Advertisement

ಅಧಿಕಾರಿಗಳ ವಿರುದ್ಧ ಹೂಲಗೇರಿ ಗರಂ

04:07 PM Dec 14, 2019 | Naveen |

ಲಿಂಗಸುಗೂರು: ಮೈಮೇಲೆ ಖಾಕಿ ಹಾಕಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡ್ತೀಯಾ..? ನಿನ್ನ ಅಧಿಕಾರವನ್ನು ಅಮಾಯಕ ರೈತರ ಮೇಲೆ ಚಲಾಯಿಸುವುದು ಸರಿಯಲ್ಲ ಎಂದು ಶಾಸಕ ಡಿ.ಎಸ್‌. ಹೂಲಗೇರಿ ಅವರು ಪ್ರಾದೇಶಿಕ ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಸುಮ್ಮನೆ ಸಮಸ್ಯೆ ಸೃಷ್ಟಿಸಿ ಅನಗತ್ಯ ಗೊಂದಲ ಮೂಡಿಸುತ್ತಿರುವ ನನ್ನ ಗಮನಕ್ಕೆ ಬಂದಿದೆ ಎಂದು ಶಾಸಕರು ಅರಣ್ಯಾಧಿಕಾರಿ ಕಾಂಬ್ಳೆ ಅವರನ್ನು ತರಾಟೆಗೆ ತೆಗದುಕೊಂಡರು. ಇದಕ್ಕೆ ಅರಣ್ಯಾಧಿಕಾರಿಗಳು, ಅರಣ್ಯಭೂಮಿಯಲ್ಲಿ ಅಕ್ರಮ ಬೇಸಾಯ ತಡೆಗಟ್ಟುವಂತೆ ಸುಪ್ರೀಂಕೋರ್ಟ್‌ ಆದೇಶ ಇದೆ ಎಂದು ಸಮಾಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೆ ಗರಂ ಆದ ಶಾಸಕರು, ಸುಪ್ರೀಂಕೋರ್ಟ್‌ ರೈತರನ್ನು ಒಕ್ಕಲೆಬ್ಬಿಸಿ ಅವರಿಗೆ ತೊಂದರೆ ಕೊಟ್ಟು ಅವರ ಮೇಲೆ ಕೇಸ್‌ ಮಾಡುವಂತೆ ಹೇಳಿದೆಯಾ?, ನಿನ್ನ ಮೇಲೆ ಖಾಕಿ ಇದೆ ಎಂದು ಅಹಂ ಬಿಟ್ಟು ರೈತರಿಗೆ ನಯವಾಗಿ ವರ್ತಿಸಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ತಾಲೂಕಿನಲ್ಲಿ ಎಲ್ಲಿ-ಯಾವ ಸಸಿ ಹಚ್ಚದ ಬಗ್ಗೆ ಮಾಹಿತಿ ಕೊಡಬೇಕು. ಸ್ಥಳ ಪರಿಶೀಲಿಸುತ್ತೇನೆ. ಒಂದು ವೇಳೆ ನೀವು ನೀಡುವ ಮಾಹಿತಿಗೂ ಸ್ಥಳದಲ್ಲಿ ವ್ಯತ್ಯಾಸ ಕಂಡು ಬಂದರೆ ನಿಮ್ಮ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಎಚ್ಚರಿಸಿದರು.

ಅಧಿಕಾರಿಗೆ ತಾಕೀತು: ನಿಮ್ಮ ಕಚೇರಿಯಲ್ಲಿ ಎರಡು ಸಾವಿರಕ್ಕೂ ಅರ್ಜಿಗಳು ವಿಲೇವಾರಿ ಮಾಡದೇ ಪೆಂಡಿಂಗ್‌ ಉಳಿಸಿಕೊಂಡಿದ್ದೀರಿ. ಸರ್ಕಾರಿ ಸರ್ವೇಗೂ ವಿಳಂಬ ಮಾಡುತ್ತೀರಿ. 12 ಜನ ಸರ್ವೇಯರ್‌ ಇಟ್ಟುಕೊಂಡು ಅರ್ಜಿ ವಿಲೇವಾರಿ ಮಾಡಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಶೀಘ್ರವೇ ನಿಮ್ಮ ಇಲಾಖೆ ಪ್ರತ್ಯೇಕ ಸಭೆ ಕರೆದು ಪ್ರತಿ ಅರ್ಜಿ ಸ್ಥಿತಿಗತಿ ಪರಿಶೀಲಿಸುವೆ. ಅದರಲ್ಲಿ ತಪ್ಪು ಕಂಡುಬಂದರೆ ನಿಮ್ಮನ್ನು ಅಮಾನತು ಮಾಡಲು ಶಿಫಾರಸು ಮಾಡುವೆ ಎಂದು ಸರ್ವೇ ಅಧಿ ಕಾರಿಗೆ ತಾಕೀತು ಮಾಡಿದರು.

