Advertisement
ಮೈಸೂರಿನಲ್ಲಿ 81ನೇ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಅವರು ಶ್ರೀ ಕೃಷ್ಣಧಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸೆ.14ರವರೆಗೆ ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವುದರಿಂದ ಈ ಅವಧಿಯಲ್ಲಿ ಮೈಸೂರಿನಿಂದ ಹೊರಗೆ ಬರುವಂತಿಲ್ಲ. ಆದ್ದರಿಂದ ಮೈಸೂರಿನ ಒಂದು ಸಾರ್ವಜನಿಕ ಕಟ್ಟಡದಲ್ಲಿ ಶಾಂತ ವಾತಾವರಣದಲ್ಲಿ ಕೆಲವೇ ಪ್ರಜ್ಞಾವಂತರು ಸೇರಿ ಸಂವಾದ ನಡೆಸಬಹುದು. ಇಲ್ಲವಾದರೆ, ಚಾತುರ್ಮಾಸ್ಯ ಮುಗಿದ ನಂತರ ಉಡುಪಿ ಅಥವಾ ಬೆಂಗಳೂರಿನಲ್ಲಿ ಸಂವಾದಕ್ಕೆ ಸಿದ್ಧರಿರುವುದಾಗಿ ತಿಳಿಸಿದರು.
Related Articles
Advertisement
ಹಿಂದು ಧರ್ಮ ಬಲಿಷ್ಠಗೊಳಿಸಿ: ವಿಷ್ಣು, ಶಿವ, ಗಣಪತಿ, ದುರ್ಗೆ ಇವರೆಲ್ಲ ಹಿಂದೂ ದೇವರು, ಇವರನ್ನು ಒಪ್ಪಿದ ಮೇಲೆ ನಾವು ಹಿಂದೂಗಳಲ್ಲ ಎಂದರೆ ಹೇಗೆ? ಹಿಂದೂ ದೇವರನ್ನು ಒಪ್ಪುವವರೆಲ್ಲ ಹಿಂದೂಗಳೇ, ಹಿಂದೂ ಧರ್ಮದಿಂದ ಬೇರೆಯಾದರೆ ಲಿಂಗಾಯಿತರಿಗೆ ಹಾನಿ. ಅನಾದಿ ಕಾಲದಲ್ಲಿ ಎಲ್ಲರೂ ಹಿಂದೂಗಳೇ ಆಗಿದ್ದರು. ಬ್ರಿಟಿಷರ ಒಡೆದಾಳುವ ನೀತಿಯಿಂದಾಗಿ ಬೌದ್ಧ, ಜೈನ, ಸಿಖ್ಖರು ಹಿಂದೂ ಧರ್ಮದಿಂದ ಬೇರಾಗಿದ್ದಾರೆ. ಇವರೆಲ್ಲ ನೀವು ಒಪ್ಪಿದ್ದರೂ ಹಿಂದೂಗಳೇ, ಹಿಂದೂ ಧರ್ಮದಿಂದ ಹೊರಹೋದವರು ಮತ್ತೆ ಬಂದು ಸೇರಿ ಹಿಂದೂ ಧರ್ಮವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಮನವಿ ಮಾಡಿದರು.
