ಬೆಂಗಳೂರು: ಇದು ಕರ್ನಾಟಕದ ಪಾಲಿಗೆ ಚುನಾವಣಾ ವರ್ಷ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಸರಣಿ ಚುನಾವಣೆಗಳ ವರ್ಷವೆಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಮೊದಲಿಗೆ ರಾಜ್ಯಸಭೆ, ಬಳಿಕ ವಿಧಾನಸಭೆ, ನಂತರ ವಿಧಾನ ಪರಿಷತ್ತಿಗೆ ಒಂದರ ಹಿಂದೆ ಒಂದರಂತೆ ಚುನಾವಣೆಗಳು ನಡೆಯಲಿವೆ. ಇದಕ್ಕಾಗಿ ಕರ್ನಾಟಕ ಕೂಡ ಸಿದ್ಧವಾಗುತ್ತಿದೆ. ಇದರ ಜತೆಯಲ್ಲೇ 2019ರ ಲೋಕಸಭೆ ಚುನಾವಣೆಗೂ ಈ ವರ್ಷದಿಂದಲೇ ತಾಲೀಮು ಶುರುವಾಗಲಿದೆ.
ಎಲ್ಲವೂ ಅಂದುಕೊಂಡಂತಾದರೆ ಏಪ್ರಿಲ್‌ನಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾಯಿತರಾಗಿರುವ ರೆಹಮಾನ್ ಖಾನ್, ರಾಜೀವ್ ಚಂದ್ರಶೇಖರ್, ಬಸವರಾಜ ಪಾಟೀಲ್ ಸೇಡಂ ಮತ್ತು ಆರ್.ರಾಮಕೃಷ್ಣ ಅವರ ಅಧಿಕಾರಾವಧಿ ಏ.2ರಂದು ಅಂತ್ಯವಾಗಲಿದೆ. ಇವರಿಂದ ತೆರವಾದ ಸ್ಥಾನಗಳಿಗೆ ಏಪ್ರಿಲ್‌ನಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿಯೇ ಚುನಾವಣೆ ನಡೆದರೆ ವಿಧಾನಸಭೆಯಲ್ಲಿನ ಶಾಸಕರ ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್‌ಗೆ 3 ಹಾಗೂ ಬಿಜೆಪಿಗೆ ಒಬ್ಬರನ್ನು ಆಯ್ಕೆ ಮಾಡುವ ಅವಕಾಶವಿದೆ. ತೆರವಾಗುವ ಈ ಸ್ಥಾನಗಳಿಗಾಗಿ ಕಾಂಗ್ರೆಸ್‌ನಲ್ಲಿ ರೆಹಮಾನ್ ಖಾನ್ ಮರು ಆಯ್ಕೆ ಬಯಸಿದ್ದರೆ, ಸಚಿವ ರೋಷನ್ ಬೇಗ್ ಮತ್ತು ಬಿ.ಎಲ್.ಶಂಕರ್ ಪ್ರಮುಖ ಆಕಾಂಕ್ಷಿಗಳಾಗಿದ್ದು, ಭಾರಿ ಮಟ್ಟದ ಪ್ರಭಾವ ಬೆಳೆಸಿ ಲಾಬಿ ಮಾಡುತ್ತಿದ್ದಾರೆ. ಈಗಾಗಲೇ ಬಿಜೆಪಿ ಜತೆ ಗುರುತಿಸಿಕೊಂಡಿರುವ ರಾಜೀವ್ ಚಂದ್ರಶೇಖರ್ ಕೂಡ ಮತ್ತೆ ರಾಜ್ಯಸಭೆಗೆ ಮರು ಆಯ್ಕೆ ಬಯಸಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಮೇ 13ರಂದು ಕೊನೆಗೊಳ್ಳುವ ವಿಧಾನಸಭೆಗೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಕಾವು ಈಗಿನಿಂದಲೇ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿವಿಧ ಕಸರತ್ತುಗಳನ್ನು ಮಾಡುತ್ತಿವೆ. ಉಳಿದ ಪಕ್ಷಗಳೂ ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ವಿಧಾನಪರಿ ಷತ್‌ನ ಒಟ್ಟು 17 ಸದಸ್ಯರು ನಿವೃತ್ತರಾಗಲಿದ್ದು, ಜೂನ್ ನಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯಿಂದ 11 ಸ್ಥಾನಗಳಿಗೆ, ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ತಲಾ 3 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಲೋಕಸಭೆಗೆ 2019ರ ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈ ವರ್ಷದಿಂದಲೇ ತಾಲೀಮು ಆರಂಭವಾಗಲಿದೆ. ಕರ್ನಾಟಕದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆ ಫಲಿತಾಂಶ ಲೋಕಸಭೆಯ ಚುನಾವಣೆಯ ದಿಕ್ಸೂಚಿ ಎಂದು
ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದ್ದು, ವಿಧಾನ ಸಭೆಯ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಶತ ಪ್ರಯತ್ನ ನಡೆಸುತ್ತಿವೆ.
ಅಧಿಕಾರಾವಧಿ ಕೊನೆಯಾಗಲಿರುವವರು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆ ದವರಲ್ಲಿ ಸಚಿವ ಎಂ.ಆರ್.ಸೀತಾರಾಮ್, ಮೋಟಮ್ಮ, ಕೆ.ಗೋವಿಂದರಾಜ್, ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮರದ್, ರಘುನಾಥ್ ರಾವ್ ಮಲ್ಕಾಪುರೆ, ಭಾನುಪ್ರಕಾಶ್, ಜೆಡಿಎಸ್‌ನ ಸಯ್ಯದ್ ಮದೀರ್ ಆಗಾ, ಪಕ್ಷೇತರ ಸದಸ್ಯ ಬಿ.ಎಸ್.ಸುರೇಶ್ ಜೂನ್ 17ಕ್ಕೆ ನಿವೃತ್ತರಾಗಲಿದ್ದಾರೆ. ಪದವೀಧರ ಕ್ಷೇತ್ರದಿಂದ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಅಮರನಾಥ್ ಪಾಟೀಲ್, ರಾಮಚಂದ್ರೇಗೌಡ, ಶಿಕ್ಷಕರ ಕ್ಷೇತ್ರದಿಂದ ಗಣೇಶ್ ಕಾರ್ಣಿಕ್(ಬಿಜೆಪಿಯವರು), ಮರಿತಿಬ್ಬೇಗೌಡ ಜೂನ್ 21ಕ್ಕೆ ನಿವೃತ್ತರಾಗಲಿದ್ದಾರೆ. ಈ ಸ್ಥಾನಗಳಿಗೆ ಜೂನ್‌ನಲ್ಲೇ ಚುನಾವಣೆ ನಡೆಯಲಿದೆ.