ಬೆಳಗಾವಿ: ಬಸವಣ್ಣನವರ ತತ್ವಗಳ ಅಸ್ಮಿತೆಗಾಗಿ ಲಿಂಗಾಯಿತ ಸ್ವತಂತ್ರ ಧರ್ಮದ ಹೋರಾಟ ಮುಂದುವರಿಯಲಿದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಡೆಯೂರು ತೋಂಟದಾರ್ಯಮಠ ಮತ್ತು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ, ರಾಷ್ಟ್ರೀಯ ಬಸವಸೇನೆ ಜಿಲ್ಲಾಘಟಕ ಹಾಗೂ ವಿವಿಧ ಮಹಿಳಾ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡ ವಿಶ್ವಗುರು ಬಸವ ಜಯಂತಿ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಯಾರು ಎಷ್ಟೇ ವಿರೋಧಿಸಿದರೂ ನಮಗೆ ಸಾಂವಿಧಾನಿಕ ಮಾನ್ಯತೆ ಸಿಕ್ಕೇ ಸಿಗುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬೈಲೂರ ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ತಾಯಂದಿರು ವಚನ ಸಾಹಿತ್ಯದ ತಿರುಳನ್ನು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಣಿ ಪಾರ್ವತಿದೇವಿ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಚ್. ಬಿ. ಕೋಲಕಾರ ಮಾತನಾಡಿ, ಬಸವಣ್ಣನವರು ಸಾಮರಸ್ಯಕ್ಕಾಗಿ ಸಾವನ್ನೇ ಎದುರು ಹಾಕಿಕೊಂಡವರು. ಶೋಷಿತರನ್ನು, ದಲಿತರನ್ನು ಮೇಲೆತ್ತಲು ತಮ್ಮ ಬದುಕನ್ನೇ ಹೋರಾಟಕ್ಕೆ ಒಡ್ಡಿಕೊಂಡವರು. ಬುದ್ಧನ ನಂತರ ಇಡೀ ಸಮಾಜವನ್ನೇ ತಮ್ಮ ಮಹಾಮನೆಯನ್ನಾಗಿಸಿಕೊಂಡ ಜಗತ್ತಿನ ಏಕೈಕ ಸಾಮರಸ್ಯದ ಮಹಾನುಭಾವರು ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಅರವಿಂದ ಪರುಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಗುಡುಸ ಪ್ರಾಸ್ತಾವಿಕ ಭಾಷಣ ಮಾಡಿದರು. ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ ಷಟ್ಸ್ಥಳ ಧ್ವಜಾರೋಹಣ ನೆರವೇರಿಸಿದರು. ಅಶೋಕ ಮಳಗಲಿ ನಿರೂಪಿಸಿದರು. ಅಡಿವೆಪ್ಪ ಬೆಂಡಿಗೇರಿ ವಂದಿಸಿದರು.