Advertisement
ರಷ್ಯಾದಲ್ಲಿ ನಡೆದ 2018ರ ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದಲ್ಲಿ ಕ್ರೊವೇಶಿಯ ವಿರುದ್ಧ ಅನುಭವಿಸಿದ 3-0 ಸೋಲಿಗೆ ಆರ್ಜೆಂಟೀನಾ ಇಷ್ಟೇ ಅಂತರದಿಂದ ಸೇಡು ತೀರಿಸಿಕೊಂಡದ್ದು ವಿಶೇಷ. ಜತೆಗೆ ಮೊದಲ ಪಂದ್ಯದಲ್ಲೇ ಸಾಮಾನ್ಯ ತಂಡವಾದ ಸೌದಿ ಅರೇಬಿಯಕ್ಕೆ ಸೋತು ಟೀಕೆಗೊಳಗಾದ ತಂಡವೊಂದು ಈ ಹಂತಕ್ಕೆ ಏರಿದ್ದು ಕೂಡ ವಿಶೇಷ. ಹಾಲಿ ಚಾಂಪಿಯನ್ ಫ್ರಾನ್ಸ್ ಹಾಗೂ ಇದೇ ಮೊದಲ ಸಲ ಸೆಮಿಫೈನಲ್‌ಗೆ ನೆಗೆದಿರುವ ಮೊರೊಕ್ಕೊ ನಡುವಿನ ವಿಜೇತ ತಂಡವನ್ನು ರವಿವಾರದ ಪ್ರಶಸ್ತಿ ಸಮರದಲ್ಲಿ ಆರ್ಜೆಂಟೀನಾ ಎದುರಿಸಲಿದೆ.
ಆರ್ಜೆಂಟೀನಾ ಆಡಿದ ರೀತಿ ನೋಡಿದರೆ, ನಾಯಕ ಲಿಯೋನೆಲ್ ಮೆಸ್ಸಿ ಅವರ “ಕಪ್’ ಬರ ನೀಗುವ ಸಮಯ ಸನ್ನಿಹಿತವಾದಂತೆ ಗೋಚರಿಸುತ್ತಿದೆ. ಸ್ವತಃ ಮುಂಚೂಣಿಯಲ್ಲಿ ನಿಂತ ಮೆಸ್ಸಿ 34ನೇ ನಿಮಿಷದಲ್ಲೇ ಪೆನಾಲ್ಟಿ ಮೂಲಕ ಗೋಲಿನ ಖಾತೆ ತೆರೆದು ತಂಡದಲ್ಲಿ ಸ್ಫೂರ್ತಿಯ ಅಲೆಯನ್ನೆಬ್ಬಿಸಿದರು. ಸರ್ವಾಧಿಕ 25 ಪಂದ್ಯಗಳ ವಿಶ್ವಕಪ್ ದಾಖಲೆಯನ್ನು ಸರಿದೂಗಿಸಿದ ಈ ಮುಖಾಮುಖಿ 35 ವರ್ಷದ ಮೆಸ್ಸಿ, ಜೀವಮಾನದಲ್ಲೇ ಅತ್ಯುತ್ತಮ ಆಟವಾಡಿದರು ಎಂಬುದನ್ನು ಒಪ್ಪಲೇಬೇಕಾಗುತ್ತದೆ. ತಂಡದ ಗೆಲುವಿಗಾಗಿ ಅವರು ಸರ್ವಸ್ವವನ್ನೂ ಧಾರೆ ಎರೆದಂತಿತ್ತು. ಅಲ್ವರೇಜ್ ಅಸಾಮಾನ್ಯ ಆಟ
ಮೆಸ್ಸಿ ಮಾಯಾಜಾಲ ಬೀಸಿದ ಬಳಿಕ ಸ್ಟ್ರೈಕರ್ ಜೂಲಿಯನ್ ಅಲ್ವರೇಜ್ ಅಸಾಮಾನ್ಯ ಸಾಹಸಗೈದರು. 39ನೇ ಹಾಗೂ 69ನೇ ನಿಮಿಷದಲ್ಲಿ ಎರಡು ಗೋಲು ಬಾರಿಸುವ ಮೂಲಕ ಆರ್ಜೆಂಟೀನಾದ ಜಯಭೇರಿ ಮೊಳಗಿಸಿದರು. ಹೀಗೆ 9ನೇ ಮತ್ತು 10ನೇ ನಂಬರ್ ಜೆರ್ಸಿಧಾರಿಗಳು ಮೊದಲ ಸೆಮಿಫೈನಲ್ ಪಂದ್ಯದ ಹೀರೋಗಳಾಗಿ ಮೂಡಿಬಂದರು.
