Advertisement

ತೆರೆಯಿಲ್ಲದ ಕಡಲು ಸ್ನೇಹವಿಲ್ಲದ ಬದುಕು

06:00 AM Dec 07, 2018 | |

ನೀರಿಲ್ಲದ ಮೀನು, ತೆರೆಯಿಲ್ಲದ ಕಡಲು, ಸ್ನೇಹವಿಲ್ಲದ ಬದುಕು’ ಎಲ್ಲವೂ ವ್ಯರ್ಥ ಎನ್ನುವ ಮಾತಿದೆ. ಸ್ನೇಹದ ಮತ್ತೂಂದು ರೂಪವೇ ನಂಬಿಕೆ, ಪ್ರೀತಿ, ವಿಶ್ವಾಸ. ಈ ಮೂರು ಅಂಶಗಳಿಗೆ ಬೆಲೆ ಕೊಡಬೇಕೇ ಹೊರತು ಹಣ, ಆಸ್ತಿ, ಸಂಪತ್ತಿಗಲ್ಲ. ಒಮ್ಮೆ ಹುಟ್ಟಿದ ಸ್ನೇಹ ಮುಗಿಯುವುದು ಜೀವನದ ಕೊನೆಯಲ್ಲಿ. ಸ್ನೇಹಕ್ಕೆ ಇರುವ ಗೌರವ ಬಹುಶಃ ನಮ್ಮ ಯಾವ ಸಂಬಂಧಕ್ಕೂ ಇಲ್ಲ. ಅಂಥ ಅದ್ಭುತವೇ ಈ ಸ್ನೇಹ. ಕಾರಣವಿಲ್ಲದೆ ಕೆಲವರು ಇಷ್ಟವಾಗುತ್ತಾರೆ. ಕಾರಣವಿಲ್ಲದೆ ಕೆಲವರು ದೂರವಾಗುತ್ತಾರೆ. ಕಾರಣವನ್ನು ಹುಡುಕಿಕೊಂಡು ಹೋಗುವಾಗ ಕಾರಣ ಸಿಗದೆ ಹೋಗುವುದೇ ಜೀವನ ಅಲ್ವಾ? ಸ್ನೇಹ ಗಳಿಸಲು ಕಾರಣ ಬೇಕಿಲ್ಲ. ಒಂದು ಸುಂದರವಾದ ಹೃದಯ ಸಾಕು. ಆ ಹೃದಯದಲ್ಲಿ ಒಂದಿಷ್ಟು ಜಾಗ, ಆ ಜಾಗದಲ್ಲಿ ದೂರಮಾಡಲು ಸಾಧ್ಯವಾಗದಷ್ಟು  ಪ್ರೀತಿ ಇರಬೇಕು, ಈ ಪ್ರೀತಿಗೆ ಆಧಾರ, ನಂಬಿಕೆ ಇರಬೇಕು. ಈ ನಂಬಿಕೆಗೆ ನಾವು ವಿಶ್ವಾಸ ತುಂಬಬೇಕು. ಅದು ಕೊನೆಗೆ ಮರೆಯಲಾಗದ ಸ್ನೇಹ ವಾಗಿ ಜೀವನದ ಉದ್ದಕ್ಕೂ ಇರಬೇಕು.

Advertisement

ಒಬ್ಬರ ಸ್ನೇಹವನ್ನು ಗೆಲ್ಲುವುದು ತುಂಬಾ ಸುಲಭ. ಆದರೆ, ಆ ಸ್ನೇಹವನ್ನು ಕೊನೆಯ ತನಕ ಕಾಪಾಡುವುದೇ ಒಂದು ಒಂದು ದೊಡ್ಡ ಸವಾಲು. ಸದ್ದಿಲ್ಲದೆ ಹುಟ್ಟುವ ಸ್ನೇಹ ಕೊನೆಗೆ ಪ್ರೀತಿಯಾಗಿ ಅರಳುತ್ತದೆ. ಆದರೆ, ಅದು ಎಷ್ಟು ದಿನ ಉಳಿಯುತ್ತದೆ ಎನ್ನುವುದೇ ಒಂದು ಆತಂಕ. ಎಲ್ಲಾ ಸಂಬಂಧಗಳಿಗೆ ಮೊದಲ ಹಂತವೇ ಸ್ನೇಹ. ನಂತರ ಅದು ವಿವಿಧ ರೂಪಗಳಿಗೆ ಬದಲಾವಣೆಯಾಗುತ್ತದೆ. ಸ್ನೇಹಿತರು ಪ್ರೇಮಿಗಳಾಗಬಹುದು. ಆದರೆ, ಪ್ರೇಮಿಗಳು ಮತ್ತೂಮ್ಮೆ ಸ್ನೇಹಿತರಾಗುವುದು ತುಂಬಾ ಕಷ್ಟದ ಸಂಗತಿ.

