ಬಳ್ಳಾರಿ: ಪುಸ್ತಕ ಬರೆಯುವುದು ಎಂದರೆ, ಋಷಿತ್ವ ಪಡೆದಂತಾಗಿದ್ದು, ಲೇಖಕರು, ಬರಹಗಾರರು, ಕವಿಗಳು ಬರವಣಿಗೆ ಮಾಡಬೇಕಾದರೆ ಓದುಗರ ನೆಲೆಯಲ್ಲಿ ನಿಂತು ಅವರಿಗೆ ಅರ್ಥವಾಗುವಂತೆ ತಿಳಿದುಕೊಂಡು ಬರವಣಿಗೆ ಮಾಡಬೇಕು ಎಂದು ಹಂಪಿ ಕನ್ನಡ ವಿವಿ ಭಾಷಾಂತರ ವಿಭಾಗದ ಪ್ರಾಧ್ಯಾಪಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪಶಸ್ತ್ರಿ ಪುರಸ್ಕೃತ ಡಾ| ವಿಠuಲರಾವ್ ಗಾಯಕ್ವಾಡ್ ಅಭಿಪ್ರಾಯಪಟ್ಟರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ “ಮರಣ ಮೃದಂಗ’ ಮತ್ತು “ಮನಸ್ಸು ಮಾತಾಡಿದಾಗ’ ಎಂಬ ಎರಡು ಪುಸ್ತಕಗಳ ಬಿಡುಗಡೆ ಮಾಡಿ ಹಾಗೂ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಕಥೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಮಕ್ಕಳ ಕಥೆಗಳು ಉತ್ತಮವಾಗಿ ಮೂಡಿಬಂದಿವೆ. ಸಾಹಿತ್ಯವು ಓದುಗರಿಗೆ ಹಿತವನ್ನು ನೀಡುತ್ತದೆ. ಆಧುನಿಕ ಕಾಲದಲ್ಲಿ ಮೊಬೈಲ್ ಸಾಧನವು ಬಂದಿದ್ದು, ಇದನ್ನು ವಿದ್ಯಾರ್ಥಿಗಳು ಸಂಶೋಧನೆಗೆ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಬುದ್ಧಿಚಾತುರ್ಯ ಉಪಯೋಗಿಸಿ ಅದರಲ್ಲಿನ ಒಳ್ಳೆಯ ಹಾಡು, ಕಥೆಗಳನ್ನು ಮಾಹಿತಿಯನ್ನು ಸಂಗ್ರಹಿಸಿ ಜ್ಞಾನದ ವಿಸ್ತಾರಕ್ಕೆ ಬಳಸಿಕೊಳ್ಳಬೇಕು. ಮೊಬೈಲನ್ನು ಸಂವಹನದ ಜೊತೆ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಬ್ರಿಮ್ಸ್ ಅಕ್ರಮ: ತಪ್ಪಿತಸ್ಥರ ವಿರುದ್ಧ ತಿಂಗಳಲ್ಲಿ ಕ್ರಮ: ರಘುಪತಿ ಭಟ್
ಕನ್ನಡ ವಿಭಾಗದ ಮುಖ್ಯಸ್ಥ ಸಿ. ದೇವಣ್ಣ ಅವರು “ಮರಣ ಮೃದಂಗ’ ಕೃತಿ ಕುರಿತು ಮಾತನಾಡಿದರು. ಸಿರುಗುಪ್ಪದ ಸಂಶೋಧನಾ ವಿದ್ಯಾರ್ಥಿ ದಿವಾಕರ ನಾರಾಯಣ ಅವರು ಮನಸ್ಸು ಮಾತಾಡಿದಾಗ ಕೃತಿ ಪರಿಚಯಿಸಿದರು. ಪ್ರಾಂಶುಪಾಲ ಪ್ರೊ| ಎ. ಹೇಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಜಿಲ್ಲೆಯ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಆಡಳಿತ ಸೇವಾ ಪರೀಕ್ಷೆಯಲ್ಲಿ ಇಡಿ ದೇಶಕ್ಕೆ ಪ್ರಥಮ ರ್‍ಯಾಂಕನ್ನು ಪಡೆದರು. ಕನ್ನಡ ಸಾಹಿತ್ಯವನ್ನು ಪರಿಶ್ರಮಪಟ್ಟು ಅಭ್ಯಸಿಸಿದರೆ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಎನ್ .ಯಶವಂತರಾಜ್ ಅಧ್ಯಕ್ಷತೆ ವಹಿಸಿದ್ದರು. ಲೇಖಕರಾದ ಶಶಿಧರ ಉಬ್ಬಳಗಂಡಿ, ಲಲಿತಕಪ್ಪರಮಠ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೋಳೂರು ಚಂದ್ರಶೇಖರಗೌಡ, ಡಾ| ಬಿ.ಆರ್. ಮಂಜುನಾಥ, ರಮೇಶ್‌ಗೌಡ ಪಾಟೀಲ್, ಉಪನ್ಯಾಸಕರಾದ ಡಾ| ಇಸ್ಮಾಯಿಲ್ ಮಕಾಂದರ್, ಶಿವಾನಂದ ಕಥಕನಹಳ್ಳಿ, ಡಾ| ಕೆ. ಬಸಪ್ಪ, ಡಾ| ಟಿ.ದುರುಗಪ್ಪ, ಷಣ್ಮುಖಯ್ಯ ಸ್ವಾಮಿ ಇದ್ದರು. ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ಕನ್ನಡ ಪ್ರಾಧ್ಯಾಪಕ ನಿಂಗಪ್ಪ ನಿರೂಪಿಸಿದರು. ಡಾ| ತಿಪ್ಪೇರುದ್ರ ಸಂಡೂರು ವಂದಿಸಿದರು.