Advertisement

ತಾತ್ಕಾಲಿಕ ರಸ್ತೆಯಲ್ಲಿ ಲಘು ವಾಹನ ಓಡಾಟ

11:48 AM Sep 13, 2018 | |

ಸುಳ್ಯ : ಮಡಿಕೇರಿ-ಸಂಪಾಜೆ ರಸ್ತೆಯಲ್ಲಿ ಲಘು ವಾಹನ ಓಡಾಟ ಬುಧವಾರ ಆರಂಭಗೊಂಡಿದೆ. ಪ್ರಾಕೃತಿಕ ವಿಕೋಪದಿಂದ ಗುಡ್ಡ ಕುಸಿತ ಉಂಟಾಗಿ ಸಂಪಾಜೆ -ಮಡಿಕೇರಿ ರಸ್ತೆಯ ಅಲ್ಲಲ್ಲಿ ಹಾನಿ, ಜೋಡುಪಾಲ ಬಳಿ ಎರಡು ಕಡೆ ಭೂಕುಸಿತವಾಗಿತ್ತು. ಆ. 17ರಿಂದ ದುರಸ್ತಿ ಆರಂಭವಾಗಿತ್ತು.

Advertisement

ತಾತ್ಕಾಲಿಕ ರಸ್ತೆ
ಹಳೆ ರಸ್ತೆ ಮರು ನಿರ್ಮಾಣಕ್ಕೆ ಕಾಲಾವಕಾಶ ತಗಲುವ ಕಾರಣ ತಾತ್ಕಾಲಿಕ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆರಂಭದಲ್ಲಿ ಕಾಲ್ನಡಿಗೆ ಸಂಪರ್ಕಕ್ಕೆ ವ್ಯವಸ್ಥೆ, ಅನಂತರ ದ್ವಿಚಕ್ರ ವಾಹನ ಓಡಾಟ, ಪ್ರಸ್ತುತ ಲಘು ವಾಹನ ಓಡಾಟಕ್ಕೆ ಸನ್ನದ್ಧಗೊಳಿಸಲಾಗಿದೆ.

6 ಮೀ. ಅಗಲ
ತಾತ್ಕಾಲಿಕ ರಸ್ತೆ 6 ಮೀ. ಅಗಲವಿದೆ. ಭೂ ಕುಸಿತದ ಸ್ಥಳದಿಂದ ಮಣ್ಣು ತೆರವು ಮಾಡಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಮೇಲೆ ನೀರು ಹೋಗದಂತೆ ಚರಂಡಿ ನಿರ್ಮಿಸಲಾಗಿದೆ. ತಾತ್ಕಾಲಿಕ ರಸ್ತೆ ಸನಿಹದಲ್ಲಿ ಜಲ್ಲಿ, ಜಲ್ಲಿಪುಡಿ ಬಳಸಿ ನೆಲದ ಮೇಲೆ ಜಿಯೋಫ್ಯಾಬ್ರಿಕ್‌ ಪದರ ಹಾಕಿ, ಒಂದೂವರೆ ಅಡಿಯಷ್ಟು ದಪ್ಪ ಗ್ರಾನ್ಯುಲಾರ್‌ ಸಬ್‌ಬೇಸ್‌ ಪದರ ಹಾಸುವ ಕಾಮಗಾರಿ ಪ್ರಗತಿಯಲ್ಲಿದೆ.

