Advertisement

ಲಿಂಗಾಯತ ಮಾತ್ರವೇ ಸ್ವತಂತ್ರ ಧರ್ಮ

07:50 AM Aug 01, 2017 | Team Udayavani |

ವಿಜಯಪುರ: “ವೀರಶೈವ ಮಹಾಸಭಾದಿಂದ 2013ರ ಜುಲೈ 31ರಂದು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ ಮನವಿ ಪತ್ರಕ್ಕೆ ಸಹಿ ಮಾಡಿದ್ದು ತಪ್ಪಾಗಿದೆ.

Advertisement

ಲಿಂಗಾಯತ ಮಾತ್ರವೇ ಸ್ವತಂತ್ರ ಧರ್ಮ ‘ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಜುಲೈ 29ರಂದು ಎರಡು ಪುಟಗಳ ಸುದೀರ್ಘ‌ ಪತ್ರ ಬರೆದಿರುವ ಕುರಿತು ರಾಜ್ಯದಲ್ಲಿ ತೀವ್ರ ಚರ್ಚೆ ನಡೆದಿದೆ. ಈ ಕುರಿತು ಸೋಮವಾರ ತಿಕೋಟಾ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿರುವ ಸಚಿವರು, “ಲಿಂಗಾಯತ ಸ್ವತಂತ್ರವಾದ ಪ್ರತ್ಯೇಕ ಧರ್ಮ ಎಂಬುವುದರ ಸ್ಪಷ್ಟ ಅರಿವಿಲ್ಲದ ಕಾರಣ ಈ ಹಿಂದೆ ಕೇಂದ್ರಕ್ಕೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿ ಪತ್ರಕ್ಕೆ ನಾನು ಸೇರಿ ಹಲವು ಜನಪ್ರತಿನಿಧಿಗಳು ಸಹಿ ಮಾಡಿರುವುದು ತಪ್ಪು ಎಂಬುದು ನನಗೆ ಈಗ ಮನವರಿಕೆ ಆಗಿದೆ. ತಪ್ಪಿನ ಅರಿವಾದ ಮೇಲೆ ತಿದ್ದಿಕೊಳ್ಳಬೇಕು’ ಎಂದರು.

ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬರುವ ಮುನ್ನವೇ 800 ವರ್ಷಗಳ ಹಿಂದೆ ಲಿಂಗಾಯತ ಧರ್ಮ ಸ್ಥಾಪಿತವಾಗಿರುವ ಕುರಿತು ಬ್ರಿಟಿಷ್‌ ಗೆಜೇಟಿಯರ್‌ನಲ್ಲಿ, ಕಿಟೆಲ್‌ ನಿಘಂಟಿನಲ್ಲಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದ್ದಾಗಿ ಸ್ಪಷ್ಟವಾಗಿ ಹೇಳಿದೆ. ಹಿರೇಮಲ್ಲೂರು ಈಶ್ವರನ್‌, ಡಾ|ಎಂ.ಎಂ. ಕಲಬುರ್ಗಿ ಇವರ ಸಂಶೋಧನೆಗಳಲ್ಲೂ ಈ ಕುರಿತು ಸ್ಪಷ್ಟವಾಗಿ ಹೇಳಿದ್ದನ್ನು ಗಮನಿಸಿದ್ದೇನೆ. ಹೀಗಾಗಿ ಇನ್ನಾದರೂ ಈ ಹಿಂದೆ ಆಗಿರುವ ತಪ್ಪಿನ ಅರಿವು ಮೂಡಿಸಿಕೊಳ್ಳಬೇಕಿದೆ. ಇನ್ನಾದರೂ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಗೆ ಸರ್ಕಾರಕ್ಕೆ ಆಗ್ರಹಿಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಇದಕ್ಕಾಗಿ ಸಮಗ್ರ ಚರ್ಚೆಗಾಗಿ ಪಂಚಪೀಠಗಳ ಪಂಚಾಚಾರ್ಯರು, ಇಳಕಲ್ಲ, ಭಾಲ್ಕಿ, ಚಿತ್ರದುರ್ಗ, ಗದಗ-ಡಂಬಳ, ಸಿರಿಗೆರೆ ಸೇರಿ ವಿವಿಧ ಮಠಾಧೀಶರು, ಡಾ| ಎಂ.ಎಸ್‌.ಜಾಮದಾರ ಸೇರಿದಂತೆ ಗಣ್ಯರಿಂದ ಸಲಹೆ ಸೂಚನೆ ಪಡೆದು, ವೀರಶೈವ-ಲಿಂಗಾಯತ ಬದಲಾಗಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸುವಂತೆ ಕೋರಿದ್ದಾಗಿ
ವಿವರಿಸಿದರು.

