ಸಂಕೇಶ್ವರ: ಮನದ ಕತ್ತಲೆಯನ್ನು ಕಳೆದು ಸತ್ಯ ನಿರ್ಮಲ ಜ್ಯೋತಿಯನ್ನು ಬೆಳೆಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಹುಟ್ಟಿದ ಮನೆಯ ದೀಪವಾಗಿ ಬೆಳಗಬೇಕು. ಸುಜ್ಞಾನ ಜ್ಯೋತಿಯನ್ನು ಬೆಳಗಿಸುವ ಕಾರ್ತಿ ಕೋತ್ಸವದ ಅರ್ಥವನ್ನು ತಿಳಿದುಕೊಂಡು ಆಚರಿಸಬೇಕೆಂದು ನಿಡಸೋಸಿ ದುರದುಂಡೀಶ್ವರ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಅವರು ನಿಡಸೋಸಿ ದುರ ದುಂಡೀಶ್ವರ ಮಠದ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ ಜೀವನದಲ್ಲಿ ಮೂರು ದೀಪಗಳಾಗಿ ಬೆಳಗಬೇಕು. ಮೊದಲನೆಯ ದೀಪ ಮನೆಯ ಬೆಳಕಾಗಬೇಕು. ಓಣಿಯ ಬೆಳಕಾಗಬೇಕು. ಮತ್ತು ಸಮಾಜದ ದಾರೀಪದೀಪವಾಗಿ ಬೆಳೆಗಲು ಮುಂದಾಗಬೇಕು.
ಓಣಿಯ ಬೆಳಕು ಎಂದರೆ ಪ್ರತಿಯೊಬ್ಬರಿಗೂ ಆಶ್ರಯವಾಗಿ ಸಹಾಯ ಮಾಡುವ ಮೂಲಕ ಬೆಳಕಾಗಬೇಕು. ದಾರಿ ದೀಪ ಎಂದರೆ ಸೂರ್ಯ ಚಂದ್ರರಂತೆ ಸದಾಕಾಲ ಸಮಾಜಕ್ಕೆ ಬೆಳಕಾಗಬೇಕು. ನಿತ್ಯ ಪರರ ಸಂಕಷ್ಟಗಳನ್ನು ದೂರ ಮಾಡುವವರಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಂಪಾದನಾ ಸ್ವಾಮೀಜಿ ಮಾತನಾಡಿ, ದೀಪ ಸಾಮಾನ್ಯವಾದುದಲ್ಲ. ದೀಪ ನಮ್ಮೆಲ್ಲರ ಪಾಪ ಕಳೆಯುವ ಶಕ್ತಿಯಾಗಿದೆ. ನಮ್ಮೊಳಗಿನ ಅಜ್ಞಾನ, ಅಂಧಕಾರ ತೊಡೆದು ಧಾರ್ಮಿಕ ಸತ್ಸಂಗ, ಶರಣ ಸಂದೇಶಗಳನ್ನು ಕೇಳುವ ಮೂಲಕ ವ್ಯಕ್ತಿಯಾಗಿ ಬದಲಾಗಬೇಕು.ದೀಪ ಎಲ್ಲರೂ ಒಂದಾಗಿದ್ದರೆ ಬೆಳಕು ಉಂಟಾಗುತ್ತದೆ ಎನ್ನುವ ಸಂದೇಶವನ್ನು ಸಾರುತ್ತದೆ.ಆದ್ದರಿಂದ ಪ್ರತಿಯೊಬ್ಬರೂ ಅರಿಷಡ್ವರ್ಗಗಳನ್ನು ಮೀರಿ ನಿಲ್ಲಬೇಕು. ಅಂದಾಗ ಮಾತ್ರ ಜೀವನ ಜ್ಯೋತಿ ಬೆಳಗುತ್ತದೆ ಎಂದು ಹೇಳಿದರು.
ಹೀರಾ ಶುಗರ್ ಇಂಜಿನೀಯರಿಂಗ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ಕಮತೆ ಮಾತನಾಡಿದರು. ರಂಗೋಲಿ ಸ್ಪರ್ಧೆಯಲ್ಲಿ ಕೊರೊನಾ ಜಾಗೃತಿ, ಪುನಿತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸುವ ರಂಗೋಲಿಗಳು ಜನಮನ ಸೆಳೆದವು. ಸ್ಪರ್ಧಾ ವಿಜೇತರಿಗೆ ಶ್ರೀಗಳು ಬಹುಮಾನ ವಿತರಿಸಿದರು. ಪ್ರಾಚಾರ್ಯ ಟಿ.ಎಂ. ಕಮ್ಮಾರ, ಬಿ.ಎಂ.ಹಾಲಭಾಂವಿ, ಬಿ.ಆರ್. ಉಮರಾಣಿ, ಉಮೇಶ ನಾಯಕ, ಅಣ್ಣಪ್ಪಾ ಮಗದುಮ್ಮ, ಪಾಂಡುರಂಗ ಖೋತ, ಎಸ್.ಬಿ.ಇಟ್ಟನ್ನವರ, ಸಂಜು ಪಾಟೀಲ, ಜೀನೇಂದ್ರ ಖಾನಾಪುರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.