ಢಾಕಾ: ಮದುವೆ ದಿಬ್ಬಣ ಆಗಮಿಸುತ್ತಿದ್ದ ಸಂದರ್ಭದಲ್ಲಿಯೇ ಭಾರೀ ಪ್ರಮಾಣದ ಮಿಂಚು ಹೊಡೆದ ಪರಿಣಾಮ ಕೆಲವೇ ಕ್ಷಣಗಳಲ್ಲಿ ಹದಿನಾರು ಮಂದಿ ಸಾವನ್ನಪ್ಪಿದ್ದು, ವರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ಬುಧವಾರ (ಆಗಸ್ಟ್ 04) ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ
ವಿವಾಹ ಕಾರ್ಯಕ್ರಮಕ್ಕಾಗಿ ಕಲ್ಯಾಣ ಮಂಟಪಕ್ಕೆ ತೆರಳಲು ವರನ ಜತೆಗೂಡಿ ಸಂಬಂಧಿಕರು ಶಿಬ್ ಗಂಜ್ ಪ್ರದೇಶದಲ್ಲಿ ಬೋಟ್ ನಿಂದ ಇಳಿದು ಒಂದು ಕಡೆ ನಿಂತಿದ್ದ ವೇಳೆ ಮಿಂಚು ಹೊಡೆದು ಈ ದುರ್ಘಟನೆ ಸಂಭವಿಸಿರುವುದಾಗಿ ವರದಿ ವಿವರಿಸಿದೆ.
ಈ ವೇಳೆ ವಧು ಇಲ್ಲದಿದ್ದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಎಎಫ್ ಪಿ ನ್ಯೂಸ್ ಏಜೆನ್ಸಿ ತಿಳಿಸಿದೆ. ಮಿಂಚು ಹೊಡೆದ ಪರಿಣಾಮ 16 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಭಾರೀ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿರುವುದಾಗಿ ವರದಿ ಹೇಳಿದೆ.
ಪ್ರತಿ ವರ್ಷ ದಕ್ಷಿಣ ಏಷ್ಯಾದಲ್ಲಿ ಮಿಂಚು ಹೊಡೆದು ನೂರಾರು ಮಂದಿ ಸಾವನ್ನಪ್ಪುತ್ತಾರೆ. ಅಧಿಕೃತ ಅಂಕಿಅಂಶದ ಪ್ರಕಾರ, 2016ರಲ್ಲಿ 200ಕ್ಕೂ ಅಧಿಕ ಮಂದಿ ಮಿಂಚು ಹೊಡೆದು ಸಾವನ್ನಪ್ಪಿದ್ದರು. ಕೇವಲ ಮೇ ತಿಂಗಳಿನಲ್ಲಿಯೇ 82 ಮಂದಿ ಮಿಂಚು ಹೊಡೆದು ಸಾವನ್ನಪ್ಪಿರುವುದಾಗಿ ತಿಳಿಸಿದೆ.