ಹೈದರಾಬಾದ್: ಈ ವರ್ಷ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ ವಿಜಯ್ ದೇವರಕೊಂಡಾ ಅವರ ʼಲೈಗರ್ʼ ಚಿತ್ರ ಅಟ್ಟರ್ ಫ್ಲಾಪ್ ಆದದ್ದು ಗೊತ್ತೇ ಇದೆ. ಎಲ್ಲಿಯವರೆಗೆ ಅಂದರೆ ನಿರ್ದೇಶಕರು ವಿತರಕರಿಗೆ ಹಣ ವಾಪಸ್ ಕೊಡುವಷ್ಟರ ಮಟ್ಟಿಗಾದರೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಲಿಲ್ಲ.
ಚಿತ್ರ ಹೀನಾಯವಾಗಿ ಸೋತ ಬಳಿಕ ನಿರ್ದೇಶಕ ಪುರಿ ಜಗನ್ನಾಥ್ ವಿತರಕರಿಗೆ ಸಾಧ್ಯವಾದಷ್ಟು ನಷ್ಟವನ್ನು ಭರಿಸುವುದಾಗಿ ಹೇಳಿದ್ದರು. ಆದರೆ ವಿತರಕರು ತುಂಬಾ ದಿನ ಕಾದ ಬಳಿಕ ಅವರ ಹಣ ಬರದೇ ಇರುವ ಕಾರಣ ನಿರ್ದೇಶಕರ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದು ಹೇಳಿರುವ ವಾಟ್ಸಾಪ್ ಮೆಸೇಜ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿತರಕರು ಪ್ಲ್ಯಾನ್ ಮಾಡಿಕೊಂಡು ನಿರ್ದೇಶಕ ಪುರಿ ಜಗನ್ನಾಥ್ ಅವರ ನಿವಾಸದ ಮುಂದೆ ಧರಣಿ ನಡೆಸುವ ಮೆಸೇಜ್ ನ ಸ್ಕ್ರೀನ್ ಶಾಟ್ ನ್ನು ಹಂಚಿಕೊಂಡಿದ್ದಾರೆ.
ಆ ಮೆಸೇಜ್ ನಲ್ಲಿ ಅ.27 ರಂದು ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ಬರುವವರು ಸ್ವಲ್ಪ ಜಾಸ್ತಿ ಬಟ್ಟೆಗಳನ್ನು ತನ್ನಿ. ಏಕೆಂದರೆ ಪ್ರತಿಭಟನೆ 4 ದಿನ ನಡೆಯಬಹುದು. ಯಾರಿಗೆಲ್ಲಾ ಹಣ ಬೇಕೋ ಅವರು ಬನ್ನಿ ಎನ್ನುವ ಬೆದರಿಕೆಯ ಮೆಸೇಜ್ ನ ಸ್ಕ್ರೀನ್ ಶಾಟ್ ಎಲ್ಲೆಡೆ ಫಾರ್ವಡ್ ಆಗಿದೆ.
ಇದಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆಕ್ರೋಶದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಪುರಿ ಜಗನ್ನಾಥ್ ತಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ವಿತರಕರ ವಿರುದ್ಧ ಹರಿಹಾಯ್ದಿದ್ದಾರೆ. “ನನ್ನ ಬಳಿ ಯಾರಿಗೂ ಕೊಡಲು ಹಣವಿಲ್ಲ. ಆದರೂ ನನ್ನಿಂದ ಆಗುವಷ್ಟು ಹಣವನ್ನು ನಾನು ಭರಿಸಿದ್ದೇನೆ. ನನ್ನ ವಿರುದ್ಧ ಯಾರು ಪ್ರತಿಭಟನೆ ಮಾಡಲು ಯೋಜನೆ ಹಾಕಿಕೊಂಡಿದ್ದರೋ ಅವರಿಗೆ ನಾನು ಒಂದು ಪೈಸೆಯನ್ನೂ ಕೊಡಲ್ಲ” ಎಂದು ಬರೆದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ʼಲೈಗರ್ʼ ನಲ್ಲಿ ವಿಜಯ್ ದೇವರಕೊಂಡಾ, ಅನನ್ಯಾ ಪಾಂಡೆ, ರಮ್ಯಾ ಕೃಷ್ಣನ್ ಮುಂತಾದವರು ಕಾಣಿಸಿಕೊಂಡಿದ್ದರು. ಚಿತ್ರ ಮಂದಿರದ ಬಳಿಕ ಓಟಿಟಿಯಲ್ಲೂ ಚಿತ್ರ ಅಷ್ಟೇನೂ ಕಮಾಲ್ ಮಾಡಿಲ್ಲ. ಚಿತ್ರದ ಸೋಲಿನ ಬಗ್ಗೆ ಇತ್ತೀಚೆಗೆ ನಟ ವಿಜಯ್ ದೇವರಕೊಂಡಾ ಅವರು ಕೂಡ ಭಾವುಕವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.