Advertisement
ಜಾತಿ-ಭೇದವೆನ್ನದೇ, ಬಡವ ಶ್ರೀಮಂತರೆನ್ನದೇ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕಿ, ಹಣತೆಗಳನ್ನು ಸಾಲಾಗಿ ಹಚ್ಚಿ, ಮಿರಿಮಿರಿ ಮಿಂಚುವ ಲೈಟ್‌ಗಳಿಂದ, ಆಕರ್ಷಕ ಆಕಾಶಬುಟ್ಟಿಗಳಿಂದ, ಬಗೆಬಗೆಯ ಹೂವುಗಳಿಂದ ಮನೆಯನ್ನು ಮತ್ತು ಅಂಗಡಿಗಳನ್ನು ಶೃಂಗರಿಸಿ, ಲಕ್ಷ್ಮೀ ಪೂಜೆಯನ್ನು ಮಾಡಿ ವ್ಯಾಪಾರದಲ್ಲಿ ಲಾಭವನ್ನು ಕರುಣಿಸು ತಾಯಿ ಎಂದು ಬೇಡಿಕೊಂಡು ವಿಜೃಂಭಣೆಯಿಂದ ಆಚರಿಸುವ ಸಂತಸದ ಹಬ್ಬ ದೀಪಾವಳಿ.
Related Articles
Advertisement
ಅಮಾವಾಸ್ಯೆಯಂದು ಶ್ರೀ ಮಹಾಲಕ್ಷ್ಮೀ ಪೂಜೆ, ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ ಮಾಡಿ, ಮಹಾವಿಷ್ಣುವಿನ ಮಡದಿ ಮಹಾಲಕ್ಷ್ಮೀಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ವ್ಯಾಪಾರಿಗಳಿಗೆ ಹೊಸವರ್ಷ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮವಾಸ್ಯೆಯನ್ನು ದೀಪಗಳನ್ನು ಬೆಳಗಿಸಿ ಪಟಾಕಿಗಳಿಂದ ಲಕ್ಷ್ಮೀ ಪೂಜೆಯನ್ನು ಅದ್ಧೂರಿಯಾಗಿ ಮಾಡುತ್ತಾರೆ. ಆದರೆ ಈಬಾರಿ ಗ್ರಹಣಇದ್ದಿದ್ದರಿಂದ ನರಕ ಚತುದರ್ಶಿಯದಿನ ರಾತ್ರಿ ಹಾಗೂ ಪಾಡ್ಯದ ದಿನ ಅನೇಕರು ಲಕ್ಷ್ಮೀ ಪೂಜೆ ಆಚರಿಸಿದ್ದಾರೆ. ಬಲಿಪಾಡ್ಯಮಿ ಸಂಭ್ರಮ ಬಲಿಪಾಡ್ಯಮಿಯಂದು ಬಲಿಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದುಕೊಂಡು, ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಲ್ಲಿ ಆಕಾಶ, ಭೂಮಿಗಳನ್ನು ಅಳೆದುಕೊಂಡು ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿಯಂದು ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋವು ಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಹೀಗೆ ದೀಪಾವಳಿಯು 5 ದಿನಗಳ ವಿಶೇಷ ಆಚರಣೆಯನ್ನು ಹೊಂದಿದೆ.