ಶಿವನ ಆರಾಧಕರೆಲ್ಲರೂ ಹಿಂದೂಗಳು: ಎಷ್ಟೇ ಅಭಿಪ್ರಾಯ ಭೇದವಿದ್ದರೂ ಶಿವನನ್ನು ಆರಾಧಿಸುವ ಶಿವ ಪಂಚಾಕ್ಷರಿ ಜಪವನ್ನು ಮಾಡುವ ಲಿಂಗಾಯಿತರು ಹಿಂದುಗಳಾಗದಿರಲು ಸಾಧ್ಯವೇ ಎಂದು ಪ್ರಶ್ನಿಸಿದ ಪೇಜವಾರ ಶ್ರೀಗಳು, ಜಾತಿಭೇದ ಒಪ್ಪದಿದ್ದರೂ ಶಿವನ ಆರಾಧನೆ ಮಾಡುತ್ತಿದ್ದರೆ ಅವರು ಹಿಂದೂಗಳೇ. ಜಾತಿಭೇದವನ್ನು ಒಪ್ಪದ ಹಿಂದೂಗಳು ಸಾಕಷ್ಟಿದ್ದಾರೆ. ರಾಮಕೃಷ್ಣ ಆಶ್ರಮ, ಆರ್ಯ ಸಮಾಜ, ಸ್ವಾಮಿ ನಾರಾಯಣಗುರು ಸಂಪ್ರದಾಯ, ಕೇರಳದ ಈಡಿಗರು, ಕರ್ನಾಟಕದ ಬಿಲ್ಲವರು ಮುಂತಾದ ಕೋಟಿ ಕೋಟಿ ಜನರು ಹಿಂದೂಗಳಾಗಿದ್ದರೂ ಜಾತಿಭೇದವನ್ನು ಒಪ್ಪುವುದಿಲ್ಲ ಎಂಬುದನ್ನು ತಾವು ಗಮನಿಸಬೇಕು.
ವೀರಶೈವರು ಮತ್ತು ಇತರ ಹಿಂದೂಗಳ ಶಿವನ ಸ್ವರೂಪವನ್ನು ಬೇರೆ ಬೇರೆಯೆಂದು ತಾವು ಹೇಳಬಹುದು, ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತದ ಅನುಯಾಯಿಗಳು ಒಪ್ಪುವ ಪರಬ್ರಹ್ಮನ ಸ್ವರೂಪ ಬೇರೆ ಬೇರೆಯೇ ಆಗಿದ್ದರೂ ಮಧ್ವರು, ರಾಮಾನುಜರೂ ಪರಬ್ರಹ್ಮನು ಸಗುಣ ಸಾಕಾರನಾಗಿದ್ದರೆ ಶಂಕರರು ಪರಬ್ರಹ್ಮನು ನಿರ್ಗುಣ ನಿರಾಕಾರನಾಗಿದ್ದಾನೆಂದು ಪ್ರತಿಪಾದಿಸಿದ್ದಾರೆ.
ಒಬ್ಬರು ಜೀವ ಬ್ರಹ್ಮನಿಗೆ ಭೇದವನ್ನು ಒಪ್ಪಿದಿದ್ದರೆ, ಇನ್ನೊಬ್ಬರು ಆ ಭೇದವನ್ನು ಒಪ್ಪಿದ್ದಾರೆ. ಒಬ್ಬರು ಜಗತ್ತು ಸತ್ಯವೆಂದರೆ, ಇನ್ನೊಬ್ಬರು ಮಿಥ್ಯವೆಂದಿದ್ದಾರೆ. ಎರಡೂ ಮತಗಳಲ್ಲಿಯೂ ಬಹಳಷ್ಟು ವ್ಯತ್ಯಾಸವಿದ್ದರೂ ಇವರೆಲ್ಲರೂ ವೈದಿಕರು ಹಾಗೂ ಹಿಂದೂಗಳೇ ಆಗಿದ್ದಾರೆ. ಅದರಂತೆ ಲಿಂಗಾಯಿತು-ವೀರಶೈವರಿಬ್ಬರೂ ಒಪ್ಪಿದ ಶಿವನ ಸ್ವರೂಪದಲ್ಲಿ ವ್ಯತ್ಯಾಸವಿದ್ದರೂ ಇಬ್ಬರೂ ಒಂದೇ ಸಂಪ್ರದಾಯಕ್ಕೆ ಸೇರಿದ್ದಾರೆ ಮತ್ತು ಎಲ್ಲರೂ ಹಿಂದೂಗಳೇ ಆಗಿದ್ದಾರೆ ಎಂಬುದನ್ನು ಎಲ್ಲಿ ಬೇಕಾದರೂ ಸಾಧಿಸಲು ಸಿದ್ಧನಿದ್ದೇನೆ ಎಂದರು.