ಚಿತ್ತಾಪುರ: ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆಗೆ ವೀರಶೈವ ಪದ ತೊಡಕಾಗಿದೆ. ಹೀಗಾಗಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ ಎಂದು ಲಿಂಗಾಯತ ಸ್ವತಂತ್ರ ಧರ್ಮ ಸಮನ್ವಯ ಸಮಿತಿ ಹೋರಾಟದ ಜಿಲ್ಲಾ ಮುಖಂಡ ಆರ್.ಜಿ. ಶೆಟಗಾರ ಹೇಳಿದರು.
ಪಟ್ಟಣದ ಕಿಂಗ್ ಪ್ಯಾಲೆಸ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಲಿಂಗಾಯತ ಸ್ವತಂತ್ರ ಧರ್ಮ ಸಂವಿಧಾನಾತ್ಮಕ ಮಾನ್ಯತೆಗಾಗಿ ಕಲಬುರಗಿ ಚಲೋ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 1990ರಲ್ಲಿ ಅಖೀಲ ಭಾರತ ವೀರಶೈವ ಮಹಾಸಭೆ ಕೇಂದ್ರ ಸರ್ಕಾರಕ್ಕೆ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ಮಾಡಲು ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಮನವಿ ತಿರಸ್ಕರಿಸಿದೆ. 2003ರಲ್ಲಿ ಪುನಃ ವೀರಶೈವ
ಮಹಾಸಭೆಯಿಂದ ಮನವಿ ಸಲ್ಲಿಸಲಾಗಿದ್ದರೂ ತಿರಸ್ಕಾರಗೊಂಡಿದೆ. ಇದರಿಂದ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ವೀರಶೈವ ಮಹಾಸಭಾದವರು, ಪಂಚಾಚಾರ್ಯರು ಲಿಂಗಾಯತ ಸ್ವತಂತ್ರ ಧರ್ಮ ಆಗಲಿಕ್ಕೆ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಲಿಂಗಾಯತ ಸ್ವತಂತ್ರ ಧರ್ಮದಲ್ಲಿ 73 ಒಳ ಪಂಗಡಗಳಿವೆ. ಆ ಜನರಿಗೆ ಸರ್ಕಾರದಲ್ಲಿ ಮೀಸಲಾತಿ ದೊರೆಯುತ್ತದೆ. ಲಿಂಗಾಯತ ಸ್ವತಂತ್ರ ಧರ್ಮವಾದರೆ ಪ್ರತಿವರ್ಷ ಒಂದು ಸಾವಿರ ಕೋಟಿ ರೂ. ಅನುದಾನ ಬರುತ್ತದೆ. ಇದರ ಸದುಪಯೋಗ ಪಡೆಯಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಸಂವಿಧಾನ್ಮಾತಕ ಹಕ್ಕು ಪಡೆದುಕೊಳ್ಳಲು ಕಲಬುರಗಿಯಲ್ಲಿ ಸೆ.24 ರಂದು ನಡೆಯುವ ಲಿಂಗಾಯತ ಸ್ವತಂತ್ರ ಧರ್ಮ ಸಂವಿಧಾನಾತ್ಮಕ ಹೋರಾಟದ ಮಹಾ ರ್ಯಾಲಿಯಲ್ಲಿ ಭಾಗವಹಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣದ ಬಸವ ಪೀಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ 900 ವರ್ಷಗಳ ಇತಿಹಾಸವಿದೆ. ಶೈವ ಪಂಥದಲ್ಲಿ ಮೂಢನಂಬಿಕೆ, ಶೋಷಣೆ, ಹೋಮ, ಹವನ, ಸಂಪ್ರದಾಯಗಳಿವೆ. ಇದನ್ನು ಬಸವಣ್ಣ ಧಿ ಕ್ಕರಿಸಿ ಸರ್ವ ಜಾತಿ-ಜನಾಂಗ ಸೇರಿಸಿ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಇದಕ್ಕೆ ಸಂವಿಧಾನಾತ್ಮಕ ಮಾನ್ಯತೆ ಪಡೆಯಲು ವಿರೋಧಿಸುತ್ತಿರುವುದು ಸರಿಯಲ್ಲ ಎಂದರು.
