Advertisement

ಮತದಾರ ಪಟ್ಟಿಗೆ ಆಧಾರ್‌ ಜೋಡಣೆಗೆ ಚಾಲನೆ

06:24 PM Aug 02, 2022 | Team Udayavani |

ಬೆಳಗಾವಿ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ 2023ರ ಮಾರ್ಚ್‌ ಅಂತ್ಯಕ್ಕೆ ಮತದಾರರ ಪಟ್ಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕಾರ್ಯ ಪ್ರತಿಶತ 100 ರಷ್ಟು ಪೂರ್ಣಗೊಳಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಡಳಿತ, ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ನಡೆದ ಮತದಾರರ ಆಧಾರ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಣೆ ಕಾರ್ಯ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಬಿಎಲ್‌ ಒಗಳು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾರ್ಮ್ 6,7 ಹಾಗೂ 8 ಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನಂತರ ಆನ್‌ ಲೈನ್‌ ಹಾಗೂ ಆಫ್‌ ಲೈನ್‌ ಮೂಲಕ ಫಾರ್ಮ್ 6(ಬಿ) ಯಲ್ಲಿ ಮತದಾರರ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕಾರ್ಯಕ್ಕೆ ಸಿದ್ಧರಾಗಬೇಕು ಎಂದರು.

ಆಧಾರ ಸಂಖ್ಯೆಯನ್ನು ಜೋಡಿಸುವ ಕಾರ್ಯದಲ್ಲಿ ಯಾವುದೇ ರೀತಿಯ ಮಾಹಿತಿ, ದಾಖಲಾತಿ ಬಹಿರಂಗವಾದರೆ ಅಧಿಕಾರಿ, ಸಿಬ್ಬಂದಿಗಳು ಕಾನೂನು ರೀತಿಯಲ್ಲಿ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಮುತುವರ್ಜಿಯಿಂದ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರು, ಪಾರದರ್ಶಕ ಚುನಾವಣಾ ಪ್ರಕ್ರಿಯೆ ನಡೆಸಲು ಮತದಾರರ ಪಟ್ಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದು ಉತ್ತಮ ಕಾರ್ಯವಾಗಿದೆ. ಚುನಾವಣೆ ಸಮಯದಲ್ಲಿ ವೋಟರ್‌ ಐಡಿ ರದ್ದಾಗಿದೆ ಎಂದು ದೂರುವುದಕ್ಕಿಂತ ಚುನಾವಣಾ ಆಯೋಗದ ಸೂಚನೆಯಂತೆ ಸಾರ್ವಜನಿಕರು ನಿಯಮಾನುಸಾರ ಅಧಿಕೃತ ಮತಚೀಟಿ ಹೊಂದಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಂದ ನಂದಗಾವಿ ಅವರು ಮಾತನಾಡಿ ವೋಟರ್‌ ಐಡಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕಾರ್ಯ ಉತ್ತಮವಾಗಿದೆ. ಅಧಿಕೃತ ಮತದಾರರ ಗುರುತಿನ ಕಾರ್ಡ್‌ದೊಂದಿಗೆ ಮತದಾರರು ತಮ್ಮ ಮತ ಚಲಾಯಿಸಲು ಈ ಪ್ರಕ್ರಿಯೆ ಸಹಾಯಕವಾಗಲಿದೆ ಎಂದು ಹೇಳಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಅವರು ಮತದಾರರ ಪಟ್ಟಿಗೆ ಆಧಾರ್‌ ಸಂಖ್ಯೆಯನ್ನು ಸೇರಿಸುವ ಮೂಲಕ ನಕಲಿ ವೋಟರ್‌ ಐಡಿಗಳನ್ನು ತಡೆಗಟ್ಟಬಹುದು. ಮತ ಪ್ರಕ್ರಿಯೆಯನ್ನೂ ಪಾರದರ್ಶಕತೆಯೊಂದಿಗೆ ನಡೆಸಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ಮಹಾವೀರ ಗಣಿ ಉಪಸ್ಥಿತರಿದ್ದರು. ಮಹಾನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸ್ವಾಗತಿಸಿದರು, ಸುನೀತಾ ದೇಸಾಯಿ ನಿರೂಪಿಸಿದರು, ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಪ್ರಶಾಂತ ಹನಗಂಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next