ಹುಬ್ಬಳ್ಳಿ: ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ ಮೈದಾನದಲ್ಲಿ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ಆಯೋಜಿಸಿದ್ದ “ಲೀಲಾವತಿ ಪ್ಯಾಲೇಸ್ ಕಪ್ ಸೀಸನ್-2′ ಅಂಡರ್ 14 ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ನ್ಪೋರ್ಟ್ಸ್ ಕ್ಲಬ್ (ಬಿಎಸ್‌ಸಿ) ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಶುಕ್ರವಾರ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಹಾಗೂ ಬೆಳಗಾವಿ ಸ್ಫೋರ್ಟ್ಸ್ ಕ್ಲಬ್ ಮಧ್ಯ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ತಂಡ 30 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 ರನ್ ಪೇರಿಸಿತು. ಗಣೇಶ 42, ಆದಿತ್ಯಾ 19, ಆರವ್ 18 ರನ್ ಕಲೆಹಾಕಿದರು. ತೇಜಸ್ 2, ಅಥರ್ವ, ರುತುರಾಜ, ವಾರದ ತಲಾ 1 ವಿಕೆಟ್ ಕಬಳಿಸಿದರು.
115 ರನ್ ಗುರಿ ಬೆನ್ನಟ್ಟಿದ ಬೆಳಗಾವಿ ಸ್ಫೋರ್ಟ್ಸ್ ಕ್ಲಬ್ ತಂಡ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 115 ಬಾರಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಅಶುತೋಷ್ ಹಿರೇಮಠ ಅಜೇಯ 70, ಸಂಚಿತ ಅಜೇಯ 32 ರನ್ ಹೊಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಅಜೇಯ 70 ರನ್‌ಗಳಿಸಿದ ಅಶುತೋಷ್ ಹಿರೇಮಠ ಪಂದ್ಯಶ್ರೇಷ್ಠ ಪ್ರಶಸ್ತಿ, ಭುವನ್ ಬಸಿಡೋನಿ ಅತ್ಯುತ್ತಮ ಬ್ಯಾಟ್ಸ್‌ಮನ್, ಹೆತ್ ಪಟೇಲ್ ಅತ್ಯುತ್ತಮ ಬೌಲರ್, ಆದಿತ್ಯ ಖೀಲಾರೆ ಮ್ಯಾನ್ ಆಫ್ ದಿ ಸೀರೀಸ್, ಅಶುತೋಷ್ ಹಿರೇಮಠ ಭರವಸೆಯ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಬಹುಮಾನ ವಿತರಣೆಯನ್ನು ರಾಜೇಶ ಶೆಟ್ಟಿ, ಶಶಿಕಾಂತ ಶೆಟ್ಟಿ, ಲಲಿತ ಪಟೇಲ್, ಡಾ| ಲಿಂಗರಾಜ ಬಿಳೇಕಲ್ ನಡೆಸಿಕೊಟ್ಟರು.ಸಂತೋಷ ಹಾಗೂ ಚಂದ್ರಶೇಖರ
ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಹಿರಿಯ ಕ್ರಿಕೆಟಿಗ ಮಂಜುನಾಥ ಕಾಳೆ ಸ್ವಾಗತಿಸಿದರು. ಪಂದ್ಯಾವಳಿ ಆಯೋಜಕ ಸಂದೇಶ ಬೈಲಪ್ಪನವರ ನಿರೂಪಿಸಿದರು.