ಮುಂಬಯಿ: ವಿಜಯ್ ದೇವರಕೊಂಡ ಅವರ ಚೊಚ್ಚಲ ಬಾಲಿವುಡ್ ಚಿತ್ರ ʼಲೈಗರ್ʼ ಐದು ಭಾಷೆಯಲ್ಲಿ ರಿಲೀಸ್ ಗೆ ರೆಡಿಯಾಗಿದೆ. ಸದ್ಯ ಚಿತ್ರ ತಂಡ ಸ್ಟಾರ್ ಸಿಟಿಗಳಲ್ಲಿ ಭರ್ಜರಿ ಪ್ರಮೋಷನ್ ನಡೆಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್, ಟೀಸರ್, ಟ್ರೇಲರ್ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ.
ಈ ಹಿಂದೆ ಪಾರ್ಟಿ ಹಾಡಿನ ರೀತಿ ಚಿತ್ರೀಕರಣಗೊಂಡ ʼಅಕ್ಡಿ – ಪಕ್ಡಿʼ ಹಾಡು ಬಿಟೌನ್ ಸೇರಿದಂತೆ ಇತರ ಭಾಷೆಯಲ್ಲಿಯೂ ಸದ್ದು ಮಾಡಿತ್ತು. ಬಾಕ್ಸಿಂಗ್ ಜರ್ನಿಯನ್ನು ಮಾಸ್ ಆಗಿ ತೋರಿಸಿದ ʼವಾಟ್ ಲಗಾ ದೇಂಗೆʼ ಎಂಬ ಹಾಡನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಚಿತ್ರದ ಮತ್ತೊಂದು ಹಾಡು ಹೊರ ಬಂದಿದೆ.
ಚಿತ್ರದ ʼಆಫತ್ʼ ಹಾಡು ರಿಲೀಸ್ ಆಗಿದೆ. ಹಾಡಿನಲ್ಲಿ ನಾಯಕ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಬೋಲ್ಡ್ ಅವತಾರದಲ್ಲಿ ಕಾಣಿಸಿದ್ದು, ಬೀಚ್ ನಲ್ಲಿ ಈ ಹಾಡಿನ ಚಿತ್ರೀಕರಣವನ್ನು ಮಾಡಿದ್ದಾರೆ. ರೊಮ್ಯಾಂಟಿಕ್ ಹಾಡು ಯೂಟ್ಯೂಬ್ ನಲ್ಲಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಚಿತ್ರದಲ್ಲಿ ರಮ್ಯಾ ಕೃಷ್ಣನ್, ಮಾಜಿ ಬಾಕ್ಸರ್ ಮೈಕ್ ಟೈಸನ್, ರೋನಿತ್ ರಾಯ್, ಆಲಿ ಸೇರಿದಂತೆ ಇತರ ಪ್ರಮುಖರು ನಟಿಸಿದ್ದಾರೆ. ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿರುವ ʼಲೈಗರ್ʼ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಚಿತ್ರಕ್ಕೆ ಹಾಕಿದ್ದಾರೆ. ಚಿತ್ರ ಇದೇ ಆಗಸ್ಟ್ 25 ರಂದು ತೆರೆಗೆ ಬರಲಿದೆ.