿ ಹಚ್ಚಿ ಈ ಸ್ಟೈಲ್‌ಅನ್ನು ಅನುಕರಿಸಬಹುದು. ಡುಯಲ್ ಲಿಪ್ ಕಲರ್ ಸ್ಟೈಲ್ನಲ್ಲಿ ಬೇರೊಂದು ಬಣ್ಣದ ಲಿಪ್ ಲೈನರ್ ನಿಂದ ತುಟಿಯ ಸುತ್ತ ಔಟ್‌ಲೆನ್ ಬಿಡಿಸುವಂತಿಲ್ಲ. ಒಂದು ವೇಳೆ ಬಿಡಿಸಲೇ ಬೇಕು ಎಂದರೆ ಯಾವ ಬಣ್ಣದ ಲಿಪ್‌ಸ್ಟಿಕ್ ಹಚ್ಚುವಿರೋ ಅದೇ ಬಣ್ಣದ ಔಟ್ ಲೈನರ್ ಬಳಸಿ. ಅಂದರೆ ಮೇಲಿನ ತುಟಿಗೆ ತಿಳಿಗೆಂಪು ಬಣ್ಣದ ಔಟ್‌ಲೆನ್, ಕೆಳಗಿನ ತುಟಿಗೆ ಗಾಢ ಕೆಂಪು ಬಣ್ಣದ ಔಟ್‌ಲೆನ್. ಮ್ಯಾಚಿಂಗ್ ಮಾಡ್ಬೇಡಿ!
ಡ್ರೆಸ್‌ಗೆ ಮ್ಯಾಚ್ ಆಗುವಂತೆ ಬಣ್ಣಗಳನ್ನು ಬಳಸುವಂತಿಲ್ಲ. ಬದಲಿಗೆ, ಕಾಂಸ್ಟ್ ಕಲರ್ ಹಚ್ಚಿ. ಅಂದರೆ, ತಿಳಿ ಬಣ್ಣದ ಡ್ರೆಸ್‌ಗೆ ಗಾಢ ಬಣ್ಣದ ಲಿಪ್‌ಸ್ಟಿಕ್ ಬಳಸಬೇಕು. ಅಂತೆಯೇ ಗಾಢ ಬಣ್ಣದ ಡ್ರೆಸ್ ಜೊತೆಗೆ ತಿಳಿಯಾದ ಲಿಪ್‌ಸ್ಟಿಕ್ ಬಳಸಬೇಕು. ತುಟಿಯ ಬಣ್ಣಕ್ಕೆ ಲಿಪ್‌ಸ್ಟಿಕ್ ಮ್ಯಾಚ್ ಮಾಡಿದರೆ ಉಡುಪೂ ಎದ್ದು ಕಾಣುವುದಿಲ್ಲ, ತುಟಿಯ ಬಣ್ಣಕ್ಕೂ ಮೆರಗು ಇರುವುದಿಲ್ಲ. ಇನ್ನೊಂದು ವಿಷಯ, ಮೇಲಿನ ತುಟಿಗೆ ಯಾವ ಬಗೆಯ ಲಿಪ್‌ಸ್ಟಿಕ್ ಬಳಸುತ್ತಿರೋ, ಅದೇ ಬಗೆಯ ಲಿಪ್‌ಸ್ಟಿಕ್ ಅನ್ನು ಕೆಳಗಿನ ತುಟಿಗೆ ಬಳಸಬೇಕು. ಉದಾಹರಣೆಗೆ ತಿಳಿ ಕಂದು ಬಣ್ಣದ ಮ್ಯಾಟ್ ಲಿಪ್‌ಸ್ಟಿಕ್‌ಅನ್ನು ಮೇಲಿನ ತುಟಿಗೆ ಹಚ್ಚಿದರೆ ಗಾಢವಾದ ಕಂದು ಬಣ್ಣದ ಮ್ಯಾಟ್ ಲಿಪ್‌ಸ್ಟಿಕ್‌ಅನ್ನು ಕೆಳಗಿನ ತುಟಿಗೂ ಹಚ್ಚಬೇಕು. ಒಂದಕ್ಕೆ ಲಿಕ್ವಿಡ್, ಇನ್ನೊಂದಕ್ಕೆ ಪೌಡರ್ ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ದಲ್ಲಿ, ಮಾತನಾಡುವಾಗ, ತಿನ್ನುವಾಗ, ಕುಡಿಯುವಾಗ ಬಣ್ಣಗಳು ಒಂದಕ್ಕೊಂದು ಉಜ್ಜಿ ಬೇರೊಂದು ಬಣ್ಣವಾಗಿಬಿಡುತ್ತದೆ! ಅದಿತಿಮಾನಸ ಟಿ. ಎಸ್.