Advertisement

ಕೃಷಿ, ಸಿರಿಧಾನ್ಯಗಳಂತೆ “ಮಧು ಮೇಳ’

06:28 AM Jan 23, 2019 | |

ಬೆಂಗಳೂರು: ಕೃಷಿ, ತೋಟಗಾರಿಕೆ, ಸಿರಿಧಾನ್ಯಗಳ ಮೇಳಗಳ ನಂತರ ನಗರದಲ್ಲಿ ಈಗ “ಮಧು ಮೇಳ’ದ ಸರದಿ. ನಗರದಲ್ಲಿ ಜೇನು ಕೃಷಿ ಹೆಚ್ಚುತ್ತಿರುವ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ತಾಂತ್ರಿಕ ತರಬೇತಿ ನೀಡುವುದರ ಜತೆಗೆ ಸುಸ್ಥಿರ ಆದಾಯ ಗಳಿಕೆ ಕುರಿತು ತಿಳಿವಳಿಕೆ ನೀಡುವ ಉದ್ದೇಶದಿಂದ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಫೆ.1ರಂದು ಹೆಬ್ಟಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ವಿನೂತನ “ಮಧು ಮೇಳ’ ಆಯೋಜಿಸಲಾಗಿದೆ.

Advertisement

ಸುಮಾರು 10ರಿಂದ 15 ಪ್ರಕಾರದ ಜೇನುತುಪ್ಪ, ಜೇನು ಸಾಕಣೆಗೆ ಪೂರಕವಾದ ಪರಿಕರಗಳು, ಜೇನು ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನ ಮೇಳದ ಪ್ರಮುಖ ಆಕರ್ಷಣೆ ಆಗಿರುತ್ತದೆ. ಜೇನು ಕೃಷಿಕರು, ಕಂಪನಿಗಳಿಂದ ನೇರವಾಗಿ ಶುದ್ಧ ಜೇನುತುಪ್ಪ ಇಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಮೂಲಕ ಬೆಳೆಗಾರರು ಗ್ರಾಹಕರ ನಡುವಿನ ಸಂಪರ್ಕ ಸೇತುವೆಗೆ ಮೇಳ ಸೂಕ್ತ ವೇದಿಕೆ ಆಗಲಿದೆ.

ರಾಜ್ಯದ ಜೇನುಕೃಷಿಯಲ್ಲಿ ನುರಿತ ತಜ್ಞರು ತಾಂತ್ರಿಕ ಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ಜೇನು ಸಾಕಣೆ ಪಾಠವೂ ದೊರೆಯಲಿದೆ ಎಂದು ಬೆಂಗಳೂರು ಕೃಷಿ ವಿವಿಯ ಅಖೀಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆಯ ಮುಖ್ಯ ವಿಜ್ಞಾನಿ ಡಾ.ಕೆ.ಟಿ. ವಿಜಯಕುಮಾರ್‌ “ಉದಯವಾಣಿ’ಗೆ ತಿಳಿಸಿದರು. 

300ಕ್ಕೂ ಅಧಿಕ ಜನ ಭಾಗಿ: ಸುಮಾರು ಒಂದು ದಶಕದ ನಂತರ ನಗರದಲ್ಲಿ ಮಧು ಮೇಳ ನಡೆಯುತ್ತಿದೆ. ಈ ಹಿಂದೆ ಜೇನು ಕುಟುಂಬಗಳ ನಿರ್ವಹಣೆ ಕುರಿತು ಸಣ್ಣ ಪ್ರಮಾಣದಲ್ಲಿ ಮೇಳ ಆಯೋಜಿಸಲಾಗಿತ್ತು. ಈ ಬಾರಿ “ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಆದಾಯ ಗಳಿಕೆ’ ಕುರಿತು ಬೆಳೆಗಾರರಿಗೆ ತಿಳಿವಳಿಕೆ ನೀಡುವುದು ಮೂಲ ಉದ್ದೇಶವಾಗಿದೆ.