ಪ್ರತ್ಯೇಕ ಧರ್ಮ ಮಾನ್ಯತೆ ವಿಷಯದಲ್ಲಿ ಮಾತೆ ಮಹಾದೇವಿ ಅವರ ತೇಜೋವಧೆ ಮಾಡುವ ಹಾಗೂ ರಂಭಾಪುರಿ ಶ್ರೀಗಳ ವಿರುದ್ಧ ಪ್ರತಿಭಟನೆಗಳಂಥ ಬೆಳವಣಿಗೆಗಳು ಸರಿಯಲ್ಲ. ಸಮಾಜದ ಎಲ್ಲ ಮಠಾ ಧೀಶರು, ಸಂಶೋಧಕ, ತಜ್ಞರು ಒಗ್ಗೂಡಿ ಚರ್ಚಿಸಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಹಾಗೂ ಘನತೆ ತರುವ ಕೆಲಸ ಮಾಡಬೇಕು.
– ಎಂ.ಬಿ.ಪಾಟೀಲ ಜಲ ಸಂಪನ್ಮೂಲ ಸಚಿವ

Advertisement

ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಒಳ್ಳೆಯದು. ಕೆಲವರು ಟೀಕೆ ಮಾಡುವ ಉದ್ದೇಶದಿಂದಲೇ ಟೀಕೆ ಮಾಡುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯಿಸಲ್ಲ ಪ್ರತ್ಯೇಕ ಧರ್ಮ ರಚನೆ ಕುರಿತು ಚಿಂತನೆ ನಡೆದಿದ್ದು ಈಗಲ್ಲ. 2013ರ ಸರ್ಕಾರಕ್ಕೂ ಮುಂಚೆಯೇ ಈ ಕುರಿತು ಗಂಭೀರ ಚಿಂತನೆ ನಡೆದಿತ್ತು. ಆಗಿನ ಸರ್ಕಾರ ಹಾಗೂ ಹಲವರು ಸಹಿ ಕೂಡ ಹಾಕಿದ್ದರು. ಅಂದಿನ ಕೇಂದ್ರದ ಯುಪಿಎ ಸರ್ಕಾರ ಇದಕ್ಕೆ ಒಪ್ಪಿಗೆ ಕೂಡ ನೀಡಿತ್ತು. 
– ಎಸ್‌.ಆರ್‌. ಪಾಟೀಲ
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ

ಲಿಂಗಾಯತ ಪದ ಬಳಸಿದರೆ ಸ್ವತಂತ್ರ ಧರ್ಮವಾಗುತ್ತದೆ. ಅದನ್ನು ಬಳಸಿಕೊಂಡು ಸರಕಾರಿ ಸೌಲಭ್ಯ ಪಡೆಯುವುದರ
ಜತೆಗೆ ಲಿಂಗಾಯತ ಧರ್ಮಕ್ಕೆ ಸಾಂವಿಧಾನಾತ್ಮಕ ಮಾನ್ಯತೆ ಸಿಗುತ್ತದೆ. ಬ್ರಿಟಿಷರ ಕಾಲದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬ ಸ್ಪಷ್ಟ ಉಲ್ಲೇಖವಿತ್ತು. ಕೆಲವು ಉಚ್ಚ ನ್ಯಾಯಾಲಯಗಳು ಲಿಂಗಾಯತ ಸ್ವತಂತ್ರ ಧರ್ಮ, ಬಸವಣ್ಣ ಇದರ ಸ್ಥಾಪಕರು ಎಂಬ ತೀರ್ಪು ನೀಡಿದೆ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬ ಬಗ್ಗೆ ಸ್ಪಷ್ಟ ಉಲ್ಲೇಖಗಳೂ ಇವೆ. 
– ಡಾ| ಮಹಾಂತ ಸ್ವಾಮಿ, ಇಳಕಲ್ಲ ಸಂಸ್ಥಾನಮಠದ ಪೀಠಾಧಿಪತಿ

ವೀರಶೈವ ಮತ್ತು ಲಿಂಗಾಯತ ಧರ್ಮಗಳ ಬಗ್ಗೆ ನಡೆ ಯುತ್ತಿರುವ ವಿದ್ಯಮಾನಗಳು ಅನಗತ್ಯ.ಧರ್ಮಗಳು ಮಾನವನ ಮನಸ್ಸನ್ನು
ಒಂದುಗೂಡಿಸುವಂತಿರಬೇಕು. ಧರ್ಮ ಇರುವುದೇ ಜನರಿಗಾಗಿ. ಅದನ್ನು ಯಾವ ಕಾರಣಕ್ಕೂ ರಾಜಕೀಯಕ್ಕಾಗಿ ಬಳಸಬಾರದು.
– ಪುರುಷೋತ್ತಮಾನಂದಪುರಿ ಸ್ವಾಮೀಜಿ,
ಹೊಸದುರ್ಗ ಭಗೀರಥ ಪೀಠ

ಲಿಂಗಾಯತ ಧರ್ಮ ಎಂದಾದರೂ ಆಗಲಿ  ವೀರಶೈವ ಲಿಂಗಾಯತ ಧರ್ಮ ಎಂದಾದರೂ ಆಗಲಿ ಒಟ್ಟಿನಲ್ಲಿ ಪ್ರತ್ಯೇಕ ಧರ್ಮದ ಅಗತ್ಯವಿದೆ. ಯಾವುದೇ ಬೀದಿ ರಂಪಾಟ ಮಾಡದೇ ಇದನ್ನು ಎಲ್ಲರೂ ಒಗ್ಗಟ್ಟಿನಿಂದ ಬಗೆಹರಿಸಿಕೊಳ್ಳಬೇಕಿದೆ.
– ವಿನಯ್‌ ಕುಲಕರ್ಣಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next