Advertisement

ಜೆಡಿಎಸ್‌ನಂತೆ ಕಾಂಗ್ರೆಸ್‌ ಕೂಡ ಕಟ್ಟಾಜ್ಞೆ ವಿಧಿಸಲಿ

09:36 PM Mar 23, 2019 | |

ಮೈಸೂರು: ಮೈತ್ರಿ ಧರ್ಮ ಪಾಲನೆ ವಿಚಾರದಲ್ಲಿ ಜೆಡಿಎಸ್‌ ವರಿಷ್ಠರು ಈಗಾಗಲೇ ಪಕ್ಷದ ಸಚಿವರು, ಶಾಸಕರಿಗೆ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಮತ ಪ್ರಮಾಣ ಕಡಿಮೆಯಾದರೆ ಅದಕ್ಕೆ ನೀವೇ ಹೊಣೆ ಎಂದು ಕಟ್ಟಾಜ್ಞೆ ವಿಧಿಸಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಮತಗಳಿಕೆ ಪ್ರಮಾಣದ ಆಧಾರದ ಮೇಲೆ ಈ ಚುನಾವಣೆಯಲ್ಲಿನ ಮತಗಳಿಕೆ ನೋಡುತ್ತೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ, ಚುನಾವಣೆ ಬಳಿಕ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯಲ್ಲಿ ಕಾಂಗ್ರೆಸ್‌ ನಾಯಕರು ಕೂಡ ತಮ್ಮ ಪಕ್ಷದ ಸಚಿವರು, ಶಾಸಕರಿಗೆ ಸೂಚಿಸಬೇಕು ಎಂದರು.

ಕ್ರಮ ನಿಶ್ಚಿತ: ಮೈತ್ರಿ ಧರ್ಮ ಪಾಲಿಸದ ಕಾರ್ಯಕರ್ತರಿಗೆ ಮೊದಲು ಎಚ್ಚರಿಕೆ ನೀಡಲಾಗುವುದು, ಆದರೂ ಸರಿಯಾಗದಿದ್ದರೆ ಕ್ರಮ ನಿಶ್ಚಿತ ಎಂದು ಸಚಿವ ಸಾ.ರಾ.ಮಹೇಶ್‌ ಎಚ್ಚರಿಸಿದರು. ಕಾಂಗ್ರೆಸ್‌ ಕೂಡ ಇದೇ ಕ್ರಮವನ್ನು ಅನುಸರಿಸಬೇಕು. ಈ ನೀತಿ ಇದ್ದರೆ ಮಾತ್ರ ನಾವು ಚುನಾವಣೆಯಲ್ಲಿ  ಫ‌ಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಉದ್ದೇಶ. ಅದಕ್ಕಾಗಿ ನಾವುಗಳು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಲಾಗುವುದು. ಮಂಡ್ಯದಲ್ಲಿ ನಿಖಿಲ್‌, ಚಾಮರಾಜ ನಗರದಲ್ಲಿ ಆರ್‌.ಧ್ರುವನಾರಾಯಣ, ಮೈಸೂರು -ಕೊಡಗು ಕ್ಷೇತ್ರದಲ್ಲಿ ಸಿ.ಎಚ್‌.ವಿಜಯಶಂಕರ್‌ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ಮೈತ್ರಿ ಅಭ್ಯರ್ಥಿಗಳಾಗಿದ್ದು, ಇವರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಕರ್ತವ್ಯ.

ಜೆಡಿಎಸ್‌ನೊಳಗೆ ಭಿನ್ನಮತ ಇದ್ದರೆ ನಮ್ಮ ಗಮನಕ್ಕೆ ತನ್ನಿ, ಕಾಂಗ್ರೆಸ್‌ನಲ್ಲಿ ಭಿನ್ನಮತ ಇದ್ದರೆ ನೀವು ಬಗೆಹರಿಸಿಕೊಳ್ಳಿ, ಒಟ್ಟಾರೆ ಎರಡೂ ಪಕ್ಷಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ಆಗಬೇಕು ಎಂದರು. ಕೆ.ಆರ್‌.ನಗರದಲ್ಲಿ ಕಾಂಗ್ರೆಸ್‌ ನಾಯಕರು ಸುಮಲತಾ ಅವರಿಗೆ ಬೆಂಬಲ ನೀಡಿರುವ ವಿಚಾರವನ್ನು ಈಗಾಗಲೇ ಕಾಂಗ್ರೆಸ್‌ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಸಿದ್ದರಾಮಯ್ಯ ಅವರು ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

Advertisement

ಹಳೇ ಮೈಸೂರು ಪ್ರಾಂತ್ಯದಲ್ಲಿ ಈ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಹೀಗಾಗಿ ನಾವು ನಂಬಿಕೆಯ ಮೇಲೆ ಚುನಾವಣೆಗೆ ಹೋಗಬೇಕಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಂಡು ಹೊರಟರೆ ಮೈಸೂರು ಕ್ಷೇತ್ರದಲ್ಲಿ ಸಿ.ಎಚ್‌.ವಿಜಯಶಂಕರ್‌, ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ತೀರ್ಮಾನ ಮಾಡಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅಂದಿನಿಂದ ಪ್ರಾರಂಭವಾದ ಮೈತ್ರಿ ಕುಮಾರಸ್ವಾಮಿ-ಸಿದ್ದರಾಮಯ್ಯ ಅವರವರೆಗೂ ಮುಂದುವರಿದಿದೆ ಎಂದು ತಿಳಿಸಿದರು.

ನಟರಾದ ದರ್ಶನ್‌, ಯಶ್‌ ಬಗ್ಗೆ ಜೆಡಿಎಸ್‌ ಮುಖಂಡರು ವೈಯಕ್ತಿಕವಾಗಿ ಟೀಕೆ ಮಾತನಾಡಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ. ಯಾವುದೇ ಪಕ್ಷದ ಬೆಂಬಲಿಗರ ಬಗ್ಗೆ ಯಾರೂ ವೈಯಕ್ತಿಕವಾಗಿ ಮಾತನಾಡಬಾರದು. ನಟರನ್ನು ಯಾರೂ ವೈಯಕ್ತಿಕವಾಗಿ ಟೀಕಿಸಬೇಡಿ.
-ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next