ರಾಜ್ಯಮಟ್ಟದ ಮೇಳದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ, ಮೈಸೂರು, ರಾಮನಗರ, ಚಾಮರಾಜನಗರ ಸೇರಿ ವಿವಿಧೆಡೆಯಿಂದ 300ಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ, ಐಟಿ-ಬಿಟಿ ಕ್ಷೇತ್ರದಲ್ಲಿರುವವರು ಚಾವಣಿಯಲ್ಲಿ ಗಾರ್ಡನಿಂಗ್‌ ಅಥವಾ ತರಕಾರಿ ಬೆಳೆಯುವ ಪ್ರವೃತ್ತಿ ಹೆಚ್ಚುತ್ತಿದೆ.

Advertisement

ಇದಕ್ಕೆ ಪೂರಕವಾಗಿ ಜೇನು ಸಾಕಣೆ ಮತ್ತು ಜೇನುತುಪ್ಪ ಸೇವನೆ ಪ್ರಮಾಣವೂ ಅಧಿಕವಾಗಿದೆ ಎಂದು ಅವರು ವಿವರಿಸಿದರು. ತಾಂತ್ರಿಕ ಗೋಷ್ಠಿಗಳಲ್ಲಿ ಜೇನುನೊಣಗಳ ಪರಾಗಸ್ಪರ್ಶ ಮತ್ತು ಬೆಳೆಗಳ ಇಳುವರಿ, ಜೇನುತುಪ್ಪ ಮತ್ತು ಇತರೆ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆ, ಹೆಜ್ಜೆàನು ಸಂರಕ್ಷಣೆ ಮತ್ತು ಸುಸ್ಥಿರ ಕೊಯ್ಲು, ಜೇನು ಕುಟುಂಬಕ್ಕೆ ತಗಲುವ ಕೀಟಗಳು ಮತ್ತು ರೋಗಗಳು, ಜೇನು ಕೃಷಿ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರಗಳ ಕುರಿತು ತಜ್ಞರು ಮತ್ತು ಪ್ರಗತಿಪರ ರೈತರು ವಿಚಾರ ಮಂಡಿಸಲಿದ್ದಾರೆ.

ಅಖೀಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ, ರಾಜ್ಯ ತೋಟಗಾರಿಕೆ ಮಿಷನ್‌ ಏಜೆನ್ಸಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಇದಕ್ಕೆ ಕೈಜೋಡಿಸಿವೆ. ಫೆ.1ರಂದು ಬೆಳಗ್ಗೆ 9.30ಕ್ಕೆ ಮೇಳಕ್ಕೆ ಚಾಲನೆ ದೊರೆಯಲಿದೆ. ರೈತರು ಜೇನುನೊಣ ಸಾಕಣೆ ಮಾಡುವುದರಿಂದ ಬೆಳೆಗಳಿಗೆ ಪರಾಗಸ್ಪರ್ಶ ಆಗುತ್ತದೆ. ಇದರಿಂದ ಇಳುವರಿ ದುಪ್ಪಟ್ಟಾಗುವ ಸಾಧ್ಯತೆಯೂ ಇದೆ.

ಜೇನು ಮತ್ತು ಪೂರಕ ಉತ್ಪನ್ನಗಳು ಸಿಗುವುದರಿಂದ ಸುಸ್ಥಿರ ಆದಾಯವೂ ದೊರೆಯುತ್ತದೆ. ಪ್ರಪಂಚದಲ್ಲಿ ಸುಮಾರು 3.52 ಲಕ್ಷ ಸಸ್ಯಗಳ ಪೈಕಿ 3.06 ಲಕ್ಷ ಸಸ್ಯಗಳಿಗೆ (ಶೇ.87.50) ಜೇನುನೊಣಗಳ ಪರಾಗಸ್ಪರ್ಶ ಅನಿವಾರ್ಯ. ಪರಾಗಸ್ಪರ್ಶದ ಜತೆಗೆ ಜೇನು, ಮೇಣ, ರಾಜಶಾಹಿರಸ, ಜೇನು ವಿಷ, ಅಂಟು ಮತ್ತಿತರ ಉತ್ಪನ್ನಗಳೂ ದೊರೆಯುತ್ತವೆ ಎನ್ನುತ್ತಾರೆ ಜೇನುಕೃಷಿ ತಜ್ಞರು.

