ಲಿಂಗಸುಗೂರು: ಸರ್ಕಾರ ರೈತರು, ಜಾನುವಾರು ಸಾಕಾಣಿಕೆದಾರರ ಅನುಕೂಲಕ್ಕಾಗಿ ಹಲವು ಪರಿಕರಗಳನ್ನು ಒದಗಿಸಿದೆ. ಆದರೆ ಇಲ್ಲಿನ ಅಧಿಕಾರಿಗಳು ಅವುಗಳನ್ನು ಅರ್ಹರಿಗೆ ವಿತರಿಸದೇ ಇರುವುದರಿಂದ ಹಲವು ವರ್ಷದಿಂದ ಪಟ್ಟಣದ ಪಶು ಆಸ್ಪತ್ರೆ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ.
ಪಟ್ಟಣದ ಪಶುಪಾಲನೆ ಇಲಾಖೆಗೆ ರೈತರಿಗೆ ವಿತರಿಸಲು ಮೇವು ಕೊರೆಯುವ ಯಂತ್ರ, ಆಯಿಲ್ ಇಂಜಿನ್, ಮೇವಿನ ಬೀಜ ಸೇರಿ ಹಲವು ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಅರ್ಹರಿಗೆ ಹಂಚಿಕೆ ಮಾಡಬೇಕಾದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ರಾಚಪ್ಪ ಅವರ ನಿರ್ಲಕ್ಷ್ಯದಿಂದ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ. ಇದಲ್ಲದೇ ಗ್ರಾಮೀಣ ಭಾಗದ ಪಶು ಆಸ್ಪತ್ರೆಗೆ ಮಂಜೂರಾಗಿರುವ ಸಾಮಾಗ್ರಿಗಳು ಕೂಡ ತಾಲೂಕು ಕೇಂದ್ರ ಸ್ಥಾನದಲ್ಲಿ ಕೊಳೆಯುತ್ತಿವೆ.
ರಾಶಿ ರಾಶಿ ಸಾಮಗ್ರಿಗಳು: ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಹಳೆಯ ಎರಡು ಕಟ್ಟಡ ಮತ್ತು ಹೊಸ ಕಟ್ಟಡದ ತುಂಬಾ ಮೇವು ಕೊರೆಯುವ ಯಂತ್ರ, ಇಂಜಿನ್, ಮೇವಿನ ಬೀಜ ಸೇರಿ ಇತರೆ ಕೃಷಿ ಪರಿಕರಗಳು ನಿರುಪಯುಕ್ತವಾಗಿ ಬಿದ್ದಿವೆ. 50 ಸಾವಿರ ರೂ. ಮೌಲ್ಯದ ಕಿರ್ಲೋಸ್ಕರ್ ಕಂಪನಿಯ ಎರಡು ಆಯಿಲ್ ಎಂಜಿನ್‌ಗಳ ಬಾಕ್ಸ್ ಗಳಿವೆ. ಇವುಗಳನ್ನು ರೈತರಿಗೂ ಹಂಚಿಕೆ ಮಾಡದೇ ಇತ್ತ ಸರ್ಕಾರಕ್ಕೂ ಮರಳಿಸದೇ ಹಾಗೇ ಇಟ್ಟಿರುವ ಉದ್ದೇಶ ತಿಳಿಯದಾಗಿದೆ.
2014-15ನೇ ಸಾಲಿನಲ್ಲಿ ತಾಯಿ ಕೋಳಿ ಘಟಕ ಮಂಜೂರಾಗಿದೆ. ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದ್ದು, ಘಟಕದ ಸಾಮಾಗ್ರಿಗಳು ಬಂದಿದ್ದರೂ ಸಹ ಘಟಕವನ್ನು ಪ್ರಾರಂಭಿಸುವಲ್ಲಿ ಇಲ್ಲಿನ ಅಧಿಕಾರಿಗಳು ವಿಫಲವಾಗಿದ್ದಾರೆ. ಪಶು ಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿಯಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಮುತ್ತಿಗೆ-ಆಕ್ರೋಶ: ಪಶು ಆಸ್ಪತ್ರೆ ಗೋದಾಮಿನಲ್ಲಿ ಅನೇಕ ವರ್ಷಗಳಿಂದ ಕೃಷಿ ಪರಿಕರಗಳನ್ನು ದಾಸ್ತಾನು ಮಾಡಿರುವ ವಿಷಯ ತಿಳಿದ ರೈತ ಸಂಘದ ಮುಖಂಡರು ಆಸ್ಪತ್ರೆಗೆ ದೌಡಾಯಿಸಿ ಮೂರೂ ಕಟ್ಟಡಗಳ ಬೀಗ ತೆಗೆಯುವಂತೆ ಒತ್ತಾಯಿಸಿದರು. ಒತ್ತಡಕ್ಕೆ ಮಣಿದ ಸಿಬ್ಬಂದಿ ಬೀಗ ತೆಗೆದರು. ಕಟ್ಟಡದೊಳಗೆ ಕಣ್ಣಾಯಿಸಿದಲ್ಲೆಲ್ಲ ಸಾಮಗ್ರಿಗಳನ್ನು ಕಂಡು ರೈತರು ದಂಗಾದರು.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಮುಖಂಡ ಅಮರಣ್ಣ ಗುಡಿಹಾಳ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ರಾಚಪ್ಪ ಅವರು ಕಳೆದ 25 ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ರೈತರಿಗಾಗಿ ಪರಿಕರಗಳನ್ನು ಮಂಜೂರುಗೊಳಿಸಿದರೂ ರಾಚಪ್ಪ ಅವರು ರೈತರಿಗೆ ಹಂಚಿಕೆ ಮಾಡದೇ ಗೋದಾಮಿನಲ್ಲಿ ಹಾಳಾಗುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ರೈತರಿಗೆ ಯೋಜನೆಯ ಲಾಭ ಸಿಗದಂತೆ ಮೋಸ ಮಾಡಿದ್ದಾರೆ. ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಕಚೇರಿ ಸೂಚನಾ ಫಲಕದಲ್ಲಿ ಮಾಹಿತಿ ನೀಡಬೇಕು ಎಂಬುದು ನಿಯಮವಾಗಿದೆ. ಆದರೆ ಪಶು ಇಲಾಖೆಯಿಂದ ಯಾವುದೇ ಮಾಹಿತಿ ಇಲ್ಲದಾಗಿದೆ. ಕೂಡಲೇ ರಾಚಪ್ಪ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ವರ್ಗಾವಣೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.