ಡೆಂಘೀ ನಿಯಂತ್ರಿಸಿ: ಮರಳಿ ಗ್ರಾಮದಲ್ಲಿ ಡೆಂಘೀ ಪ್ರಕರಣಗಳು ತಾಂಡವಾಡುತ್ತಿದೆ. ನೀವು ಗ್ರಾಮಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ವರದಿ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಪಾಟೀಲ್‌ ಅವರಿಗೆ ಸೂಚಿಸಿದರು. ಮರಳಿ ಗ್ರಾಮದಲ್ಲಿ 6 ಶಂಕಿತ ಡೆಂಘೀ ಪ್ರಕರಣ ಪತ್ತೆಯಾಗಿದೆ. ಎರಡು ನೀರಿನ ಮೂಲ ಪರೀಕ್ಷೆ ಮಾಡಲಾಗಿದೆ. ನಿಯಂತ್ರಣಕ್ಕಾಗಿ ವೈದ್ಯರ ತಂಡವನ್ನು ಅಲ್ಲಿಗೆ ಕಳಿಸಲಾಗಿದೆ. ತಾತ್ಕಲಿಕವಾಗಿ ಕ್ಲಿನಿಕ್‌ ತೆರೆಯಲಾಗಿದೆ ಎಂದು ಡಾ| ರುದ್ರಗೌಡ ಸಭೆಗೆ ತಿಳಿಸಿದರು.

ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬಹಳಷ್ಟು ಕೆಲಸಗಳು ಬಾಕಿ ಉಳಿದಿವೆ. ಬರುವ ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಸರ್ಕಾರದಲ್ಲಿ ಮತ್ತೆ ಹೊಸ ಕಾಮಗಾರಿಗಳಿಗೆ ಅನುದಾನ ತರಲು ಪ್ರಯತ್ನಿಸಬಹುದು. ಕೂಡಲೇ ಕಾಮಗಾರಿಗಳಿಗೆ ಚುರುಕು ನೀಡಿ ಪೂರ್ಣಗೊಳಿಸಿಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗಂಗಾಕಲ್ಯಾಣ ಯೋಜನೆಗಳು ಕೇವಲ ಕಡತದಲ್ಲಿ ಪ್ರಗತಿ ಕಾಣುತ್ತಿದ್ದು, ಅದರ ಬದಲಾಗಿ ಸ್ಥಳದಲ್ಲಿ ಪ್ರಗತಿ ಕಾಣಬೇಕು. ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ಯಾವುದೇ ರೀತಿ ವಿಳಂಬ ಮಾಡಬಾರದು. ಕುಡಿಯುವ ನೀರಿನ ಸೌಕರ್ಯ ಒದಗಿಸುವ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗುರುಗುಂಟಾ ಗ್ರಾಮದಲ್ಲಿ ಹಾಸ್ಟೆಲ್‌ ಸಮಸ್ಯೆ ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ. ಹಾಸ್ಟೆಲ್‌ ನಿರ್ವಹಣೆಗೆ ವಿವಿಧ ಸಂಘಟನೆಯವರಿಗೆ ಕೆಲಸ ಕೊಡಬೇಡಿ. ಸರಿಯಾಗಿ ಕೆಲಸ ಮಾಡುವವರಿಗೆ ನಿರ್ವಹಣೆ ಕೆಲಸ ಕೊಡಿ ಎಂದು ಎಸ್‌ಟಿ ಅಧಿಕಾರಿ ಶಿವಮಾನಪ್ಪ ಅವರಿಗೆ ಸೂಚಿಸಿದರು.

ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ್‌, ಜಿಪಂ ಸದಸ್ಯರಾದ ಬಸನಗೌಡ ಕಂಬಳಿ, ಸಂಗಣ್ಣ ದೇಸಾಯಿ, ತಾಪಂ ಇಒ ಪಂಪಾಪತಿ ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next