ಲಕ್ನೋ: ನಿರಂತರವಾಗಿ ಸುರಿಯುತ್ತಿರುವ ಮಳೆ ಒಂದೆಡೆಯಾದರೆ, ಸಿಡಿಲು ಬಡಿದು ಸುಮಾರು 33 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಭಾನುವಾರ ಮುಂಜಾನೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಹಾವು ಕಚ್ಚಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೂಡಾ ನಡೆದಿರುವುದಾಗಿ ಪ್ರಕಟಣೆ ತಿಳಿಸಿದೆ. ಅಲ್ಲದೇ ಮಿಂಚು ಹೊಡೆದು 13 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಸಿಡಿಲು ಬಡಿದು ಕಾನ್ಪುರದಲ್ಲಿ ಏಳು ಮಂದಿ, ಫತೆಪುರ್ ನಲ್ಲಿ ಏಳು ಮಂದಿ, ಜಾನ್ಸಿಯಲ್ಲಿ ಐದು, ಜಾಲೌನ್ ನಲ್ಲಿ ನಾಲ್ಕು, ಹಮೀರ್ ಪುರ್ ನಲ್ಲಿ 3, ಘಾಜಿಪುರ್ ನಲ್ಲಿ ಇಬ್ಬರು, ಜೌನ್ಪುರ್, ಪ್ರತಾಪ್ ಗಢ್, ಕಾನ್ಪುರ್ ಡೆಹಾಟ್ ಮತ್ತು ಚಿತ್ರಕೂಟದಲ್ಲಿ ತಲಾ ಓರ್ವರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.
ಸಿಡಿಲು ಬಡಿದು ಹಾಗೂ ಹಾವು ಕಚ್ಚಿ ಸಾವನ್ನಪ್ಪಿರುವ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತ್ರಸ್ತ ಕುಟುಂಬಸ್ಥರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ಅಲ್ಲದೇ ಸಿಡಿಲು ಬಡಿದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸೂಕ್ಷ ಚಿಕಿತ್ಸೆಯ ನೆರವು ನೀಡಬೇಕೆಂದು ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.