Advertisement

ಖಾಸಗಿ ಶಾಲಾ ಶಿಕ್ಷಕರಿಗೂ ಆಜೀವ ಸದಸ್ಯತ್ವ : ಸಚಿವ ಸುರೇಶ್‌ ಕುಮಾರ್‌

10:29 PM Mar 23, 2021 | Team Udayavani |

ಬೆಂಗಳೂರು: ಖಾಸಗಿ ಶಾಲಾ ಶಿಕ್ಷಕರಿಗೆ ಸೂಕ್ತ ನೆರವು ನೀಡಲು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಘೋಷಿಸಿದರು.

Advertisement

ವಿವಿಧ ಬೇಡಿಕೆ ಈಡೇರಿಕೆ ಈಡೇರಿಸುವಂತೆ ಆಗ್ರಹಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ(ರುಪ್ಸಾ), ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿಯಿಂದ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ನಿರ್ಧರಿಸಿದ್ದವು. ನಂತರ ಸಚಿವರು ರುಪ್ಸಾ ಮತ್ತು ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳನ್ನು ಶಾಸಕರ ಭವನಕ್ಕೆ ಕರೆಸಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸದಸ್ಯರಾದ ಶ್ರೀಕಂಠೇಗೌಡ ಮೊದಲಾದವರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಮುಷ್ಕರ ಬೇಡ:
ಶಾಲೆಗಳ ನೋಂದಣಿ ವಿಚಾರ ಮತ್ತು ಕಟ್ಟಡ ನವೀಕರಣ ವಿಚಾರ ದೊಡ್ಡ ಸಮಸ್ಯೆ ಆಗಿದೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಲಾಗಿದ್ದು, ಸರಳೀಕರಿಸಲು ಕ್ರಮ ವಹಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಳ್ಳುವ ತನಕ ಯಾವುದೇ ಮುಷ್ಕರ, ಪ್ರತಿಭಟನೆ ಕೈಗೊಳ್ಳದಂತೆ ಸಂಘಟನೆಗೆ ಮನವಿ ಮಾಡಲಾಗಿದೆ. ರುಪ್ಸಾ ಸಹ ಪ್ರತಿಭಟನೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಇದನ್ನೂ ಓದಿ :ಭವಿಷ್ಯ ನಿಧಿ ಖಾತೆದಾರರಿಗೆ ಸಿಹಿ ಸುದ್ದಿ :5 ಲಕ್ಷ ರೂ.ವರೆಗಿನ ಬಡ್ಡಿ ಆದಾಯ ಟ್ಯಾಕ್ಸ್‌ ಫ್ರೀ

ಮಾ.31ರವರೆಗೆ ಗಡುವು
ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಮಾತಾನಾಡಿ, ಶಿಕ್ಷಣ ಸಚಿವರು ಮಾರ್ಚ್‌ 31ರೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೂ, ಪಾಲು ಕೊಡಲು ಒಪ್ಪಿದ್ದಾರೆ. ಶಾಲಾ ಶುಲ್ಕ ಶೇ.70 ಪಡೆಯುವ ಕುರಿತು, ಪೋಷಕರು ಆನ್‌ಲೈನ್‌ ಕ್ಲಾಸ್‌ ಹೆಸರಿನಲ್ಲಿ ಶುಲ್ಕ ಕಟ್ಟದೆ ಇರುವ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಆರ್‌ಟಿಇ ಶುಲ್ಕ ಮರುಪಾವತಿಯ ಒಂದು ಕಂತಿನಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಸಚಿವರು ಮಾ.31ರೊಳಗೆ ಬೇಡಿಕೆ ಈಡೇರಿಸದೇ ಇದ್ದರೆ ಪುನಃ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

Advertisement

ಸಚಿವರ ಮನೆಗೆ ಮುತ್ತಿಗೆ ಹಾಕಿಲ್ಲ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರುಪ್ಸಾ ನೇತೃತ್ವದಲ್ಲಿ ಮಂಗಳವಾರ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಅದರಂತೆ ಸಚಿವರ ನಿವಾಸದ ಎದುರು ಕಪ್ಪು ಪಟ್ಟಿ ಧರಿಸಿ, ಮೌನ ಪ್ರತಿಭಟನೆಗೆ ಯೋಜಿಸಿದ್ದರು. ನಂತರ ಸಚಿವರ ಶಾಸಕರ ಭವನದಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟು, ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ರುಪ್ಸಾದ ಪ್ರಮುಖ ಬೇಡಿಕೆಗಳು
– ಶೇ.70ರಷ್ಟು ಬೋಧನಾ ಶುಲ್ಕ ಪಾವತಿಸುವಂತೆ ಪೋಷಕರಿಗೆ ಸೂಚಿಸಬೇಕು.
– ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ಬಗ್ಗೆ ಸರ್ಕಾರ ಪರಿಶೀಲಿಸಬೇಕು.
– ಶಿಕ್ಷಕರ ಕಲ್ಯಾಣ ನಿಧಿಯಿಂದ ಖಾಸಗಿ ಶಿಕ್ಷಕರಿಗೂ ಪರಿಹಾರ ನೀಡಬೇಕು.
– ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯ ಖಾಸಗಿ ಶಾಲಾ ಶಿಕ್ಷಕರಿಗೂ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next