ಶಾಶ್ವತ ರಸ್ತೆ
ತಾತ್ಕಾಲಿಕ ರಸ್ತೆಯ ಜತೆಗೆ ಶಾಶ್ವತ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ಚಿಂತನೆ ನಡೆಸಿದೆ. ಎಂಬ್ಯಾಂಕ್‌ವೆುಂಟ್‌ ನಿರ್ಮಾಣ ಮಾಡಿ ಇಕ್ಕೆಲಗಳು ಕುಸಿಯದ ಹಾಗೆ ರಿಟೇನಿಂಗ್‌ ವಾಲ್‌, ಗೇಬಿಯನ್‌ ವಾಲ್‌ ಬಳಸಿ ಶಾಶ್ವತ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ. ತಾತ್ಕಾಲಿಕ ರಸ್ತೆ ನಿರ್ಮಾಣ ಪೂರ್ಣಗೊಂಡು ಲಘು ವಾಹನಗಳು ಸಂಚಾರ ನಡೆಸುತ್ತಿವೆ ಎಂದು ಹೆದ್ದಾರಿ ಇಲಾಖೆ ಎಂಜಿನಿಯರ್‌ ಸುಬ್ಬರಾಮ ಹೊಳ್ಳ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ (ಬಿಆರ್‌ಒ) ಹಾಗೂ ಆರ್ಮಿ ಎಂಜಿನಿಯರಿಂಗ್‌ ವಿಭಾಗದ ತಜ್ಞರು, ರಸ್ತೆ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

Advertisement

ತಿಂಗಳೊಳಗೆ ಪುನರಾರಂಭ
ರಸ್ತೆಯ ಅಂದಿನ ಸ್ಥಿತಿ ಅವಲೋಕಿಸಿದ ಸಂದರ್ಭ ಮೂರು ತಿಂಗಳ ಕಾಲ ಮರು ಸಂಪರ್ಕ ಸಾಧ್ಯವಿಲ್ಲ ಎಂದು ಹೆದ್ದಾರಿ ಇಲಾಖೆ, ಜಿಲ್ಲಾಡಳಿತ ಹೇಳಿತ್ತು. ಹಾನಿ ಚಿತ್ರಣ ಅಂದಾಜಿಸುವುದಕ್ಕೆ 15 ದಿವಸ ಬೇಕು ಎಂದಿತ್ತು.

ಆದರೆ ಪ್ರಾಕೃತಿಕ ವಿಕೋಪ ತಹಬಂದಿಗೆ ಬಂದು, ಮಳೆ ಇಳಿಮುಖಗೊಂಡು ದುರಸ್ತಿ ವೇಗ ಪಡೆಯಿತು. ಹಳೆ ರಸ್ತೆ ದುರಸ್ತಿಗಿಂತಲೂ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿದ ಕಾರಣ ಒಂದು ತಿಂಗಳೊಳಗೆ ಲಘು ವಾಹನ ಓಡಾಟಕ್ಕೆ ಅವಕಾಶ ದೊರೆತಂತಾಗಿದೆ.

ಅಧಿಕೃತ ಅನುಮತಿ ನೀಡಿಲ್ಲ
ಲಘು ವಾಹನಗಳ ಓಡಾಟಕ್ಕೆ ಕೊಡಗು ಜಿಲ್ಲಾಡಳಿತ ಅಧಿಕೃತ ಆದೇಶ ನೀಡಿಲ್ಲ. ರಸ್ತೆ ದುರಸ್ತಿ ಹೊಣೆ ಹೊತ್ತಿರುವ ಹೆದ್ದಾರಿ ಇಲಾಖೆ ವಾಹನ ಪ್ರವೇಶಕ್ಕೆ ತಡೆ ಒಡ್ಡಿಲ್ಲ. ಹಾಗಾಗಿ ಲಘು ವಾಹನ ಓಟಕ್ಕೆ ತೊಂದರೆ ಆಗಿಲ್ಲ. ಕೊಡಗು ಸಂಪಾಜೆ, ಪೆರಾಜೆ, ಜೋಡುಪಾಲ, ಎರಡನೇ ಮೊಣ್ಣಂಗೇರಿ, ಮದೆ ಗ್ರಾಮಸ್ಥರಿಗೆ ಮಡಿಕೇರಿ ತಾಲೂಕು ಕೇಂದ್ರಕ್ಕೆ ಸಂಪರ್ಕವೇ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next