Advertisement

ವೆಲ್ಲಿಂಗ್ಟನ್‌ ಟೆಸ್ಟ್‌; ನ್ಯೂಜಿಲ್ಯಾಂಡಿಗೆ ಇನ್ನಿಂಗ್ಸ್‌ ಗೆಲುವು

06:20 AM Dec 05, 2017 | Team Udayavani |

ವೆಲ್ಲಿಂಗ್ಟನ್‌: ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಹಾಗೂ 67 ರನ್ನುಗಳಿಂದ ವೆಸ್ಟ್‌ ಇಂಡೀಸನ್ನು ಮಣಿಸಿದೆ. 2 ಪಂದ್ಯಗಳ ಕಿರು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

386 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ವೆಸ್ಟ್‌ ಇಂಡೀಸ್‌ 3ನೇ ದಿನದ ಅಂತ್ಯಕ್ಕೆ 2 ವಿಕೆಟಿಗೆ 214 ರನ್‌ ಪೇರಿಸಿ ಹೋರಾಟಕ್ಕೆ ಇಳಿದಿತ್ತು. ಆದರೆ 4ನೇ ದಿನವಾದ ಸೋಮವಾರ ನಾಟಕೀಯ ಕುಸಿತವೊಂದನ್ನು ಕಂಡು 319 ರನ್ನುಗಳಿಗೆ ಆಲೌಟ್‌ ಆಯಿತು. ವಿಂಡೀಸಿನ ಕೊನೆಯ 8 ವಿಕೆಟ್‌ಗಳು ಕೇವಲ 88 ರನ್‌ ಅಂತರದಲ್ಲಿ ಹಾರಿಹೋದವು.
ಸ್ಕೋರ್‌ 231 ರನ್‌ ಆಗಿದ್ದಾಗ ಕ್ರೆಗ್‌ ಬ್ರಾತ್‌ವೇಟ್‌ ಔಟಾಗುವುದರೊಂದಿಗೆ ವಿಂಡೀಸ್‌ ಕುಸಿತ ಮೊದಲ್ಗೊಂಡಿತು. 79 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಬ್ರಾತ್‌ವೇಟ್‌ 91 ರನ್ನಿಗೆ ಔಟಾಗಿ ಶತಕವನ್ನು ತಪ್ಪಿಸಿಕೊಂಡರು. 21 ರನ್‌ ಮಾಡಿ ಆಡುತ್ತಿದ್ದ ಶೈ ಹೋಪ್‌ 37ರ ತನಕ ಸಾಗಿದರು.

ಇವರಿಬ್ಬರ ಪತನದ ಬಳಿಕ ವಿಂಡೀಸಿನ ಯಾವುದೇ ಆಟಗಾರನಿಂದಲೂ ಹೋರಾಟ ಕಂಡುಬರಲಿಲ್ಲ. ರೋಸ್ಟನ್‌ ಚೇಸ್‌ ಮತ್ತು ಸುನೀಲ್‌ ಆ್ಯಂಬ್ರಿಸ್‌ ತಲಾ 18 ರನ್‌ ಮಾಡಿದ್ದೇ ಅನಂತರದ ಹೆಚ್ಚಿನ ಗಳಿಕೆ.

ಮೊದಲ ಇನ್ನಿಂಗ್ಸ್‌ನಲ್ಲಿ ನೀಲ್‌ ವ್ಯಾಗ್ನರ್‌ ಕೆರಿಬಿಯನ್ನರಿಗೆ ಕಂಟಕವಾಗಿ ಪರಿಣಮಿಸಿದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡಿನ ಎಲ್ಲ ಬೌಲರ್‌ಗಳೂ ಪ್ರವಾಸಿಗರ ಮೇಲೆ ಮುಗಿಬಿದ್ದರು. ಹೆನ್ರಿ 3 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಂಪಾದಿಸಿದರು. ಬೌಲ್ಟ್, ಗ್ರ್ಯಾಂಡ್‌ಹೋಮ್‌ ಮತ್ತು ವ್ಯಾಗ್ನರ್‌ ತಲಾ 2 ವಿಕೆಟ್‌ ಕಿತ್ತರು. ಒಟ್ಟು 9 ವಿಕೆಟ್‌ ಕಿತ್ತ ನೀಲ್‌ ವ್ಯಾಗ್ನರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇದರೊಂದಿಗೆ ವಿಂಡೀಸ್‌ ಎದುರಿನ ದ್ವಿಪಕ್ಷೀಯ ಸರಣಿಯಲ್ಲಿ ನ್ಯೂಜಿಲ್ಯಾಂಡ್‌ 14 ಜಯ ಸಾಧಿಸಿದಂತಾಯಿತು. ವಿಂಡೀಸ್‌ 13ರಲ್ಲಿ ವಿಜಯಿಯಾಗಿದೆ. ಇತ್ತಂಡಗಳ ಗೆಲುವಿನ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡ್‌ ಮೊದಲ ಬಾರಿಗೆ ವೆಸ್ಟ್‌ ಇಂಡೀಸನ್ನು ಹಿಂದಿಕ್ಕಿತು.

Advertisement

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-134 ಮತ್ತು 319 (ಬ್ರಾತ್‌ವೇಟ್‌ 91, ಹೆಟ್‌ಮೈರ್‌ 66, ಪೊವೆಲ್‌ 40, ಹೋಪ್‌ 37, ಹೆನ್ರಿ 57ಕ್ಕೆ 3, ಬೌಲ್ಟ್ 87ಕ್ಕೆ 2, ಗ್ರ್ಯಾಂಡ್‌ಹೋಮ್‌ 40ಕ್ಕೆ 2, ವ್ಯಾಗ್ನರ್‌ 102ಕ್ಕೆ 2). 

ಪಂದ್ಯಶ್ರೇಷ್ಠ: ನೀಲ್‌ ವ್ಯಾಗ್ನರ್‌.

2ನೇ ಟೆಸ್ಟ್‌ ಡಿ. 9ರಿಂದ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next