ಹಾಸನ: ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಘೋಷಣೆ ಮಾಡಿದ್ದ 12 ಹೊಸ ತಾಲೂಕುಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಶಾಂತಿಗ್ರಾಮವೂ ಸೇರಿತ್ತು. ಜಿಲ್ಲೆಯ 8 ತಾಲೂಕುಗಳ ಜೊತೆಗೆ ಶಾಂತಿ ಗ್ರಾಮವೂ ಸೇರಿ 9 ತಾಲೂಕುಗಳಾಗುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಶಾಂತಿಗ್ರಾಮ ತಾಲೂಕು ಘೋಷಣೆಯಾಗಿದ್ದು ಬಿಟ್ಟರೆ ಹೊಸ ತಾಲೂಕು ರಚನೆಯ ಪ್ರಕ್ರಿಯೆಯೇ ನಡೆದಿಲ್ಲ. ಇದುವರೆಗೂ ಶಾಂತಿಗ್ರಾಮ ತಾಲೂಕು ರಚನೆ ಸಂಬಂಧ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ ಶಾಂತಿಗ್ರಾಮ ತಾಲೂಕು ರಚನೆ ಬಹುತೇಕ ಕೈ ತಪ್ಪಿದಂತಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರ ವಿಶೇಷ ಆಸಕ್ತಿಯಿಂದ ಶಾಂತಿಗ್ರಾಮ ತಾಲೂಕು ಘೋಷಣೆಯಾಗಿತ್ತು. ಶಾಂತಿಗ್ರಾಮ ರೇವಣ್ಣ ಅವರು ಪ್ರತಿನಿಧಿಸುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೇ ಸೇರುವುದರಿಂದ ಹೊಸ ತಾಲೂಕು ಘೋಷಣೆಯಾಗಿತ್ತು. ಇದು ಜಿಲ್ಲೆಯ ಜನರಿಗೆ ಅನಿರೀಕ್ಷಿತವೂ ಆಗಿತ್ತು. ಶಾಂತಿಗ್ರಾಮ ತಾಲೂಕು ಆಗಬೇಕೆಂಬಬೇಡಿಕೆ ಮಂಡಿಸಿರಲಿಲ್ಲ. ಹಾಗಾಗಿ ಹೊಸ ತಾಲೂಕು ಹಾಸನ ಜಿಲ್ಲೆಗೆ ಬಯಸದೆ ಬಂದ ಭಾಗ್ಯವಾಗಿತ್ತು.
ಹಾಸನಕ್ಕೆ 14 ಕಿ.ಮೀ. ದೂರ: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ – 75ಕ್ಕೆ ಹೊಂದಿ ಕೊಂಡಂತಿರುವ ಶಾಂತಿಗ್ರಾಮ ಹೋಬಳಿ ಕೇಂದ್ರ. ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿರುವ ಆ ಗ್ರಾಮ ಹಾಸನ ನಗರದಿಂದ 14 ಕಿ.ಮೀ. ಅಂತರದಲ್ಲಿದೆ. ಶಾಂತಿಗ್ರಾಮದಲ್ಲಿ 898 ಕುಟುಂಬಗಳು ಒಟ್ಟು 3499 ಜನಸಂಖ್ಯೆಯಿದೆ. ಹೋಬಳಿ ಕೇಂದ್ರವಾಗಿದ್ದರಿಂದ ಕಂದಾಯ ಇಲಾಖೆಯ ನಾಡ ಕಚೇರಿ ಇದೆ.
ಬಂದೀಖಾನೆ ನಿರ್ಮಾಣಕ್ಕೆ ಭೂಮಿ ಮಂಜೂರು: ಗ್ರಾಮದಲ್ಲಿ ಪೊಲೀಸ್ ಠಾಣೆ, ಸಮುದಾಯ ಆರೋಗ್ಯಕೇಂದ್ರ, ಸರ್ಕಾರಿ ಪದವಿಪೂರ್ವ ಕಾಲೇಜು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇದೆ. ಶಾಂತಿಗ್ರಾಮ ಸಮೀಪವೇ ಕೆಎಸ್‌ಆರ್‌ಪಿ. 11 ನೇ ಬೆಟಾಲಿಯನ್‌ನ ಕ್ಯಾಂಪಸ್, ಪೊಲೀಸ್ ತರಬೇತಿ ಶಾಲೆ ನಿರ್ಮಾಣ ವಾಗಿದೆ. ಹಾಸನ ಜಿಲ್ಲಾ ಬಂದೀಖಾನೆ ನಿರ್ಮಾಣಕ್ಕೆ 40 ಎಕರೆ ಭೂಮಿಯೂ ಶಾಂತಿಗ್ರಾಮದ ಬಳಿ ಮಂಜೂರಾಗಿದೆ. ಮುಖ್ಯವಾಗಿ ಪುರಾಣ ಪ್ರಸಿದ್ಧ ದೇವಾಲಯವಿದ್ದು, ಪ್ರಮುಖ ಪ್ರವಾಸಿ ಸ್ಥಳವಾ ಗಿಯೂ ಶಾಂತಿಗ್ರಾಮ ಗುರ್ತಿಸಿ ಕೊಂಡಿರುವುದರಿಂದ ಹೊಸ ತಾಲೂಕು ಅಭಿವೃದ್ಧಿಯಾಗುತ್ತದೆ. ಹಾಸನ ನಗರಕ್ಕೆ ಉಪ ನಗರವಾಗಿ ಬೆಳೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ವಿಶೇಷ ತಹಶೀಲ್ದಾರ್ ನೇಮಿಸಿಲ್ಲ: ಶಾಂತಿಗ್ರಾಮಕ್ಕೆ ಹಾಸನ ತಾಲೂಕಿನ ದುದ್ದ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸೇರಿಸುವುದರೊಂದಿಗೆ ಹಾಸನ ತಾಲೂಕಿನ ಪ್ರಮುಖ ಗ್ರಾಮ ಮೊಸಳೆ ಹೊಸಹಳ್ಳಿಗೆ ಹೋಬಳಿ ಸ್ಥಾನಮಾನ ನೀಡಿ ಶಾಂತಿಗ್ರಾಮ ತಾಲೂಕಿಗೆ ಸೇರಿಸಿ 4 ಹೋಬಳಿಗಳುಳ್ಳ ತಾಲೂಕು ಸೇರ್ಪಡೆ ಮಾಡುವುದು ರೇವಣ್ಣ ಅವರ ಉದ್ದೇಶವಿತ್ತು.
ಶಾಂತಿಗ್ರಾಮ ತಾಲೂಕು ಘೋಷಣೆಯಾದ ನಂತರ ವಿಶೇಷ ತಹಶೀಲ್ದಾರ್ ನೇಮಕ ಸೇರಿದಂತೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಗೆಜೆಟ್ ಅಧಿಸೂಚನೆ ಹೊರಬೀಳಲಿಲ್ಲ. ಹೊಸ ಸರ್ಕಾರ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಹೊಸ ತಾಲೂಕು ರಚನೆಯ ಯಾವ ಸೂಚನೆಯೂ ಕಾಣುತ್ತಿಲ್ಲ.
-ಎನ್. ನಂಜುಂಡೇಗೌಡ