Advertisement

ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆ ಅಸಾಧ್ಯ

07:38 AM Dec 09, 2017 | |

ಸಂಡೂರು: “ಆಧುನಿಕತೆ, ವೈಚಾರಿಕತೆ ಹೆಸರಿನಲ್ಲಿ ಧರ್ಮಕ್ಕೆ ಧಕ್ಕೆ ತರುವವರನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸಿಂಹಾಸನಾಧೀಶ್ವರ ಜಗದ್ಗುರು ಡಾ| ಶ್ರೀ ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ
ಶಿವಾಚಾರ್ಯರು ಹೇಳಿದ್ದಾರೆ.

Advertisement

ಪಟ್ಟಣದ ಪಂಚವಟಿ ಆವರಣದಲ್ಲಿ ಶುಕ್ರವಾರ ನೂತನ ಜಗದ್ಗುರು ರೇಣುಕಾಚಾರ್ಯ ಮಂದಿರದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, “12ನೇ ಶತಮಾನದ ಶರಣರು, ವೀರಶೈವ ಧರ್ಮವನ್ನು ಬೆಳೆಸಿದರು. ಶರಣರ ಹುಸಿಯ ನುಡಿಯಬೇಡ ಎಂಬ ತತ್ವಕ್ಕೆ ವಿರುದ್ಧವಾಗಿ ಲಿಂಗಾಯತ ಧರ್ಮ ಕಟ್ಟಲು ಹೊರಟಿದ್ದಾರೆ. ಆದರೆ ಅವರು ತಲೆಕೆಳಗಾಗಿ ನಿಂತರೂ ನೂತನ ಧರ್ಮ ಸ್ಥಾಪನೆ ಅಸಾಧ್ಯ’ ಎಂದರು.

ವೀರಶೈವ ಲಿಂಗಾಯತ ಧರ್ಮ ಸಿದ್ಧಾಂತ ಶಿಖಾಮಣಿಯ 28 ಶಿವಾಗಮಗಳನ್ನು ಮರೆಯುವಂತಿಲ್ಲ. ಅದರಲ್ಲಿನ ಅಷ್ಟಾವರ್ಣ, ಷಟ್‌ ಸ್ಥಳ, ಪಂಚಾಚಾರಗಳು ಪ್ರಮುಖ ಅಂಶಗಳಾಗಿವೆ. ಪಂಚಪೀಠಗಳು ಬರೀ ವೀರಶೈವ ಲಿಂಗಾಯತಕ್ಕೆ ಮಾತ್ರ ಸೀಮಿತವಲ್ಲ. ಕಾಶಿ, ಮಧ್ಯಪ್ರದೇಶದಲ್ಲಿ ವೀರಶೈವರಿಲ್ಲದಿದ್ದರೂ ಅಲ್ಲಿ ನಮ್ಮ ಪೀಠಗಳಿವೆ. ಕೆಲವರು ವೀರಶೈವ-ಲಿಂಗಾಯತ ಬೇರೆ ಬೇರೆ. ಪ್ರತ್ಯೇಕ ಧರ್ಮ ಸ್ಥಾಪಿಸಲು ಹೊರಟಿರುವುದು ಬಸವಣ್ಣನವರ ನುಡಿಗಳಿಗೆ ಅಪಚಾರ ಎಸಗಿದಂತೆ ಎಂದರು.

 ಉಜ್ಜಯಿನಿ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಡೂರು ವಿರಕ್ತಮಠದ 
ಪ್ರಭುಸ್ವಾಮಿಗಳು, ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ಎಂ.ವಿಶ್ವನಾಥಯ್ಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವೀರಶೈವ-ಲಿಂಗಾಯತ ಒಂದೇ: ಸಚಿವ ಖಂಡ್ರೆ
ಬೆಂಗಳೂರು: “ವೀರಶೈವ ಹಾಗೂ ಲಿಂಗಾಯಿತ ಎರಡೂ ಒಂದೆ, ನಾವೆಲ್ಲರೂ ಒಂದಾಗಿದ್ದೇವೆ. ಪ್ರತ್ಯೇಕ ಧರ್ಮಕ್ಕಾಗಿ ಒಟ್ಟಾಗಿಯೇ ಹೋರಾಟ ಮಾಡಲಿದ್ದೇವೆ’ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯಿಕವಾಗಿ ವೀರಶೈವ, ರೂಢಿಯಲ್ಲಿ ಲಿಂಗಾಯಿತ ಪದ ಬಳಕೆಯಾಗುತ್ತಿದೆ. ವೀರಶೈವ-ಲಿಂಗಾಯತ
ಎರಡೂ ಸಮಾನಾರ್ಥಕ ಶಬ್ದಗಳು. ಲಿಂಗಾಯತ ಹಾಗೂ ವೀರಶೈವರು ಬೇರೆ ಅಲ್ಲ, ಒಟ್ಟಾಗಿದ್ದೇವೆ, ಮುಂದೆಯೂ ಒಟ್ಟಾಗೇ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ. ಪ್ರತ್ಯೇಕ ಧರ್ಮ ಮಾನ್ಯತೆಗೆ ಕಳೆದ 30 ವರ್ಷಗಳಿಂದ ಅಖೀಲ ಭಾರತ ವೀರಶೈವ ಮಹಾಸಭಾ ಪ್ರಯತ್ನಿಸುತ್ತಿದೆ. ಎಲ್ಲರೂ ಒಟ್ಟಾಗಿ ಬಂದರೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭರವಸೆ ನೀಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next