Advertisement

ಮಳೆಗಾಲಕ್ಕೆ ಮೊದಲು ಅಳವಡಿಸಿ ಮಿಂಚು ಪ್ರತಿಬಂಧಕ

05:31 AM Feb 09, 2019 | |

ನರಿಮೊಗರು: ಪುತ್ತೂರು ತಾಲೂ ಕಿನ ಕೆಲ ಗ್ರಾಮಗಳಲ್ಲಿ ಸಿಡಿಲು-ಮಿಂಚಿನ ಹೊಡೆತಕ್ಕೆ ಹಲವಾರು ಜೀವಗಳು ಬಲಿಯಾ ಗಿವೆ. ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ಸಂಜೆ ಮಿಂಚು-ಗುಡುಗು ಸಹಿತ ಭಾರೀ ಮಳೆ ಸುರಿದಿತ್ತು. ಈ ಸಂದರ್ಭ ಸಿಡಿಲು ಬಡಿದು ಹರಿಹರ ಪಳ್ಳತ್ತಡ್ಕ ಗ್ರಾಮದ ಮಿತ್ತಮಜಲು ನಿವಾಸಿ ಕೃಷ್ಣಪ್ಪ ಅವರ ಪುತ್ರ ಪ್ರವೀಣ್‌ (22) ಮೃತಪಟ್ಟಿದ್ದರು. ಆಯ್ದ ಸ್ಥಳ ಗಳಲ್ಲಿ ಮಿಂಚು ಪ್ರತಿಬಂಧಕವನ್ನು ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಹಲವು ವರ್ಷಗಳ ಒತ್ತಾಯವಾಗಿದೆ. ಆದರೆ ಈ ಯೋಜನೆ ನಿರೀಕ್ಷಿತ ಪ್ರಗತಿಯನ್ನು ಕಂಡಿಲ್ಲ.

Advertisement

ಮಳೆಗಾಲ ಬಂತೆಂದರೆ ಸಾಕು, ಇಲ್ಲಿನ ಗ್ರಾಮಗಳಲ್ಲಿನ ಜನರು ಭಯಪಡುತ್ತಾರೆ. ಮಿಂಚು, ಸಿಡಿಲು ಬಂತೆಂದರೆ ಜನ ಬೆವರಿಕೊಳ್ಳುವ ಪರಿಸ್ಥಿತಿ ಇಲ್ಲಿದೆ. ಪ್ರತೀ ಮಳೆಗಾಲದಲ್ಲಿಯೂ ಸಿಡಿಲಿನ ಹೊಡೆತಕ್ಕೆ ಅನೇಕ ಜೀವಗಳು ಬಲಿಯಾಗುತ್ತಿವೆ. ಕೃಷಿ ತೋಟಗಳೂ ನಾಶವಾಗುತ್ತಿದೆ.