ಇನ್ನು ಸ್ನೇಹಕ್ಕೆ ಜಾತಿ ಬೇಕಿಲ್ಲ. ಬದಲು ಕೊನೆತನಕ ಜೊತೆಗಿ ದ್ದರೆ ಸಾಕು. ನಮ್ಮಲ್ಲಿ ಎಂಥದ್ದೇ ಸಮಸ್ಯೆಗಳಿದ್ದರೂ ಸ್ನೇಹಿತರಲ್ಲಿ ಹೇಳಿಕೊಳ್ಳುವುದು ಒಳ್ಳೆಯದು. ಕಷ್ಟ , ಹೇಳಲಾಗದ ನೋವುಗಳಿದ್ದರೆ ಮೊದಲು ನೆನಪಾಗುವುದೇ ಈ ಸ್ನೇಹಿತರು. ಈ ಅದ್ಭುತವಾದ ಸಂಬಂಧ ಕೊಟ್ಟಿದ್ದೇ ದೇವರು. ಸ್ನೇಹಿತರು ದೇವರು ಕೊಟ್ಟ ಉಡುಗೊರೆ, ತಂದೆ-ತಾಯಿ ದೇವರ ರೂಪದಲ್ಲಿ ಬಂದ ಉಡುಗೊರೆ. ದೇವರು ಬರೀ ಸಂಬಂಧವನ್ನು ಸೃಷ್ಟಿಸಿದ್ದಾರೆ. ಆದರೆ, ಅದನ್ನು ರೂಪಿಸಬೇಕಾದದ್ದು ನಾವು. 

ಕಡಲಲ್ಲಿ ಸಾವಿರಾರು ಮುತ್ತುಗಳಿರಬಹುದು. ಆದರೆ, ಜೀವನದಲ್ಲಿ ಸಿಗೋದು ಎರಡೇ ಮುತ್ತುಗಳು. ಒಂದು ಸ್ನೇಹ, ಇನ್ನೊಂದು ಪ್ರೀತಿ. ಇದರಲ್ಲಿ ಯಾವುದನ್ನಾದರೂ ಕಳೆದುಕೊಂಡರೂ ನೋವಾಗುವುದು ಹೂವಿನಂಥ ಹೃದಯಕ್ಕೆ ಮಾತ್ರ. ನಾವು ಹುಟ್ಟು ವಾಗ ಏನನ್ನು ತೆಗೆದುಕೊಂಡು ಬಂದಿದ್ದೇವೆ, ಸಾಯುವಾಗ ಏನನ್ನು ತೆಗೆದುಕೊಂಡು ಹೋಗುತ್ತೇವೆ ಅನ್ನೋದು ಗೊತ್ತಿಲ್ಲ. ಆದರೆ, ಒಂದಂತೂ ಸತ್ಯ. ಈ ಹುಟ್ಟು -ಸಾವಿನ ನಡುವೆ ಇದ್ದ ನಾಲ್ಕು ದಿನದ ಜೀವನದಲ್ಲಿ ಗಳಿಸಿಕೊಂಡ ಸ್ನೇಹ, ಪ್ರೀತಿಯೇ ಶಾಶ್ವತವಾಗಿ ಉಳಿಯುತ್ತದೆ.

ರಶ್ಮಿ
 ದ್ವಿತೀಯ ಬಿ.ಕಾಂ.ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next