Advertisement

ದೀಪ ಹಚ್ಚಿ…ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ

01:53 PM Oct 25, 2019 | Nagendra Trasi |

ದೀಪಾವಳಿ ಹಬ್ಬ ಹೆಸರೇ ಸೂಚಿಸುವ ಹಾಗೆ ದೀಪ ಹಚ್ಚಿ ಸಂಭ್ರಮಿಸುವ ಹಬ್ಬ. ಅಂದರೆ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯುವ ಹಬ್ಬ. ಕೇವಲ ಪಟಾಕಿ ಹಚ್ಚಿ ಸಂಭ್ರಮ ಪಟ್ಟರೆ ಅದು ದೀಪಾವಳಿಯ ನಿಜವಾದ ಅರ್ಥ ನೀಡುವುದಿಲ್ಲ. ಪಟಾಕಿ ಕೇವಲ ನಮ್ಮ ಸಂತೋಷಕ್ಕೆ ಮಾತ್ರ. ದೀಪಾವಳಿಗೆ ನಿಜವಾದ ಅರ್ಥ ಬೇರೆನೇ ಇದೆ, ಅದೇನೆಂದರೆ ಅಂಧಕಾರದಲ್ಲಿ ಜೀವನ ನಡೆಸುತ್ತಿರುವವರು ಶ್ರಮದಿಂದ ಯಶಸ್ವಿಯಾಗುದವರು ಆಚರಿಸುವ ಹಬ್ಬವೇ ದೀಪಾವಳಿ.

Advertisement

ದೀಪದಿಂದ ದೀಪ ಹಚ್ಚಿ ಸಂಭ್ರಮಿಸುವುದು ಮಾತ್ರವಲ್ಲದೆ, ಅಂದು ಮನೆಯೆಲ್ಲಾ ದೀಪದ ಬೆಳಕಿನಿಂದ ಪ್ರಜ್ವಲಿಸುತ್ತಿರುತ್ತದೆ. ಮನೆ ಮನಸ್ಸಿನ ತುಂಬೆಲ್ಲಾ ಸಂಭ್ರಮದ ಛಾಯೆ ಹಬ್ಬಿರುತ್ತದೆ. ಮನೆಯಿಂದ ದೂರ ಇರುವವರೆಲ್ಲಾ ಈ ದೀಪಾವಳಿ ಹಬ್ಬದಂದು ಮನೆಗೆ ಬಂದು ಮನೆಯವರ ಜೊತೆ ಸಡಗರ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಇತ್ತ ಮನೆಯಲ್ಲಿ ಅಮ್ಮ ಬಗೆಬಗೆಯ ತಿಂಡಿ ತನಸುಗಳನ್ನು ಮಾಡಿ ಉಣಬಡಿಸುವ ಖುಷಿಯಲ್ಲಿದ್ದರೆ, ಮಕ್ಕಳೆಲ್ಲಾ ಹೊಸ ಧಿರಿಸುಗಳನ್ನು ಧರಿಸಿಕೊಳ್ಳುವ ಖುಷಿ ಹಾಗೆ ಪಟಾಕಿ ಹೊಡೆಯುವ ಸಂಭ್ರಮದಲ್ಲಿ ತೊಡಗಿರುತ್ತಾರೆ. ಹೀಗೆ ಮನೆಯ ತುಂಬೆಲ್ಲಾ ಹಬ್ಬದ ಕಲೆ ಪಸರಿಸಿರುತ್ತದೆ.

ದೀಪಾವಳಿ ಹಬ್ಬದಂದು ಬೆಳಗ್ಗಿನಿಂದಲೇ ಒಂದು ರೀತಿಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಅಂದು ಹೆಣ್ಣು ಮಕ್ಕಳಿಗೆ ಮನೆಯ ಮುಂದೆ ರಂಗೋಲಿ ಹಾಕಿ ಮನೆಯೆಲ್ಲಾ ಅಲಂಕಾರ ಮಾಡಿ ಮನೆಗೆ ಹೊಸ ಕಳೆಯನ್ನೆ ತಂದಿರುತ್ತಾರೆ. ಸಂಜೆಯಾಗುತ್ತಿದಂತೆ ಮನೆಯ ಸುತ್ತೆಲ್ಲಾ ಹಣತೆಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.

ಹಬ್ಬದ ವಾತಾವರಣ ಅಂದರೆ ಅಲ್ಲಿ ಪಟಾಕಿ ಸದ್ದು ಕೇಳಿಸಿಯೇ ಕೇಳಿಸುತ್ತದೆ. ಅದರಲ್ಲೂ ದೀಪಾವಳಿ ಹಬ್ಬವೆಂದರೆ ಜನರಿಗೆ ಅದೇನೋ ವಿಶೇಷ. ಅಂದಂತ್ತೂ ತುಸು ಹೆಚ್ಚೇ ಪಟಾಕಿ ಸದ್ದು ಎಲ್ಲರ ಮನೆಯಲ್ಲಿ ಕೇಳಿಸುತ್ತದೆ. ಅದಕ್ಕೆಂದೇ ತರತರಹದ ಪಟಾಕಿಗಳು ಮಾರುಕಟ್ಟೆಗಳಿಗೆ ಇಳಿದಿರುತ್ತವೆ. ಅಂದು ಪಟಾಕಿ ಖರೀದಿ ಮಾಡುವುದೇ ಒಂದು ಖುಷಿ. ಸಣ್ಣ ಸಣ್ಣ ಮಕ್ಕಳೆಲ್ಲಾ ಶಬ್ದ ಬರದಂತಹ ಪಟಾಕಿಗಳನ್ನು ಬಳಕೆ ಮಾಡಿ ಖುಷಿ ಪಟ್ಟರೇ ಇತ್ತ ಯುವ ಪೀಳಿಗೆ ಹೆಚ್ಚು ಶಬ್ದ ಬರುವಂತಹ ಪಟಾಕಿಗಳನ್ನೇ ಖರೀದಿ ಮಾಡುತ್ತಾರೆ.

