Advertisement

ಆಗಸದಲ್ಲಿ ಬೆಳಕಿನ ಚಿತ್ತಾರ; ಹಬ್ಬದ ಸಿಂಧೂರ 

12:53 PM Oct 21, 2017 | Team Udayavani |

ಮೈಸೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಾಡದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದು ಭಕ್ತಿ ಭಾವ ಮೆರೆದರು. ಸತತ 3 ದಿನಗಳ ಕಾಲ ಸರ್ಕಾರಿ ರಜೆ ಇರುವುದರಿಂದ ನಾಡಿನ ಮೂಲೆ ಮೂಲೆಗಳಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಆಗಮಿಸಿದ್ದರಿಂದ ಬೆಟ್ಟದ ರಸ್ತೆಯಲ್ಲಿ ಮುಂಜಾನೆಯಿಂದಲೇ ಕಿಲೋಮೀಟರ್‌ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement

ಮೈಸೂರು ತಾಲೂಕಿನ ಸುತ್ತೂರು ಮಠದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ದೀಪೋತ್ಸವ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಸ್ನಾನ ಮಾಡಿ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಮನೆಗಳ ಹತ್ತಿರದಲ್ಲಿರುವ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಹೀಗಾಗಿ ಚಾಮುಂಡೇಶ್ವರಿ ದೇವಸ್ಥಾನ ಮಾತ್ರವಲ್ಲದೆ, ನಗರದ ವಿವಿಧ ದೇವಸ್ಥಾನಗಳಲ್ಲೂ ಭಕ್ತರ ದಂಡು ನೆರೆದಿತ್ತು.

ರಾಸುಗಳಿಗೆ ಕಿಚ್ಚು: ಮೈಸೂರು ತಾಲೂಕು ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ ರೈತರು ಬೆಳಗ್ಗೆಯೇ ಜಾನುವಾರುಗಳ ಕೊಂಬು ಒರೆದು, ಮೈ ತೊಳೆದು, ಬಣ್ಣ ಹಚ್ಚಿ, ಕೊಂಬುಗಳಿಗೆ ಬಲೂನ್‌ ಕಟ್ಟಿ ಪೂಜೆ ಸಲ್ಲಿಸಿದರು. ಸಂಜೆ ಜಾನುವಾರುಗಳಿಗೆ ಕಿಚ್ಚು ಹಾಯಿಸಲಾಯಿತು.

ಪಟಾಕಿ ಸಂಭ್ರಮ: ಪರಿಸರ ಜಾಗೃತಿ ಹಾಗೂ ಸತತವಾಗಿ ಸುರಿದ ಮಳೆ ಪರಿಣಾಮ ಈ ವರ್ಷ ನಗರದಲ್ಲಿ ಪಟಾಕಿ ಸದ್ದು ಕಡಿಮೆಯಾಗಿದ್ದರೂ ಸಂಜೆಯಾಗುತ್ತಲೇ ಸಂಪ್ರದಾಯ ಬದ್ಧವಾಗಿ ಪಟಾಕಿ ಸಿಡಿಸಿ, ಆಕಾಶ ಬುಟ್ಟಿಗಳನ್ನು ಹಾರಿ ಬಿಟ್ಟು ಆಗಸದಲ್ಲಿ ಬೆಳಕಿನ ಚಿತ್ತಾರ ಬಿಡಿಸಿದರು.

ಜನದಟ್ಟಣೆ: ದೀಪಾವಳಿ ಹಬ್ಬಕ್ಕೆ ಸತತ 3 ದಿನಗಳ ರಜೆ ದೊರೆತಿದ್ದಲ್ಲದೆ, ಶನಿವಾರವೂ ಅರ್ಧ ದಿನ ರಜೆ ಹಾಕಿಕೊಂಡರೆ ಸತತ 5 ದಿನಗಳ ಕಾಲ ರಜೆ ದೊರೆತ ಕಾರಣ ಬಹುತೇಕರು ಮೈಸೂರಿನಿಂದ ಹೊರಗೆ ಹೋಗಿದ್ದರೆ, ಹೆಚ್ಚಿನವರು ಹಬ್ಬದ ಆಚರಣೆ ಸವಿಯುತ್ತಾ ಮನೆಯಲ್ಲೇ ಕುಳಿತಿದ್ದರಿಂದ ಸದಾ ವಾಹನ, ಜನರಿಂದ ತುಂಬಿರುತ್ತಿದ್ದ ನಗರದ ಬಹುತೇಕ ರಸ್ತೆಗಳು ಶುಕ್ರವಾರ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು.

Advertisement

ರಜೆ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಹೆಚ್ಚಿನ ಪ್ರವಾಸಿಗರು ಧಾವಿಸಿ ಬಂದಿದ್ದರಿಂದ ನಗರದ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಮೃಗಾಲಯ, ಕಾರಂಜಿಕೆರೆ ಪ್ರಕೃತಿ ಉದ್ಯಾನ, ಅರಮನೆ, ದಸರಾ ವಸ್ತು ಪ್ರದರ್ಶನ, ಕೆಆರ್‌ಎಸ್‌ ಬೃಂದಾವನಗಳಲ್ಲಿ ಭಾರೀ ಜನದಟ್ಟಣೆ ಕಂಡುಬಂತು.

ಬೈನಾಕುಲರ್‌ ಆಕರ್ಷಣೆ: ಚಾಮುಂಡಿಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಚಾಮುಂಡೇಶ್ವರಿ ದೇವಸ್ಥಾನ, ನಂದಿ ವಿಗ್ರಹ ಆಕರ್ಷಣೆ ಜತೆಗೆ ಇದೀಗ ಚಾಮುಂಡಿಬೆಟ್ಟದ ಮಧ್ಯಭಾಗದ ವ್ಯೂ ಪಾಯಿಂಟ್‌ನಲ್ಲಿ ಅಳವಡಿಸಿರುವ ಬೈನಾಕುಲರ್‌ ಕೂಡ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿದೆ.

ಈ ಬೈನಾಕುಲರ್‌ ಮೂಲಕ ಮೈಸೂರು ನಗರದ ವಿಹಂಗಮ ನೋಟ ವೀಕ್ಷಿಸಲು 20 ರೂ. ಶುಲ್ಕ ನಿಗದಿಪಡಿಸಲಾಗಿದೆ. ಸೆ.21ರಂದು ಉದ್ಘಾಟನೆಯಾದ ಈ ಬೈನಾಕುಲರ್‌ ಮೂಲಕ ಈವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿ ಮೈಸೂರು ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದು ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಗೆ 1 ಲಕ್ಷ ರೂ.ಗೂ ಹೆಚ್ಚಿನ ಆದಾಯ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next