Advertisement

ಕ್ರಿಪ್ಟೋ ಕರೆನ್ಸಿ ಹೂಡಿಕೆಗೆ ಸೀಮಿತ? ಕೇಂದ್ರ ಸರಕಾರದ ಹೊಸ ಚಿಂತನೆ

01:18 AM Nov 18, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಜನಪ್ರಿಯ ವಾಗುತ್ತಿರುವ ಕ್ರಿಪ್ಟೊ ಕರೆನ್ಸಿಗಳ ವಿರುದ್ಧ ಕೇಂದ್ರ ಸರಕಾರ ನಿಷೇಧ ಪ್ರಹಾರ ಮಾಡದೆ ಇರಲು ಚಿಂತನೆ ನಡೆಸಿದೆ. ಅದನ್ನು ಪಾವತಿ ವ್ಯವಹಾರಗಳಿಗೆ ಬಳಕೆ ಮಾಡುವ ಬದಲು ವಿಮೆ ಪಾಲಿಸಿಗಳು, ಚಿನ್ನ ಮತ್ತು ಷೇರುಗಳ ಮೇಲೆ ಹೂಡಿಕೆ ಮಾಡಲು ಅನುಕೂಲ ವಾಗುವಂಥ ವಾತಾವರಣ ಕಲ್ಪಿಸಲು ಮುಂದಾಗಿದೆ.

Advertisement

ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಬಿಟ್‌ ಕಾಯಿನ್‌ ಸಹಿತ ಕ್ರಿಪ್ಟೊ ಕರೆನ್ಸಿ ಕ್ಷೇತ್ರದ ಬಗ್ಗೆ ಪರಾಮರ್ಶೆ ನಡೆಸಲಾಗಿತ್ತು. ನ. 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕ್ರಿಪ್ಟೋ ಕರೆನ್ಸಿ ವಹಿವಾಟು ನಿಯಂತ್ರಿಸುವ ನಿಟ್ಟಿನಲ್ಲಿ ಮಸೂದೆ ಮಂಡಿಸಲು ಸಿದ್ಧತೆ ನಡೆಸುತ್ತಿದೆ.

ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ (ಸೆಬಿ) ಷೇರುಪೇಟೆಯ ವಹಿವಾಟಿನ ನಿಯಂತ್ರಣ ಹೊಂದಿದೆ. ಕ್ರಿಪ್ಟೊ ಕರೆನ್ಸಿ ವಹಿವಾಟುಗಳ ನಿಯಂತ್ರಣದ ಹೊಣೆಯನ್ನೂ ಅದಕ್ಕೆ ವಹಿಸುವ ಇರಾದೆ ಕೇಂದ್ರ ಸರಕಾರದ್ದು. ಇಂಥ ಕ್ರಮದ ಮೂಲಕ ಖಾಸಗಿಯಾಗಿ ವಹಿವಾಟು ನಡೆಸುತ್ತಿರುವ ಕ್ರಿಪ್ಟೋ ಕಂಪೆನಿಗಳ ಮೇಲೆ ನಿಯಂತ್ರಣ ಹೊಂದಲು ಸಿದ್ಧತೆಗಳು ನಡೆದಿವೆ.

ಶೇ. 1 ಜಿಎಸ್‌ಟಿ?
ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ಗಳನ್ನು ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳಂತೆ ಇ-ಕಾಮರ್ಸ್‌ ಜಾಲತಾಣಗಳೆಂದು ಪರಿಗಣಿಸಿ ಶೇ. 1 ದರದಲ್ಲಿ ಜಿಎಸ್‌ಟಿ ವಿಧಿಸುವ ಬಗ್ಗೆಯೂ ಕೇಂದ್ರ ಆಲೋಚಿಸುತ್ತಿದೆ. ಅವುಗಳನ್ನು ಫೆಸಿಲಿಟೇಟರ್‌, ಬ್ರೋಕರೇಜ್‌ (ಕ್ರಿಪ್ಟೊ ಕರೆನ್ಸಿ ಮಾರಾಟ ಮತ್ತು ಖರೀದಿ ವಹಿವಾಟು ನಡೆಸುವವರು), ವಹಿವಾಟು ನಡೆಸಲು ಅವಕಾಶ ನೀಡುವ ವ್ಯವಸ್ಥೆ ಎಂದು ಮೂರು ವಿಭಾಗಗಳನ್ನಾಗಿ ಪರಿಗಣಿಸಲು ಕೇಂದ್ರ ಸಿದ್ಧತೆ ಮಾಡುತ್ತಿದೆ.

ಇದನ್ನೂ ಓದಿ:ತ್ರಿಪುರ ಹಿಂಸಾಚಾರ: ಎಫ್ಐಆರ್‌ ತೆಗೆಯಲು ಸುಪ್ರೀಂ ಸೂಚನೆ

Advertisement

ರದ್ದಾಗಿತ್ತು ನಿಷೇಧ
ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಪೂರ್ಣ ಪ್ರಮಾಣದ ನಿಷೇಧ ಇಲ್ಲ. ಕೊರೊನಾ ಸೋಂಕಿನ ಪ್ರಭಾವ ತಗ್ಗುತ್ತಿರುವಂತೆಯೇ ಬಿಟ್‌ ಕಾಯಿನ್‌ಗಳ ಬಗ್ಗೆ ಹಲವು ರೀತಿಯ ಜಾಹೀರಾತುಗಳು ಪ್ರಕಟವಾಗುತ್ತಿವೆ. 2018ರಲ್ಲಿ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿತ್ತು.

ಆರ್‌ಬಿಐ ನಿಲುವು
ಕ್ರಿಪ್ಟೋ ಬಗ್ಗೆ ಆರ್‌ಬಿಐ ಇದುವರೆಗೆ ಉದಾಸೀನ ನಿಲುವು ಹೊಂದಿದೆ. ಅದಕ್ಕೆ ಅನು ಮೋದನೆ ನೀಡಿದರೆ ಆರ್ಥಿಕ ದೃಢತೆಗೆ ಧಕ್ಕೆ, ಹೂಡಿಕೆಯ ಮೇಲೆ ನಿಯಂತ್ರಣಕ್ಕೆ ಕ್ಲಿಷ್ಟ ಸನ್ನಿವೇಶ ಉಂಟಾಗಬಹುದು ಎಂಬ ನಿಲುವು ಹೊಂದಿದೆ. ಕ್ರಿಪ್ಟೋ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಪ್ರತಿಪಾದಿಸಿದ್ದಾರೆ. ಮಂಗಳವಾರ ನಡೆದಿದ್ದ ಎಸ್‌ಬಿಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸದ್ಯ ಇರುವ ಕ್ರಿಪ್ಟೋ ಖಾತೆಗಳ ಬಗೆಗಿನ ಮಾಹಿತಿ ಉತ್ಪ್ರೇಕ್ಷಿತ ಎಂದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next