ಸಮನ್ವಯ ಸಮಿತಿ ಸಂಚಾಲಕ ರವಿಂದ್ರ ಸಜ್ಜನಶೆಟ್ಟಿ, ಭೀಮಣ್ಣ ಜಕಾತಿ, ರುದ್ರಮುನಿ ವಸ್ತ್ರದ ಮಾತನಾಡಿದರು. ರವಿಂದ್ರ ಶಾಹಬಾದಿ, ಗುರುಲಿಂಗಪ್ಪಾ ಪಾಟೀಲ ಮುಡಬೂಳ, ವಿಜಯಲಕ್ಷಿ ಬೆಣ್ಣಿ, ಜಂಭಣ್ಣಗೌಡ, ವಿಜಯಕುಮಾರ ತೆಗಲತಿಪ್ಪಿ, ನಾಗರಾಜ ಕಾಮಾ, ರಾಜು ದುಗನುರ, ದಯಾನಂದ ಮಾಸ್ತರ್, ಸಿದ್ರಾಮೇಶ್ವರ ಸಜ್ಜನಶೆಟ್ಟಿ, ರಾಜು ದುಗನೂರ, ಬಸವರಾಜ ಆಂದೋಲಾ, ರಮೇಶ ಕಾಳನೂರ್ ಇದ್ದರು. ವಿರೋಪಾಕ್ಷಿ ಬೆಣ್ಣಿ ನಿರೂಪಿಸಿದರು. ಶ್ರೀನಾಥ ಸ್ವಾಗತಿಸಿದರು. ವೀರಸಂಗಪ್ಪಾ ಸುಲೇಗಾಂವ ವಂದಿಸಿದರು.
ಸಭೆಯಿಂದ ಹೊರ ಹೋದ ವೀರಶೈವರು
ಲಿಂಗಾಯತ ಸ್ವತಂತ್ರ ಧರ್ಮ ಮಹಾರ್ಯಾಲಿ ಪೂರ್ವಭಾವಿ ಸಭೆಗೆ ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಿವರಾಯ ಪಾಟೀಲ, ಚಂದ್ರಶೇಖರ ತೆಂಗಳಿ, ಸೋಮಶೇಖರ ಪಾಟೀಲ, ಆನಂದ ನರಬೋಳಿ ಸೇರಿದಂತೆ ಅನೇಕರು ಆಗಮಿಸಿದ್ದರು. ಸಭೆ ಆರಂಭಕ್ಕೂ ಮುನ್ನ
ಮಾತನಾಡಿದ ಸೋಮಶೇಖರ ಪಾಟೀಲ, ಲಿಂಗಾಯತ ವೀರಶೈವ ಬೇಧಭಾವ ಮಾಡಬೇಡಿ ಎಂದು ಹೇಳಿದಾಗ ಪಿಎಸ್‌ಐ ಜಗದೇವಪ್ಪ ಪಾಳಾ ಸ್ಥಳಕ್ಕೆ ದೌಡಾಯಿಸಿ ನಾವು ರಕ್ಷಣೆ ಕೊಡಲು ಬಂದಿದ್ದೇವೆ. ಸಭೆಯಲ್ಲಿ ಯಾರು ಪರ-ಯಾರು ವಿರೋಧ ಇದ್ದಾರೆ ಎನ್ನುವುದು ಗೊತ್ತಿಲ್ಲ. ಇಷ್ಟ ಇದ್ದರೆ ಸಭೆಯಲ್ಲಿ ಕುಳಿತುಕೊಳ್ಳಿ, ಇಲ್ಲವಾದರೆ ಹೊರಗೆ ಹೋಗಿ ಎಂದು ಮನವಿ ಮಾಡಿದರು. ಹೀಗಾಗಿ ವೀರಶೈವ ಮುಖಂಡರೆಲ್ಲ ಸಭೆಯಿಂದ
ಹೊರಗೆ ನಡೆದರು.