Related Articles
Advertisement
ಫೈನಲ್ ಗುರಿ ಈಡೇರಿದೆ“ನಾವು ಫೈನಲ್‌ಗೆ ನೆಗೆದಿದ್ದೇವೆ. ನಮಗೆ ಇದೇ ಬೇಕಿತ್ತು. ಅಭಿಮಾನಿಗಳ, ನಮ್ಮ ಕುಟುಂಬದವರ ಸಂಭ್ರಮ, ಪ್ರೋತ್ಸಾಹಕ್ಕೆ ಋಣಿಯಾಗಿದ್ದೇವೆ’ ಎಂಬುದಾಗಿ ಆರ್ಜೆಂಟೀನಾವನ್ನು ಎರಡನೇ ಸಲ ಫೈನಲ್‌ಗೆ ಕೊಂಡೊಯ್ದ ನಾಯಕ ಮೆಸ್ಸಿ ಭಾವುಕರಾಗಿ ನುಡಿದರು. 2014ರಲ್ಲೂ ಮೆಸ್ಸಿ ಪಡೆ ಫೈನಲ್ ಪ್ರವೇಶಿಸಿತ್ತು. ಆದರೆ ಅಲ್ಲಿ ಜರ್ಮನಿಗೆ ಶರಣಾಗಿ ಪ್ರಶಸ್ತಿ ವಂಚಿತವಾಗಿತ್ತು. ಟ್ರೋಫಿ ಗೆಲ್ಲುವ ಕೊನೆಯ ಅವಕಾಶವನ್ನು ಮೆಸ್ಸಿ ಯಶಸ್ವಿಗೊಳಿಸಬಲ್ಲರೇ ಎಂಬುದು ಅಭಿಮಾನಿಗಳ ದೊಡ್ಡ ನಿರೀಕ್ಷೆ. ಮೆಸ್ಸಿ ಮೈಲುಗಲ್ಲು
– ವಿಶ್ವಕಪ್ ಒಂದರಲ್ಲಿ ಅತ್ಯಧಿಕ 5 ಗೋಲು ಹೊಡೆದ ಅತೀ ಹಿರಿಯ ಆಟಗಾರ (35 ವರ್ಷ).
– 4 ಬೇರೆ ಬೇರೆ ವಿಶ್ವಕಪ್‌ಗ್ಳಲ್ಲಿ ಗೋಲು ಬಾರಿಸುವ ಜತೆಗೆ ಗೋಲಿಗೆ ನೆರವು ನೀಡಿದ ಏಕೈಕ ಆಟಗಾರ.
– ವಿಶ್ವಕಪ್ ಕೂಟವೊಂದರ ಪ್ರಿ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಗೋಲು ಹೊಡೆದ 6ನೇ ಆಟಗಾರ. ಉಳಿದವರೆಂದರೆ ಸಾಲ್ವಟೋರ್ ಶಿಲಾಸಿ (1990), ರಾಬರ್ಟೊ ಬ್ಯಾಗಿಯೊ (1994), ರಿಸ್ಟೊ ಸ್ಟೋಕೋವ್ (1994), ಡೇವರ್ ಸುಕರ್ (1998) ಮತ್ತು ವೆಸ್ಲಿ ಸ್ನೀಜರ್ (2010).
– ವಿಶ್ವಕಪ್‌ನಲ್ಲಿ ಆರ್ಜೆಂಟೀನಾ ಪರ ಅತ್ಯಧಿಕ 11 ಗೋಲು ಹೊಡೆದ ದಾಖಲೆ. ಗ್ಯಾಬ್ರಿಯಲ್ ಬಟಿಸ್ಟುಟ ಅವರ 10 ಗೋಲುಗಳ ದಾಖಲೆ ಪತನ.
– ವಿಶ್ವಕಪ್‌ನಲ್ಲಿ ತಂಡವೊಂದನ್ನು ಅತ್ಯಧಿಕ 18 ಸಲ ಮುನ್ನಡೆಸಿದ ದಾಖಲೆ.