ಮನವಿ ಸಲ್ಲಿಸಲಾಗಿತ್ತು
ಸಿಡಿಲಿನಿಂದ ನಮ್ಮನ್ನು ರಕ್ಷಿಸಿ ಎಂದು ನಾಲ್ಕು ವರ್ಷಗಳ ಹಿಂದೆಯೇ ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಮನವಿ ಮಾಡಿದ್ದರು. ಅದರ ಫಲವಾಗಿ ಪುತ್ತೂರು ತಾಲೂಕಿನ ಕೆಲವೊಂದು ಸ್ಥಳಗಳಲ್ಲಿ ಮಿಂಚು ಪ್ರತಿ ಬಂಧಕ (ಲೈಟ್ನಿಂಗ್‌ ಅರೆಸ್ಟರ್‌) ಟವರ್‌ ನಿರ್ಮಾಣ ಮಾಡುವ ಯೋಜನೆಯನ್ನು ಮಾಡಲಾಗಿತ್ತು. ಈ ಕುರಿತು ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆ ಇಲಾಖಾ ಹಂತದಲ್ಲೇ ಬಾಕಿ ಇದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳ ಜಾಣ ಮೌನದಿಂದಾಗಿ ನಮ್ಮ ಬೇಡಿಕೆಗೆ ಯಾವುದೇ ಮನ್ನಣೆ ಸಿಕ್ಕಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಭರವಸೆ ನೀಡಿದ್ದರು
ನಿಗದಿತ ಸ್ಥಳವನ್ನು ಗುರುತಿಸಿ ಮಿಂಚು ಪ್ರತಿಬಂಧಕ ಟವರ್‌ ನಿರ್ಮಾಣ ಮಾಡಲಾಗುತ್ತದೆ. ಜನವಸತಿ ಇಲ್ಲದ ಎತ್ತರದ ಸ್ಥಳವನ್ನು ಆಯ್ಕೆ ಮಾಡಿ ಅಲ್ಲಿ ಟವರ್‌ ನಿರ್ಮಾಣ ಮಾಡಲಾಗುತ್ತದೆ. ಎತ್ತರದ ಸ್ಥಳದಲ್ಲಿ ಟವರ್‌ ನಿರ್ಮಾಣ ಮಾಡಿ ಅಲ್ಲಿ ಮಿಂಚು ಪ್ರತಿಬಂಧಕವನ್ನು ಅಳವಡಿಸಿದಲ್ಲಿ ಅದರ ಸುತ್ತಮುತ್ತಲ ಹಲವಾರು ಗ್ರಾಮಗಳಿಗೆ ಹೊಡೆಯುವ ಸಿಡಿಲಿನ ಹೊಡೆತವನ್ನು ತಪ್ಪಿಸಬಹುದು. ಒಳಮೊಗ್ರು ಗ್ರಾಮವನ್ನು ಕೇಂದ್ರೀಕರಿಸಿ ಮೊದಲ ಟವರ್‌ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಅಂದಿನ ಪುತ್ತೂರು ತಹಶಿಲ್ದಾರ್‌ ಕುಳ್ಳೇಗೌಡ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ ಇದು ಕೇವಲ ಭರವಸೆಯಾಗಿಯೇ ಉಳಿದಿದೆ.

ಒಳಗೊಳ್ಳುವ ಗ್ರಾಮಗಳು
ಒಳಮೊಗ್ರು ಗ್ರಾಮದಲ್ಲಿ ಟವರ್‌ ನಿರ್ಮಾಣವಾದಲ್ಲಿ ಸುತ್ತಲ ಕೆದಂಬಾಡಿ, ಕೆಯ್ಯೂರು, ಅರಿಯಡ್ಕ, ಬಡಗನ್ನೂರು, ಬೆಟ್ಟಂಪಾಡಿ, ಕುರಿಯ, ಆರ್ಯಾಪು, ಮುಂಡೂರು ಗ್ರಾಮ ವ್ಯಾಪ್ತಿಯಲ್ಲಿ ಬರುವ ಮಿಂಚಿನ ಹೊಡೆತವನ್ನು ತಡೆಯಬಹುದಾಗಿದೆ. ಸವಣೂರು ಭಾಗದಲ್ಲಿ ನಿರ್ಮಾಣವಾದರೆ ಪಾಲ್ತಾಡಿ, ಮಣಿಕ್ಕರ, ಸವಣೂರು, ಪುಣ್ಚಪ್ಪಾಡಿ, ಕಾಣಿಯೂರು,ಬೆಳಂದೂರು, ಕುದ್ಮಾರು ಭಾಗದ ಸಿಡಿಲಿನ ತೀವ್ರತೆಯನ್ನು ತಡೆಯಬಹುದು.

