ಲಿಂಗಸುಗೂರು: ಅರ್ಧ ಶತಮಾನ ಕಂಡ ಜಲದುರ್ಗ ಸೇತುವೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಅಲುಗಾಡುತ್ತಿದೆ.
ಜುಲೈ 28ರಿಂದ ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾಗಿಯಿತು. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 6.30 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದರದಿಂದ ಆಗಸ್ಟ್ 10ರಂದು ತಾಲೂಕಿನ ಜಲದುರ್ಗ ಸೇತುವೆ ಮುಳುಗಡೆಯಾಗಿತ್ತು. ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದರಿಂದ ಆಗಸ್ಟ್ 15ರಂದು ಸಂಜೆ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಪ್ರವಾಹದ ಹೊಡೆತಕ್ಕೆ ಸೇತುವೆ ಶಿಥಿಲಗೊಂಡು ಅಲುಗಾಡುತ್ತಿದೆ.
ಹಿಂದೆದೂ ಕಾಣದಂತಹ ಪ್ರವಾಹ ಈ ಭಾರಿ ಕಾಣುವಂತಾಗಿದೆ. 1970ರಲ್ಲಿ ನಿರ್ಮಿಸಲಾದ ತಾಲೂಕಿನ ಜಲದುರ್ಗ ಸೇತುವೆ ಇದೇ ಮೊದಲ ಭಾರಿಗೆ ಮುಳುಗಡೆಯಾಗಿತ್ತು. ಆದರೆ ಈ ಸಲದ ಪ್ರವಾಹದ ಹೊಡತಕ್ಕೆ ಸೇತುವೆ ಎರಡು ಕಡೆ ನಿರ್ಮಿಸಲಾಗಿದ್ದ ತಡೆಗೋಡೆಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ಸೇತುವೆ ಮಧ್ಯಭಾಗ ಅಲುಗಾಡುತ್ತಿದೆ. ಮತ್ತೂಂದು ಭಾಗ ಕೆಳಗಡೆ ಕುಸಿದು ಒಂದು ಅಡಿವರೆಗೆ ಮುಂದೆ ಸರಿದಿದೆ. ಸ್ಲ್ಯಾಬ್‌ನಲ್ಲಿದ್ದ ರಾಡುಗಳು ತೇಲಿವೆ. ಶುಕ್ರವಾರ ಕೃಷ್ಣಾ ನದಿಯಲ್ಲಿ 4.72 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಇನ್ನೂ ನೀರಿನ ರಭಸ ಇದ್ದೇ ಇದೆ. ಅಭದ್ರ ಸ್ಥಿತಿಯಲ್ಲಿರುವ ಸೇತುವೆಗೆ ಯಾವ ಕ್ಷಣದಲ್ಲಿಯಾದರೂ ಅನಾಹುತ ಸಂಭವಿಸುವ ಲಕ್ಷಣಗಳು ಎದುರಾಗಿದೆ. ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳ ಸಂಪರ್ಕ ಕಲ್ಪಿಸುವ ಸೇತುವೆ ಅಭದ್ರತೆ ಸ್ಥಿತಿಯಲ್ಲಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಬಹುದು ಎನ್ನಲಾಗಿದೆ. ಜಲದುರ್ಗ ಸೇತುವೆ ಅಲುಗಾಡುತ್ತಿದ್ದರಿಂದ ಮುಂಜಾಗೃತವಾಗಿ ಪಾದಾಚಾರಿಗಳನ್ನು ಹೊರತು ಪಡಿಸಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಸೇತುವೆ ಎರಡು ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ಹಾಕಲಾಗಿದೆ. ಗುರುವಾರ ಸಂಜೆಯಷ್ಟೇ ಸಂಚಾರಕ್ಕೆ ಮುಕ್ತಾವಾಗಿದ್ದ ಜಲದುರ್ಗ ಸೇತುವೆ ಅಲುಗಾಡುತ್ತಿದ್ದರಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಡಿವೈಎಸ್‌ಪಿ ಜಿ.ಹರೀಶ, ಪಿಡಬ್ಲೂಡಿ ಎಇಇ ಸಿ.ಎಸ್.ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಜೆಇ ಬಸವರಾಜ ಬಸ್ತಾನಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಐದು ದಿನಗಳಿಂದ ಸೇತುವೆ ಮುಳುಗಡೆಯಾಗಿದ್ದರಿಂದ ಬಸ್ ಸಂಚಾರ ಸ್ಥಗಿತವಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಬಸ್ ಸಂಚಾರ ಪುನಾರಂಭವಾಗಿದೆ. ಆದರೆ ಸೇತುವೆ ಅಭದ್ರತೆಯಲ್ಲಿರುವುದರಿಂದ ಸೇತುವೆ ದಡವರಿಗೆ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಹಾಗೂ ಕರೆದ್ಯೊಯ ಲಾಗುತ್ತಿದೆ. ಆಗಸ್ಟ್ 10ರಂದು ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಾಹನಗಳ ಸಮೇತ ಎಂಟು ಜನ ಸಿಲುಕಿ ಹಾಕಿಕೊಂಡಿದ್ದರು. ಏರ್‌ಬೋಟ್ ಮೂಲಕ ಅಧಿಕಾರಿಗಳು ವಾಪಸ್ಸಾಗಿದ್ದರಿಂದ ಅವರ ವಾಹನಗಳನ್ನು ಗ್ರಾಮಗಳಲ್ಲಿ ಬಿಟ್ಟು ಬಂದಿದ್ದರು. ಗುರುವಾರ ಸಂಜೆ ನೀರಿನ ಮಟ್ಟ ಇಳಿಮುಖವಾದ ಬಳಿಕ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಅಧಿಕಾರಿಗಳು ಗುರುವಾರ ರಾತ್ರಿ ತಮ್ಮ ವಾಹನಗಳನ್ನು ತಂದಿದ್ದಾರೆ.