ಪಟಾಕಿ ಹಚ್ಚಿ ಸಂಭ್ರಮ ಪಡುವುದು ಕೇವಲ ಅವರ ಖುಷಿಯ ಸಲುವಾಗಿ ಅದರಾಚೆಗೆ ಅಗಾಧ ಪ್ರಮಾಣದಲ್ಲಿ ಪರಿಸರಕ್ಕೆ ತೊಂದರೆಗಳು ಆಗುತ್ತದೆ. ಅದರ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ. ಈ ಪಟಾಕಿ ಸಿಡಿಸುವುದರಿಂದ ಕೇವಲ ಪರಿಸರಕ್ಕೆ ಹಾನಿ ಮಾತ್ರ ಆಗುವುದಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಮಸ್ಯೆಗಳು ಆಗುತ್ತವೆ. ಹೆಚ್ಚೆಚ್ಚು ಶಬ್ದ ಇರುವಂತಹ ಪಟಾಕಿಗಳನ್ನು ಸಿಡಿಸಿದಾಗ ಮನೆಯಲ್ಲಿ ಸಾಕುವ ಪ್ರಾಣಿಗಳಿಗೆ ಸಮಸ್ಯೆ ಆಗುತ್ತದೆ. ಮನೆಯಲ್ಲಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದವರಿದ್ದರೆ ಅಂತವರಿಗೂ ಸಮಸ್ಯೆ ಕಟ್ಟಿ ಇಟ್ಟ ಬುತ್ತಿ ಇದ್ದಂತೆ.

Advertisement

ಅದರಿಂದಾಗಿ ಆದಷ್ಡೂ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಕೆ ಮಾಡಿದರೆ ನಮಗೂ ಹಾಗೂ ಪ್ರಾಣಿ ಪಕ್ಷಿಗಳಿಗೂ ಒಳಿತು. ದೀಪಾವಳಿ ಹಬ್ಬದ ಕೊನೆಯ ದಿನ ತುಂಬಾನೇ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಅದರ ಮರುದಿನ ಟಿವಿ ಮಾದ್ಯಮಗಳಲ್ಲಿ ಪಟಾಕಿಗಳಿಂದ ತೊಂದರೆ ಗೀಡಾದ ಸುದ್ದಿಗಳೇ ಕೇಳಸಿಗುವುದು ಹೆಚ್ಚು. ಆದ್ದರಿಂದ ಇನ್ನಾದರೂ ಪಟಾಕಿ ಸಿಡಿಸುವಾಗ ಎಚ್ಚರ ವಹಿಸಿದರೆ ಮುಂದೆ ಸಮಸ್ಯೆಗಳಾಗದಂತೆ ತಡೆಯಬಹುದು.

ಈ ಹಿಂದೆಯೇ ಪರಿಸರ ಸ್ನೇಹಿ ಪಟಾಕಿಗಳ ಉಲ್ಲೇಖ ಇತ್ತು, ಆದರೆ ಈ ಬಾರಿಯ ದೀಪಾವಳಿ ಹಬ್ಬ ಜನರಿಗೆ ತೊಂದರೆಯಾಗದಂತೆ ಹಾಗೇ ಪರಿಸರಕ್ಕೂ ಹಾನಿಯಾಗದಂತೆ ಪರಿಸರ ಸ್ನೇಹಿ ಪಟಾಕಿ ಮಾರುಕಟ್ಟೆಗೆ ಬರಲಾರಂಭಿಸಿವೆ. ಈ ಒಂದು ಮಹತ್ವದ ಕಾರ್ಯಕ್ಕೆ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸಲ್ಟ್ಸ್ ಲ್ಯಾಬೋರೇಟರಿ ಸಹಾಯಕವಾಗಿದೆ. ಇಲ್ಲಿ ತಯಾರು ಮಾಡಿದ ಪಟಾಕಿಗಳಲ್ಲಿ ಸೌಂಡ್ ಎಮಿಟಿಂಗ್ ಕ್ರ್ಯಾಕರ್ಸ್, ಪೆನ್ಸಿಲ್, ಫ್ಲವರ್ ಕ್ರ್ಯಾಕರ್ಸ್ ಮತ್ತು ಸ್ಪಾಕ್ರ್ಲರಸ್ಗಳು ಇವೆಲ್ಲವುಗಳನ್ನು ಒಳಗೊಂಡಿದೆ. ಆದ್ದರಿಂದ ಈ ಬಾರಿಯಾದರೂ ಪರಿಸರಕ್ಕೆ ಹಾನಿಯಾಗದೆ ಹಣತೆ ಹಚ್ಚಿ ದೀಪಾವಳಿ ಹಬ್ಬವನ್ನು ಸಂಭ್ರಮಿಸೋಣ.

*ಗಾಯತ್ರಿ ಗೌಡ
ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ
ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next