Advertisement

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ?
2015ರಲ್ಲಿ ಪುತ್ತೂರು ತಾಲೂಕಿನ ಕಾಣಿಯೂರು, ಪಾಲ್ತಾಡಿ, ನರಿಮೊಗರು, ಈಶ್ವರಮಂಗಲ ಮೊದಲಾದೆಡೆ ಸಿಡಿಲಿನ ಹೊಡೆತಕ್ಕೆ 10ಕ್ಕೂ ಅಧಿಕ ಜನರು ಬಲಿಯಾಗಿದ್ದರು. ಅನಂತರದಲ್ಲೂ ಪ್ರತೀ ಮಳೆಗಾಲದಲ್ಲಿ ಸಿಡಿಲು ಬಡಿದು ಹಲವಾರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇದನ್ನು ಮನಗಂಡ ಸಂಬಂಧಪಟ್ಟ ಇಲಾಖೆ ಟವರ್‌ ನಿರ್ಮಾಣಕ್ಕಾಗಿ 2015ರಲ್ಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಜಿಲ್ಲೆಯ ಅನೇಕ ಕಡೆಗಳಲ್ಲಿ ಟವರ್‌ ನಿರ್ಮಾಣ ಮಾಡುವ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖೀಸ ಲಾಗಿತ್ತು. ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ಕಡತದಲ್ಲೇ ಬಾಕಿಯಾಗಿದೆ.

ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ತನ್ನಿಂದಾದ ಪ್ರಯತ್ನವನ್ನು ಮಾಡುತ್ತೇನೆ. ನಾಲ್ಕು ವರ್ಷಗಳಿಂದ ಟವರ್‌ ನಿರ್ಮಾಣದ ಬೇಡಿಕೆ ಈಡೇರಿಲ್ಲ. ಅಧಿಕಾರಿಗಳ ಜತೆ ಚರ್ಚೆ ನಡೆಸಿ ಪ್ರಸ್ತಾವನೆ ಯನ್ನು ಕಾರ್ಯರೂಪಕ್ಕೆ ತರಲು ಮುಂದಾ ಗುತ್ತೇನೆ ಎಂದು ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಹೇಳಿದ್ದಾರೆ.

ಈ ಬಾರಿ ನಿರ್ಮಾಣ ಆಗಬಹುದೇ?
ಈ ಬಾರಿಯ ಮಳೆಗಾಲಕ್ಕೆ ಮುನ್ನ ಟವರ್‌ ನಿರ್ಮಾಣ ಕಾಮಗಾರಿ ನಡೆಯ ಬೇಕೆಂದಾದರೆ ಸ್ಥಳೀಯ ಶಾಸಕರು, ಸಂಸದರು ಇನ್ನಿತರ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕಿದೆ.

ಪರಿಶೀಲನೆ ನಡೆಸುವೆ
ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಯಾವ ಹಂತಕ್ಕೆ ತಲುಪಿದೆ ಎನ್ನುವ ಕುರಿತು ಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕರಿಂದ ಟವರ್‌ ನಿರ್ಮಾಣಕ್ಕೆ ಒತ್ತಡವೂ ಇದೆ. ಸರಕಾರದಿಂದ ವರದಿ ಬಂದ ಬಳಿಕ ಕಾಮಗಾರಿ ನಿರ್ಮಾಣವಾಗಲಿದೆ.
– ಎಚ್.ಕೆ. ಕೃಷ್ಣಮೂರ್ತಿ,
ಸಹಾಯಕ ಆಯುಕ್ತರು, ಪುತ್ತೂರು

ಕೆಡಿಪಿ ಸಭೆಯಲ್ಲಿ ಪ್ರಸ್ತಾವಿಸುವೆ
ಮಿಂಚು ಪ್ರತಿಬಂಧಕ ಟವರ್‌ ನಿರ್ಮಾಣ ವಿಚಾರ ನೆನೆಗುದಿಯಲ್ಲಿರುವುದು ನನ್ನ ಗಮನದಲ್ಲಿದೆ. ಜಿ.ಪಂ. ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸುವೆ. ಈ ಬಾರಿಯ ಮಳೆಗಾಲಕ್ಕೆ ಮುನ್ನವೇ ಟವರ್‌ ನಿರ್ಮಾಣ ಮಾಡುವಂತೆ ಆಗ್ರಹಿಸಲಾಗುವುದು.
– ಅನಿತಾ ಹೇಮನಾಥ ಶೆಟ್ಟಿ,
ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರು

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next