ಹೊಸದಿಲ್ಲಿ: ಪಶ್ಚಿಮ ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ 30 ವರ್ಷದ ಸ್ವಿಟ್ಜರ್ಲೆಂಡ್ ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ಓರ್ವನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಯನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಸ್ವಿಟ್ಜರ್ಲೆಂಡ್‌ನಲ್ಲಿ ಭೇಟಿಯಾಗಿದ್ದ 30 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಬೇರೆಯವರ ಜತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಇಬ್ಬರೂ ದೂರದ ಸಂಬಂಧದಲ್ಲಿದ್ದರು ಮತ್ತು ಗುರ್‌ಪ್ರೀತ್ ಆಗಾಗ್ಗೆ ಅವಳನ್ನು ನೋಡಲು ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಕೆಯ ಸಂಬಂಧದ ಬಗ್ಗೆ ಅನುಮಾನವಿದ್ದ ಕಾರಣ, ಈ ಬಾರಿ ಭಾರತಕ್ಕೆ ಬರುವಂತೆ ಮಹಿಳೆಗೆ ಹೇಳಿ ಕೊಲೆಗೆ ಯೋಜನೆ ರೂಪಿಸಿದ್ದ.ಆರೋಪಿ ಮಾಟ ಮಂತ್ರ ಮಾಡುವ ನೆಪದಲ್ಲಿ ಮಹಿಳೆಯ ಕೈಕಾಲುಗಳನ್ನು ಕಟ್ಟಿಹಾಕಿ ನಂತರ ಆಕೆಯನ್ನು ಹತ್ಯೆಗೈದಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಮಹಿಳೆಯ ಕೈ ಮತ್ತು ಕಾಲುಗಳನ್ನು ಲೋಹದ ಸರಪಳಿಗಳಿಂದ ಕಟ್ಟಲಾಗಿತ್ತು, ಅದರ ಮೇಲಿನ ಭಾಗವನ್ನು ಕಪ್ಪು ಪ್ಲಾಸ್ಟಿಕ್ ಚೀಲದಿಂದ ಮುಚ್ಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ತಿಲಕ್ ನಗರ ಪ್ರದೇಶದ ಸರಕಾರಿ ಶಾಲೆಯ ಬಳಿ ಶವ ಪತ್ತೆಯಾಗಿತ್ತು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಶವವನ್ನು ಕಾರಿನಲ್ಲಿ ಅಲ್ಲಿಗೆ ತರಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದರು. ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿ ತಂಡ ವಾಹನದ ಮಾಲಕನನ್ನು ಪತ್ತೆಹಚ್ಚಿದೆ. ಎರಡು ತಿಂಗಳ ಹಿಂದೆ ಕಾರನ್ನು ಮಾರಾಟ ಮಾಡಿರುವುದಾಗಿ ಮಾಲಕರು ಹೇಳಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಿಮವಾಗಿ ಗುರುಪ್ರೀತ್ ನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು. ಅಧಿಕಾರಿಗಳು ಅವರ ಮನೆಯಿಂದ 2.25 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.