Advertisement

ಮಾನವೀಯತೆ ರಹಿತ ಬದುಕು ಸಲ್ಲ

10:35 AM Jan 28, 2019 | |

ಸಿಂಧನೂರು: ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಯಾರಲ್ಲಿ ಮಾನವೀಯ ಮೌಲ್ಯ ಇರುವುದಿಲ್ಲವೋ ಅವರು ಇದ್ದೂ ಸತ್ತಂತೆ. ಅಂತಹ ಬದುಕು ಬದುಕೇ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅಭಿಪ್ರಾಯಪಟ್ಟರು.

Advertisement

ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಜೆಸ್ಕಾಂ ಇಲಾಖೆ ಆವರಣದಲ್ಲಿ ನಡೆದ ಸಿಂಧನೂರು ಕೆಪಿಟಿಸಿಎಲ್‌, ಜೆಸ್ಕಾಂ ಅಧಿಕಾರಿಗಳು, ನೌಕರರು ಹಾಗೂ ವಿದ್ಯುತ್‌ ಗುತ್ತಿಗೆದಾರರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 8ನೇ ವರ್ಷದ ಕ್ರೀಡಾಕೂಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ, 2018ನೇ ಸಾಲಿನ ಉತ್ತಮ ಜೆಸ್ಕಾಂ ಗ್ರಾಹಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಅನಾಥ ಮಕ್ಕಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದರಿಂದ ಮನುಷ್ಯ ದುರ್ಮಾರ್ಗದಲ್ಲಿ ಸಾಗುತ್ತಿದ್ದಾನೆ. ಮಾನವೀಯ ಮೌಲ್ಯ ಅಳವಡಿಸಿಕೊಳ್ಳದವರು ಸುಂದರ ಬದುಕು ಸಾಧ್ಯವಾಗುವುದಿಲ್ಲ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆಯಲಿ ಅವನಲ್ಲಿ ಕರುಣೆ, ಪ್ರೀತಿ, ಸಾಮಾಜಿಕ ಕಳಕಳಿಯಂತ ಮೌಲ್ಯಗಳಿರಬೇಕು. ಇದು ಇಲ್ಲದೇ ಇರುವುದರಿಂದ ಅನಾಥ ಆಶ್ರಮಗಳು ಹೆಚ್ಚಾಗುತ್ತಿವೆ. ಅನೇಕ ಮಕ್ಕಳು ವೃದ್ಧ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಮಕ್ಕಳು ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು ಎಂದರು.

ಸಿಂಧನೂರು ಜೆಸ್ಕಾಂ ಇಲಾಖೆ ಒಳ್ಳೆಯ ಕೆಲಸ ಮಾಡುತ್ತಿದೆ. ಬಡವರನ್ನು ಗುರುತಿಸಿ ಸಹಾಯಧನ ನೀಡುವುದು, ಉತ್ತಮ ಗ್ರಾಹಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಜೆಸ್ಕಾಂ ಅಧಿಕಾರಿ ಚಂದ್ರಶೇಖರ ದೇಸಾಯಿ ಮಾತನಾಡಿ, ನಮ್ಮ ಇಲಾಖೆಯಿಂದ ಪ್ರತಿವರ್ಷ ಗಣರಾಜ್ಯೋತ್ಸವದ ಅಂಗವಾಗಿ ಬಡವರಿಗೆ ಸಹಾಯಧನ ಮಾಡುತ್ತಾ ಬಂದಿದ್ದೇವೆ. ವಿವಿಧ ಕ್ರೀಡೆ ಆಯೋಜಿಸಲಾಗುತ್ತಿದೆ. ಈ ವರ್ಷ ಬಡ ಅನಾಥ ಆಶ್ರಮದವರಿಗೆ ಒಂದು ಲಕ್ಷ‌ ರೂ. ಸಹಾಯಧನ ಹಾಗೂ ಮಕ್ಕಳಿಗೆ ಪುಸ್ತಕ ವಿತರಿಸಲಾಗಿದೆ. ಉತ್ತಮ ಗ್ರಾಹಕರನ್ನು ಗೌರವಿಸಲಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜೆಸ್ಕಾಂ ಸಿಬ್ಬಂದಿಗಳಾದ ನಟರಾಜ, ರಿಯಾಜ ಅಹ್ಮದ್‌, ಬಸನಗೌಡ ನಾಡಂಗ, ಮಹಮ್ಮದ್‌, ಬಸವರಾಜ ರೆಡ್ಡಿ, ಅನಾಥ ಆಶ್ರಮದ ಸಿಬ್ಬಂದಿ ಜೋಸೆಫ್‌, ಪುಷ್ಪಲತಾ, ಅವಿನಾಶ ದೇಶಪಾಂಡೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next