Advertisement

ಸಂತ್ರಸ್ತರಿಗೆ ತಲುಪದ ಆಹಾರ ಸಾಮಗ್ರಿಗಳು

10:54 AM Aug 31, 2019 | Naveen |

ಲಿಂಗಸುಗೂರು: ನೆರೆ ಸಂತ್ರಸ್ತರಿಗಾಗಿ ದಾನಿಗಳು ನೀಡಿದ್ದ ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನೆರವು ಕೇಂದ್ರದಲ್ಲಿಯೇ ಆಹಾರ ಸಾಮಗ್ರಿಗಳು ಕೊಳೆಯುತ್ತಿವೆ.

Advertisement

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 6.50 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ತಾಲೂಕಿನ ಜಲದುರ್ಗ, ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಯಳಗುಂದಿ, ಗದ್ದಗಿ, ಗೋನವಾಟ್ಲ, ಗುಂತಗೋಳ ಸೇರಿ ನಡುಗಡ್ಡೆಗಳಾದ ಮಾದರಗಡ್ಡಿ, ಕರಕಲಗಡ್ಡಿ, ಹೊಂಕಮ್ಮನಗಡ್ಡಿಗಳು ನಿಜಕ್ಕೂ ದ್ವೀಪಗಳಾಗಿ ಅಲ್ಲಿನ ಜನರು ಸಂತ್ರಸ್ತರಿಗಾಗಿದ್ದರು. ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚುವಂತಾಗಿತ್ತು.

ನೆರವಿನ ಮಹಾಪೂರ: ಪ್ರವಾಹದಿಂದ ಸಂತ್ರಸ್ತರಾಗಿ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿತ್ತು. ಇದನ್ನು ಕಂಡ ತಾಲೂಕು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ಜನರು ನೆರವಿನ ಮಹಾಪೂರವೇ ಹರಿಸಿದ್ದರು. ಜಲದುರ್ಗ, ಶೀಲಹಳ್ಳಿ ಹಾಗೂ ಯರಗೋಡಿ ಸೇತುವೆಗಳು ಮುಳಗಡೆಯಾಗಿ ಸಂಪರ್ಕ ಕಡಿತಗೊಂಡಿದ್ದರಿಂದ ದಾನಿಗಳಿಗೆ ಅನುಕೂಲಕ್ಕಾಗಿ ತಾಲೂಕು ಆಡಳಿತ ಪಟ್ಟಣದ ಗುರುಭವನದಲ್ಲಿ ನೆರವು ಕೇಂದ್ರ ತೆರೆದಿತ್ತು. ದಾನಿಗಳು ಸಂತ್ರಸ್ತರಿಗಾಗಿ ನೀಡಿದ್ದ ಆಹಾರ ಪದಾರ್ಥಗಳು, ಬಟ್ಟೆ ಬರೆ, ಧವಸ ದಾನ್ಯ, ಔಷಧಿಗಳು, ಕುಡಿಯುವ ನೀರು ಸೇರಿ ಅಗತ್ಯ ದಿನಬಳಕೆ‌ ವಸ್ತುಗಳನ್ನು ತಂದು ನೀಡಿದ್ದರು. ದಾನಿಗಳಿಗೆ ಅನುಕೂಲಕ್ಕಾಗಿ ಆಗಸ್ಟ್‌ 10ರಂದು ಪಟ್ಟಣದ ಗುರುಭವನದಲ್ಲಿ ನೆರವು ಕೇಂದ್ರ ಆರಂಭಿಸಲಾಗಿದೆ. ದಾನಿಗಳು ಮೂಟೆಗಟ್ಟಲೆ ಅಕ್ಕಿ, ಜೋಳ, ರೊಟ್ಟಿ, ತಂದು ಕೊಟ್ಟಿದ್ದಾರೆ. ಹಂತ ಹಂತವಾಗಿ ಸಾಮಗ್ರಿಗಳನ್ನು ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರಿಗೆ ನೀಡಲಾಗಿದೆ. ಆದರೆ ಅಧಿಕಾರಿಗಳು ವಿವಿಧ ಸಭೆ, ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ. ಹಾಗಾಗಿ ಆಗಸ್ಟ್‌ 22ರಿಂದ ನೆರವು ಕೇಂದ್ರದ ಬಗ್ಗೆ ತಾತ್ಸಾರ ಮಾಡುತ್ತಿದ್ದರಿಂದ ಆಹಾರ ಸಾಮಗ್ರಿಗಳು ಸಂತ್ರಸ್ತರಿಗೆ ಹಂಚಿಕೆಯಾಗಿದೆ ಕೇಂದ್ರದಲ್ಲಿ ಕೊಳೆಯುತ್ತಿವೆ. ಬ್ರೆಡ್‌, ಬಿಸ್ಕೀಟ್, ರೊಟ್ಟಿ, ಚಟ್ನಿ, ಜೋಳ ಹಾಗೂ ಗೋದಿ ಹಿಟ್ಟು ಸೇರಿ ಇತರೆ ಪದಾರ್ಥಗಳು ಕೆಟ್ಟಿದ್ದು ಇದರಿಂದ ದುರ್ನಾತ ಬರುತ್ತಿದೆ. ಪ್ರವಾಹ ಸಂದರ್ಭದಲ್ಲಿ ಮಾನವೀತೆಯ ದೃಷ್ಠಿಯಿಂದ ದಾನಿಗಳು ಕೊಟ್ಟ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next