ಮುಂಬಯಿ: ನ್ಯಾಯಮೂರ್ತಿಗಳ ಹುದ್ದೆಗೆ ಹಾಗೂ ಅಧಿಕಾರ ವ್ಯಾಪ್ತಿಗೆ ರಕ್ಷಣೆ ಇರುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್‌ಗಳಿಗೂ ಇರಬೇಕು ಎಂದು ಆರ್‌ಬಿಐ ನಿವೃತ್ತ ಗವರ್ನರ್ ರಘುರಾಂ ರಾಜನ್ ಪ್ರತಿಪಾದಿಸಿದ್ದಾರೆ. ಮುಂಬೈನಲ್ಲಿ ಶುಕ್ರವಾರ ತಾವೇ ಬರೆದಿರುವ “ಐ ಡೂ ವಾಟ್ ಐ ಡೂ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್‌ಬಿಐ ಗವರ್ನರ್ ಯಾವ ರೀತಿ ಕಾರ್ಯನಿರ್ವಹಿಸಬೇಕು ಮತ್ತು ಅವರ ಅಧಿಕಾರದ ಅವಧಿಯ ಬಗ್ಗೆ ನ್ಯಾಯಮೂರ್ತಿಗಳಿಗೆ ಇದ್ದಂತೆ ರಕ್ಷಣೆ ಇರಬೇಕು. ಇಲ್ಲದಿದ್ದರೆ ಗವರ್ನರ್‌ಗಳಿಗೆ ನಿರೀಕ್ಷೆಗಿಂತ ಮೀರಿದ ರೀತಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಹಿಂದಿನ ಸಂದರ್ಭಗಳಲ್ಲಿ ಗವರ್ನರ್ ಆಗಿದ್ದ ಅಧಿಕಾರಿಗಳು ಆರ್‌ಬಿಐ ಪರವಾಗಿಯೇ ನಿರ್ಣಯ ಕೈಗೊಂಡಿದ್ದಾರೆ ಎಂದರು. ಹಿಂದಿನ ಒಂದು ಸಂದರ್ಭದಲ್ಲಿ ಹಾಲಿ ಇರುವ 3 ವರ್ಷಗಳ ಅವಧಿಯಲ್ಲಿ ಉದ್ದೇಶಿತ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲವೆಂದಿದ್ದಾರೆ.
ಉದ್ಯೋಗ್ಯ ಪ್ರಮಾಣ ಕಡಿಮೆ: ಯುಪಿಎ ಸರಕಾರದ ಆಡಳಿತಕ್ಕೆ ಹೋಲಿಸಿದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆ. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡದೇ ಇದ್ದರೆ ಯುವ ಜನರಲ್ಲಿ ಅತೃಪ್ತಿ ಹೆಚ್ಚಲಿದೆ ಎಂದೂ ಹೇಳಿದ್ದಾರೆ ರಾಜನ್. “ನಮ್ಮ ದೇಶದಲ್ಲಿ ಜನಸಂಖ್ಯೆ ಧನಾತ್ಮಕ ಅಂಶ ಎಂದು ಹೇಳಿಕೊಳ್ಳುತ್ತೇವೆ. ಆದರೆ, ಪ್ರತಿ ತಿಂಗಳು 10 ಲಕ್ಷ ಮಂದಿ ಉದ್ಯೋಗ ನಿರೀಕ್ಷೆಯ ಪಟ್ಟಿಗೆ ಸೇರುತ್ತಾರೆ. ಅವರಿಗೆ ಅಗತ್ಯವಿರುವ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿಲ್ಲ’ ಎಂದಿದ್ದಾರೆ.
ಹಣಕಾಸು ಸೇವಾ ಇಲಾಖೆ ರದ್ದು ಮಾಡಿ: ಕೇಂದ್ರದ ಹಣಕಾಸು ಸಚಿವಾಲಯದಲ್ಲಿರುವ ಹಣಕಾಸು ಸೇವೆಗಳನ್ನು ರದ್ದು ಮಾಡಿ ಎಂದೂ ಅವರು ಒತ್ತಾಯಿಸಿದ್ದಾರೆ. ಈ ಕ್ರಮ ಕೈಗೊಂಡಾಗಲೇ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೆಚ್ಚಿನ ಅಧಿಕಾರ ಸಿಕ್ಕಿದಂತಾಗುತ್ತದೆ. ಜತೆಗೆ ಬ್ಯಾಂಕ್‌ಗಳ ಆಡಳಿತ ಮಂಡಳಿ (ಬಿಬಿಬಿ)ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಸ್ವತಂತ್ರ ಆಡಳಿತ ಮಂಡಳಿಗಳೇ ಬ್ಯಾಂಕ್‌ಗಳನ್ನು ನಿರ್ವಹಿಸಬೇಕೇ ಹೊರತು ಹಣಕಾಸು ಸಚಿವಾಲಯ ಅಲ್ಲ ಎಂದರು ರಾಜನ್. ಏಕೆಂದರೆ ಆಡಳಿತ ಮಂಡಳಿ ಸರಕಾರದಿಂದ ನಿಗದಿತ ಅಂತರ ಕಾಯ್ದುಕೊಂಡಿಲ್ಲ. ಆದರೆ ಅದು ಹೆಸರಿಗೆ ಮಾತ್ರ ಎನ್ನುವಂತಾಗಿದೆ ಎಂದು ಟೀಕಿಸಿದರು. ಬ್ಯಾಂಕ್‌ಗಳ ಆಡಳಿತ ನಿರ್ವಹಣೆಯ ಹೊಣೆಯನ್ನು ಆಡಳಿತ ಮಂಡಳಿಗಳಿಗೇ ವಹಿಸಬೇಕು ಎಂದೂ ಅವರು ಪ್ರತಿಪಾದಿಸಿದರು.