ಕಲಬುರಗಿ: ತಮ್ಮ ನಡೆ ನುಡಿ ಹಾಗೂ ಸಮಾಜ ಮುಖೀ ಕಾಯಕದಿಂದ ಈ ಭಾಗದಲ್ಲಿ ಹೆಸರು ಮಾಡಿರುವ ಆಳಂದ ತಾಲೂಕಿನ ಮಾದನಹಿಪ್ಪರಗಿಯ ಲಿಂಗೈಕ್ಯ ಶಿವಲಿಂಗ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ ಹಾಗೂ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯ ರಜತ ಮಹೋತ್ಸವಕ್ಕೆ ಮಾದನಹಿಪ್ಪರಗಿ ಸಜ್ಜುಗೊಂಡಿದ್ದು, ನಾಡಿನ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಶತಮಾನದ ಸಂಭ್ರಮ ಅಂಗವಾಗಿ ಶಿವಲಿಂಗ ಲೀಲಾಮೃತ ಪ್ರವಚನ ಆರಂಭಿಸಲಾಗಿದೆ. ಶತಮಾನೋತ್ಸವ ಅಂಗವಾಗಿ ಜನವರಿ ತಿಂಗಳು ಪೂರ್ತಿ ಆಳಂದ ತಾಲೂಕು ಸೇರಿದಂತೆ ಗಡಿ ಭಾಗ ಮಹಾರಾಷ್ಟ್ರದ ಕೆಲ ಗ್ರಾಮಗಳು ಸೇರಿ 101 ಗ್ರಾಮಗಳಲ್ಲಿ ಪಾದಯಾತ್ರೆ
-ರಥಯಾತ್ರೆ, ಸಸಿ ದೀಕ್ಷೆ, ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ನಡೆಸಲಾಗಿದೆ ಎಂದು ಶಿವಲಿಂಗೇಶ್ವರ ವಿರಕ್ತಮಠದ ಪೀಠಾ ಪತಿ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಉಚಿತ ಆರೋಗ್ಯ ತಪಾಸಣೆ ಹಾಗೂ ಬೃಹತ್ ಉದ್ಯೋಗ ಮೇಳ, ಕೃಷಿ ಮೇಳ, ಹಾನಗಲ್ ಕುಮಾರೇಶ್ವರರ ಸಮಾಜ ಚಿಂತನೆ ಮುಂತಾದ ಕಾರ್ಯಕ್ರಮಗಳು ನೆರವೇರಿವೆ. ಮಾರ್ಚ್ 1ರಂದು 50,001 ತಾಯಂದಿರರಿಗೆ ಉಡಿ ತುಂಬುವುದು ಹಾಗೂ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವಿಧವಾ ಮಹಿಳೆಯರಿಗೂ ಉಡಿ ತುಂಬಲಾಗುವುದು. ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಜಯಮಾಲಾ ಕಾರ್ಯಕ್ರಮ ಉದ್ಘಾಟಿಸುವರು. ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ದ್ರಾಕ್ಷಾಯಣಿ ಶರಣಬಸಪ್ಪ ಅಪ್ಪ ಹಾಗೂ ಖ್ಯಾತ ಹೃದಯ ತಜ್ಞೆ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಚಾಲನೆ ನೀಡುವರು. ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು ಶಿವಯೋಗತ್ರೆ„ಮಾಸಿಕ ಪತ್ರಿಕೆ ಲೋಕಾರ್ಪಣೆಗೊಳಿಸುವರು ಎಂದು ವಿವರಿಸಿದರು.
ಮಾರ್ಚ್ 1ರಂದೇ ಸಂಜೆ 7:00ಕ್ಕೆ ಕಳೆದ 21 ದಿನಗಳಿಂದ ಬಸವಕಲ್ಯಾಣ ತಾಲೂಕು ಗಡಿಗೌಡಗಾಂವನ ಶಾಂತವೀರ ಶಿವಾಚಾರ್ಯ ಸ್ವಾಮಿಗಳಿಂದ ನಡೆದು ಬಂದ ಪುರಾಣ ಮಹಾಮಂಗಲ ನಡೆಯಲಿದೆ. ಶಿವಲಿಂಗೇಶ್ವರ ಶಾಲಾ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿ, ಭಕ್ತವತ್ಸಲ ಪುಸ್ತಕ ಬಿಡುಗಡೆ ಮಾಡುವರು. ಮಾರ್ಚ್ 2ರಂದು ಬೆಳಗ್ಗೆ 10:00ಕ್ಕೆ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆ ರಜತ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಅಪೂರ್ವ ಸಂಗಮ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 3ರಂದು ಬೆಳಗ್ಗೆ 9:00ಕ್ಕೆ 101 ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಶರಣಬಸವೇಶ್ವರ ಸಂಸ್ಥಾನದ ಡಾ| ಶರಣಬಸವಪ್ಪ ಅಪ್ಪ ಮಾಂಗಲ್ಯ ವಿತರಿಸುವರು. ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪುರ, ರಹೀಮಖಾನ್ ಸೇರಿದಂತೆ ಶಾಸಕರು, ಮುಖಂಡರು ಹಾಗೂ ಮಠಾಧೀಶರು ಪಾಲ್ಗೊಳ್ಳುವರು. ಸಂಜೆ 6:00ಕ್ಕೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಅವರು ತಿಳಿಸಿದರು.
ಹಾವೇರಿಯ ಸದಾಶಿವ ಸ್ವಾಮೀಜಿ, ಶಾಂತವೀರ ಶಿವಾಚಾರ್ಯರು, ಪ್ರಭುಶಾಂತ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು, ಗುರುಶಾಂತ ಮಹಾಸ್ವಾಮೀಜಿ, ಶರಣು ಅರಳಿಮಾರ ಸುದ್ದಿಗೋಷ್ಠಿಯಲ್ಲಿದ್ದರು.