ಜಿಕೆವಿಕೆಯಲ್ಲಿ ಶಾಶ್ವತ ಮಧುವನ: ಈ ಮಧ್ಯೆ ಜಿಕೆವಿಕೆಯಲ್ಲಿ ಶಾಶ್ವತವಾಗಿ “ಮಧುವನ’ ತೆರೆಯಲಾಗಿದ್ದು, ವರ್ಷಪೂರ್ತಿ ಇದು ಕಾರ್ಯನಿರ್ವಹಿಸುತ್ತದೆ. ಮಧುವನದಲ್ಲಿ ಕಡ್ಡಿ ಜೇನು, ನಸಿರು, ತುಡುವೆ ಮತ್ತಿತರ ಪ್ರಕಾರದ ಜೇನು ಕೃಷಿ ಪ್ರದರ್ಶನ ಮತ್ತು ಜೇನುತುಪ್ಪ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಜೇನು ನೊಣಗಳನ್ನು ಸೆಳೆಯಲು ತರಕಾರಿ, ಅಲಂಕಾರಿಕ ಹೂವು ಮತ್ತು ಗಿಡಗಳನ್ನೂ ಬೆಳೆಯಲಾಗಿದೆ. ಈ ಜೇನು ನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಾಗಿರುವುದನ್ನೂ ಇಲ್ಲಿ ಕಾಣಬಹುದು ಎಂದು ಡಾ.ವಿಜಯಕುಮಾರ್‌ ತಿಳಿಸಿದರು. 

ಮೇಳದಲ್ಲಿ ಸಿಗಲಿರುವ ಜೇನುತುಪ್ಪ: ಹೆಜ್ಜೆನು, ತುಡುವೆ ಜೇನು, ನಸಿರು ಜೇನುತುಪ್ಪ, ಹೂವುಗಳಾದ ಹೊಂಗೆ, ಸೂರ್ಯಕಾಂತಿ, ಲಿಚಿ (ಉತ್ತರ ಭಾರತದಲ್ಲಿ ಸಿಗುತ್ತದೆ) ಜೇನುತುಪ್ಪ, ಕೂರ್ಗ್‌, ನಿಲಗಿರಿ ಜೇನುತಪ್ಪು ದೊರೆಯಲಿದೆ.

ವಿನೂತನ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಮಧು ಮೇಳ ಮುಖ್ಯ ಉದ್ದೇಶ ರೈತರ ಇಳುವರಿ ಹೆಚ್ಚಿಸುವುದು. ಇದರ ಜತೆಗೆ ಜೇನುಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ತಯಾರಿಸುವ ಸಣ್ಣ ಉದ್ಯಮಿಗಳಿಗೆ, ನಗರದಲ್ಲಿ ಮೇಲ್ಛಾವಣಿಯಲ್ಲಿ ತರಕಾರಿಯೊಂದಿಗೆ ಜೇನುಕೃಷಿ ಮಾಡುವವರಿಗೂ ಮೇಳ ಸೂಕ್ತ ವೇದಿಕೆ ಆಗಲಿದೆ. ಹತ್ತಾರು ಪ್ರಕಾರದ ಜೇನು, ಉತ್ಪನ್ನಗಳು, ಪರಿಕರಗಳು ಸಿಗುವುದರಿಂದ ಗ್ರಾಹಕರಿಗೂ ಅನುಕೂಲ ಆಗಲಿದೆ. 
-ಡಾ.ಎಸ್‌. ರಾಜೇಂದ್ರ ಪ್ರಸಾದ್‌, ಬೆಂಗಳೂರು ಕೃಷಿ ವಿವಿ ಕುಲಪತಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next