Advertisement

KPTCL, ESCOM; ವಿದ್ಯುತ್‌ಗೆ ವನ್ಯಜೀವಿಗಳ ಬಲಿ: ಎಸ್ಕಾಂಗಳಿಗೆ ನೋಟಿಸ್‌

01:23 AM Jul 20, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆನೆಗಳೂ ಸೇರಿದಂತೆ ವನ್ಯಜೀವಿಗಳು ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪುತ್ತಿರುವ ವಿಚಾರವಾಗಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ಸಂಬಂಧ ಕರ್ನಾಟಕ ರಾಜ್ಯ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಹಾಗೂ ಎಲ್ಲ ಎಸ್ಕಾಂಗಳಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ದಸರಾ ಆನೆ ಅಶ್ವತ್ಥಾಮ ಸಾವಿನ ಕುರಿತು ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾ| ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಅರಣ್ಯ ಇಲಾಖೆ ಪರ ವಕೀಲರು ವಾದ ಮಂಡಿಸಿ, ಆನೆಗಳು ಸೇರಿದಂತೆ ಇತರ ವನ್ಯಜೀವಿಗಳ ಸಾವಿಗೆ ಅರಣ್ಯ ಪ್ರದೇಶದಲ್ಲಿ ಮುಖ್ಯವಾಗಿ ವನ್ಯಜೀವಿಧಾಮ, ಆನೆ ಕಾರಿಡಾರ್‌ ಪ್ರದೇಶಗಳಲ್ಲಿ ಅಳವಡಿಸಲಾಗುವ ಅಸುರಕ್ಷಿತ ವಿದ್ಯುತ್‌ ಮಾರ್ಗಗಳು, ಅರಣ್ಯದಂಚಿನ ಪ್ರದೇಶಗಳ ರೈತರು ತಮ್ಮ ಕೃಷಿ ಜಮೀನುಗಳಿಗೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವುದು, ವಿದ್ಯುತ್‌ ತಂತಿ ಬೇಲಿಗಳನ್ನು ಅಳವಡಿಸುವುದು ಮುಖ್ಯ ಕಾರಣವಾಗಿದೆ.

ಈ ವಿಚಾರವಾಗಿ ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ಈ ಪ್ರಕರಣದಲ್ಲಿ ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳನ್ನು ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಇಂಧನ ಇಲಾಖೆ, ಕರ್ನಾಟಕ ರಾಜ್ಯ ವಿದ್ಯುತ್‌ ಪ್ರಸರಣ ನಿಗಮ, ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮ (ಹೆಸ್ಕಾಂ), ಗುಲ್ಬರ್ಗಾ ವಿದ್ಯುತ್‌ ಸರಬರಾಜು ನಿಗಮ (ಜೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ನಿಗಮ (ಮೆಸ್ಕಾಂ)ಕ್ಕೆ ನೋಟಿಸ್‌ ಜಾರಿಗೊಳಿಸಿ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್‌ 13ಕ್ಕೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next