ಸಾಗರ: ಈ ವರ್ಷದ ಬೇಸಿಗೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ಶರಾವತಿ ಹಿನ್ನೀರಿನ ಮುಪ್ಪಾನೆ ಲಾಂಚ್ ಸೇವೆ ಬಳಿಕ ಹಸಿರುಮಕ್ಕಿ ಲಾಂಚಿನ ಸಂಚಾರದ ತಾತ್ಕಾಲಿಕ ಸ್ಥಗಿತಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ (ಮೂಲತಃ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ) ಅಧಿಕಾರಿಗಳು ನಿರ್ಧರಿಸಿದ್ದಾರೆ. ಶರಾವತಿ ಹಿನ್ನೀರಿನ ನಿಟ್ಟೂರು, ಸಂಪೇಕಟ್ಟೆ ಭಾಗಕ್ಕೆ ಸಂಪರ್ಕ ಸೇತುವೆಯಾಗಿದ್ದ ಹಸಿರುಮಕ್ಕಿ ಲಾಂಚ್ ಮತ್ತೆ ಮಳೆಗಾಲ ಪ್ರಾರಂಭವಾಗುವವರೆಗೂ ಓಡಾಟ ಸ್ಥಗಿತಗೊಳಿಸಲಿದೆ. ಇದರಿಂದ ಈ ಭಾಗದ ಜನ ಐವತ್ತು ಕಿಮೀ ಸುತ್ತಿ ತಮ್ಮ ಊರು ತಲುಪಬೇಕಾಗುತ್ತದೆ.
ಈ ಭಾಗದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು ತಳದಲ್ಲಿರುವ ಅವಶೇಷಗಳು ಹೊರಬರಲಾರಂಭಿಸಿದೆ. ಇಷ್ಟು ದಿನ ನೀರಿನಾಳದಲ್ಲಿದ್ದ ಮರದ ದಿಮ್ಮಿಗಳು ಈಗ ಲಾಂಚಿನ ಬುಡಕ್ಕೆ ತಗುಲುತ್ತಿದ್ದು, ಈ ಹಿನ್ನೆಲೆಯಲ್ಲಿ ಹಸಿರುಮಕ್ಕಿ-ಕೊಲ್ಲೂರು ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಹೊಸನಗರ, ನಗರ ಮಾರ್ಗ ಬಳಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮಂಡಳಿಯ ಈ ನಿಧಾರದಿಂದ ಹೊಸನಗರ ತಾಲೂಕಿನ ನಿಟ್ಟೂರು, ಸಂಪೆಕಟ್ಟೆ, ಕೊಲ್ಲೂರು ಭಾಗದ ಜನರ ಓಡಾಟಕ್ಕೆ ತೀವ್ರ ಅಡಚಣೆಯುಂಟಾಗಲಿದೆ. ಮುಖ್ಯವಾಗಿ ಸಾಗರದಿಂದ ದಕ್ಷಿಣ ಕನ್ನಡದ ಪ್ರಮುಖ ಸಂಪರ್ಕ ಮಾರ್ಗ ಮುಚ್ಚಿದಂತಾಗಿದೆ. ಕೊಲ್ಲೂರಿನಿಂದ ಬರುವವರು ಇದೀಗ ನಗರ, ಹೊಸನಗರ ಸುತ್ತಿ ಸಾಗರಕ್ಕೆ ಬರುವ ಅನಿವಾರ್ಯತೆ ಎದುರಾಗಿದೆ.
ಭಾನುವಾರ ಹಸಿರುಮಕ್ಕಿಗೆ ಭೇಟಿ ನೀಡಿದ ಸಾಗರದ ಸಹಾಯಕ ಕಡವು ನಿರೀಕ್ಷಕರಾದ ದಾಮೋದರ ನಾಯ್ಕ, ಸ್ಥಳೀಯ ಸಿಬ್ಬಂದಿಗಳೊಂದಿಗೆ ಸಮೀಕ್ಷೆ ನಡೆಸಿದರು. ತೆಪ್ಪದಲ್ಲಿ ಓಡಾಡಿ, ಪರಿಸ್ಥಿತಿಯ ಗಂಭೀರತೆ ಅರಿತು, ಸ್ಥಳದಿಂದಲೇ ದೂರವಾಣಿ ಮೂಲಕ ಕಾರವಾರದಲ್ಲಿರುವ ಕಡವು ನಿರೀಕ್ಷಕರಾದ ಧನೇಂದ್ರ ಕುಮಾರ್‌ರವರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ವಿವರಿಸಿದರು. ಕೂಡಲೇ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ತಾತ್ಕಾಲಿಕವಾಗಿ ಹಸಿರುಮಕ್ಕಿಯಿಂದ ಸಂಚರಿಸುತ್ತಿದ್ದ ಲಾಂಚ್‌ನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಸಹಾಯಕ ಕಡವು ನಿರೀಕ್ಷಕರಾದ ದಾಮೋದರ ನಾಯ್ಕ, ಶರಾವತಿ ಹಿನ್ನೀರಿನ ಹಸಿರುಮಕ್ಕಿ ಭಾಗದಲ್ಲಿ ನೀರು ಸಾಕಷ್ಟು ನೀರು ಕಡಿಮೆಯಾಗಿದ್ದರಿಂದ ಬುಡದಲ್ಲಿರುವ ಮರದ ದಿಮ್ಮಿಗಳು ಮತ್ತು ಅಲ್ಲಿರುವ ಹೂಳು ಲಾಂಚಿನ ಬುಡಕ್ಕೆ ತಗುಲುತ್ತಿದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಆದ್ದರಿಂದ ಮಳೆ ಬಂದು, ನೀರು ತುಂಬುವವರೆಗೆ ಲಾಂಚ್ ಸಂಚಾರ ತಡೆ ಹಿಡಿಯಲಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಮೇಲಧಿಕಾರಿಗಳಿಗೆ ವಿವರಿಸಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.