ಹುಬ್ಬಳ್ಳಿ: ತುಮಕೂರನ ಸಿದ್ದಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂದು ಹೇಳಿದ್ದನ್ನೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದ್ದರು. ಅವರ ಈ ಹೇಳಿಕೆಯನ್ನು ವಿಶ್ವ ಲಿಂಗಾಯತ ಮಹಾಸಭಾ ಬೆಂಬಲಿಸುತ್ತದೆ. ಆದರೆ ಈ ವಿಚಾರದಲ್ಲಿ ಕೆಲವರು ಸ್ವಾಮೀಜಿಯವರಿಗೆ ಆಘಾತವಾಗುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಮಹಾಸಭಾ ಖಂಡಿಸುತ್ತದೆ ಎಂದು ನಿರ್ಣಯಿಸಿತು.
ರವಿವಾರ ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಎದುರಿನ ಯಾತ್ರಿ ಗಾರ್ಡನ್ ದಲ್ಲಿ ಹಮ್ಮಿಕೊಂಡಿದ್ದ ಲಿಂಗಾಯತ ಸ್ವತಂತ್ರ ಧರ್ಮ ಚಿಂತನೆ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜೊತೆಗೆ ಸಚಿವ ಕಾಗೋಡು ತಿಮ್ಮಪ್ಪ ಸರಕಾರದ ಆದೇಶವಿದ್ದರೂ ತಮ್ಮ ಕಚೇರಿಯಲ್ಲಿ ಬಸವಣ್ಣನ ಭಾವಚಿತ್ರ ಹಾಕದಿರುವುದನ್ನು ಖಂಡಿಸಿತಲ್ಲದೆ, ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಿತು.
ಇದಕ್ಕೂ ಮುನ್ನ ಮಾತನಾಡಿದ ಪ್ರೊ| ಬಿ.ವಿ. ಶಿರೂರ, ಲಿಂಗಾಯತ ಸ್ವತಂತ್ರ ಧರ್ಮದ ನಿಜಾಂಶ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಸಚಿವ ಎಂ.ಬಿ. ಪಾಟೀಲರು ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಸಿದ್ದಗಂಗಾ ಶ್ರೀಗಳು ಅವರೊಂದಿಗೆ ಹಂಚಿಕೊಂಡಿದ್ದ ಅಭಿಪ್ರಾಯ ಹೇಳಿದ್ದರು. ಆದರೆ ಕೆಲವರು ಅವರ ಮನೋಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡಿದರು.
ಆ ಮೂಲಕ ನಿಷ್ಠುರವಾಗಿ ಲಿಂಗಾಯತ ಧರ್ಮ ಬಗ್ಗೆ ಹೇಳಿದ್ದ ಅವರಿಗೆ ಆಘಾತ ಮಾಡಿದರು. ಅವರ ಬೆನ್ನ ಹಿಂದೆ ಹು-ಧಾ ಅವಳಿನಗರದ ಲಿಂಗಾಯತ ಸಮಾಜವಿದೆ ಎಂದು ಬಿಂಬಿಸಬೇಕು ಎಂದರು. ಎಸ್.ಬಿ. ಜೋಡಳ್ಳಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಚಿಂತನೆ ಈಗಿನದ್ದಲ್ಲ.
ಕಲ್ಯಾಣ ಕ್ರಾಂತಿಯಿಂದಲೇ ಆರಂಭವಾಗಿದೆ. ಪುರೋಹಿತ ಶಾಹಿಗಳ ಕಪಿಮುಷ್ಠಿಯಿಂದ ಮುಕ್ತರಾಗಬೇಕಿದೆ. ಅಕ್ಟೋಬರ್ 1ರಂದು ವಿಶ್ವ ಲಿಂಗಾಯತ ಮಹಸಾಭಾ ಜಿಲ್ಲಾ ಘಟಕದಿಂದ ನಗರದ ಲಿಂಗರಾಜ ನಗರದಲ್ಲಿ ನಡೆಯುವ ಚಿಂತನಾ ಸಭೆ ಯಶಸ್ವಿಗೊಳಿಸಬೇಕೆಂದರು. ಮಹಾಸಭಾದ ರಾಜ್ಯ ಸಂಚಾಲಕ ಚಿಂತಾಮಣಿ ಸಿಂದಗಿ ಮಾತನಾಡಿ, ರಾಜಕೀಯ ವ್ಯಕ್ತಿಗಿಂತ ಸಮಾಜ ದೊಡ್ಡದು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು.
ಮುಂದಿನ ದಿನಗಳಲ್ಲಿ ನಗರದ ನೆಹರು ಮೈದಾನದಲ್ಲಿ ಬೃಹತ್ ಸಭೆ ಆಯೋಜಿಸುವ ಯೋಜನೆ ಇದೆ ಎಂದರು. ಶಶಿಧರ ಕರಿವೀರ ಶೆಟ್ಟರ, ಗುಡ್ಡದ, ಗೊಂಗಡಶೆಟ್ಟರ, ಪರಮಾದಿ, ಅಜ್ಜಪ್ಪ ಬೆಂಡಿಗೇರಿ, ಶೆಟ್ಟರ, ಅಂಗಡಿ, ಸಂಗಮೇಶ ಐಹೊಳ್ಳಿ, ಸಿದ್ಧಲಿಂಗ ವಾಲಿ ಮತ್ತು ಡಾ| ಎಂ.ಎಂ. ನುಚ್ಚಿ ಮಾತನಾಡಿದರು. ಪ್ರೊ| ಎಸ್.ವಿ. ಪಟ್ಟಣಶೆಟ್ಟಿ ನಿರೂಪಿಸಿದರು.