Advertisement

ಕಾರಂತರು ಜನಪದರ ಪ್ರಜ್ಞೆಯ ವಕ್ತಾರ: ಡಾ|ಎಂ.ಎಸ್‌. ಮೂರ್ತಿ

10:11 AM Jun 24, 2022 | Team Udayavani |

ಹುಬ್ಬಳ್ಳಿ: ಡಾ| ಶಿವರಾಮ ಕಾರಂತರು ತಮ್ಮ ಬದುಕನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು, ಯಾರ-ಯಾವ ಮುಲಾಜಿಗೂ ಒಳಗಾಗದೆ ಉತ್ತಮ ಬದುಕಿನ ವಿಚಾರಗಳನ್ನು ಬಿತ್ತಿದವರು. ಅವರು ಜನಪದರ ಪ್ರಜ್ಞೆಯ ವಕ್ತಾರರಾಗಿದ್ದಾರೆ ಎಂದು ಚಿತ್ರಕಲಾವಿದ ಹಾಗೂ ಅಂಕಣಕಾರ ಡಾ| ಎಂ.ಎಸ್‌. ಮೂರ್ತಿ ಹೇಳಿದರು.

Advertisement

ಜಗದ್ಗುರು ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಗುರುವಾರ ಆಯೋಜಿಸಿದ್ದ ಡಾ| ಶಿವರಾಮ ಕಾರಂತರ ಜೀವನ ಮೌಲ್ಯಗಳು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.

ಏಳು ವರ್ಷದವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂಬ ಚಿಂತನೆಯಂತೆ, ತಮ್ಮ ಮಕ್ಕಳನ್ನು ಏಳು ವರ್ಷಗಳವರೆಗೆ ಶಾಲೆಗೆ ಕಳುಹಿಸದೆ ಮನೆಯಲ್ಲಿಯೇ ಅವರಿಗೆ ನಿಸರ್ಗ, ಪ್ರಾಣಿ-ಪಕ್ಷಿಗಳು, ಆಟಗಳ ಕುರಿತಾಗಿ ಹೇಳಿಕೊಟ್ಟಿದ್ದರು. ಗಾಂಧೀಜಿಯವರ ಆತ್ಮ ಕಥನಕ್ಕೂ, ಕಾರಂತರ ಆತ್ಮಕಥನಕ್ಕೂ ಹತ್ತಿರವಿದ್ದಂತೆ ಭಾಸವಾಗುತ್ತದೆ. ಕಲಿಕೆಯ ಕುತೂಹಲವನ್ನು ಕಾರಂತರು ಕೊನೆವರೆಗೂ ಕಳೆದುಕೊಳ್ಳಲಿಲ್ಲ. ಮಗುವಿನ ಮನಸ್ಸು ಅವರದ್ದಾಗಿತ್ತು. ಪ್ರಯೋಗಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದರು.

ನಮ್ಮ ನೆಲದ ಸ್ವಾದ ಮನಗಳಲ್ಲಿ ದಾಖಲಾಗಬೇಕು, ನೆಲದ ಸೊಗಡು, ನಿಸರ್ಗವನ್ನು ಪ್ರೀತಿಸಬೇಕು ಎಂಬುದನ್ನು ತೋರಿಕೊಟ್ಟರು. ನನ್ನದು ಶ್ರೇಷ್ಠ ಎಂಬ ಅನಿಸಿಕೆ ಅವರದ್ದಾಗಿರಲೇ ಇಲ್ಲ. ಡಾ| ಕಾರಂತರನ್ನು ಕೇವಲ ಒಂದು ಮುಖ, ಒಂದು ಕ್ಷೇತ್ರ, ಒಂದು ಹೇಳಿಕೆ ಆಧಾರದಲ್ಲಿ ಅರ್ಥೈಯಿಸುವ, ವ್ಯಾಖ್ಯಾನಿಸುವ ಬದಲು ಅವರ ಬದುಕು-ಚಿಂತನೆ, ಬರವಣಿಗೆಯನ್ನು ಸಮಗ್ರವಾಗಿ ನೋಡಿದಾಗ ಮಾತ್ರ ನೆಲಸಂಸ್ಕೃತಿ, ನಿಸರ್ಗ ಪ್ರೇಮಿ, ಉತ್ತಮ ಬದುಕಿನ ಮಾರ್ಗದರ್ಶಕರಾಗಿ ಕಾರಂತರು ಗೋಚರಿಸುತ್ತಾರೆ. ವಿವಾದಾತ್ಮಕ, ಚರ್ಚಾತ್ಮಕ ವಿಷಯಗಳಿಗೆ ಅವರನ್ನು ಎಳೆತಂದು, ಯಾವುದೋ ಸಂದರ್ಭದ ಒಂದು ಹೇಳಿಕೆಯನ್ನೇ ಕೇಂದ್ರವಾಗಿಟ್ಟುಕೊಂಡು ಅವರನ್ನು ನೋಡುವುದು ಬೇಡ ಎಂದು ಹೇಳಿದರು.

ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಯತ್ನ ಅಗತ್ಯ: ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿನಿರ್ದೇಶಕ ಪ್ರೊ| ಕೃಷ್ಣಮೂರ್ತಿ ಬಿಳಿಗೆರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಶಿವರಾಮ ಕಾರಂತರು ಬ್ರಿಟಿಷರ ಆಳ್ವಿಕೆ ಹಾಗೂ ಸ್ವಾತಂತ್ರ್ಯ ಭಾರತದ ಆಳ್ವಿಕೆಯನ್ನು ಕಂಡವರು. ಕಾರಂತರ ಬದುಕು ಮೌಲ್ಯಯುತ ಹಾಗೂ ಪ್ರಾಮಾಣಿಕತೆಗೆ ಪ್ರೇರಣೆ ನೀಡುತ್ತದೆ. ಜೀವಕೇಂದ್ರಿತ ಬದುಕು-ಬರಹ ಅವರದ್ದಾಗಿತ್ತು. ಜಾಗತೀಕರಣದಿಂದ ಶಿಕ್ಷಣ ಬದಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಿಸುವುದು ಇಂದಿನ ಅವಶ್ಯವಾಗಿದೆ. ದುಡಿದು ತಿನ್ನುವವರಿಗೆ ಕೊನೆ ಸ್ಥಾನ ಎನ್ನುವಂತಾಗಿದೆ. ಪ್ರತಿಯೊಬ್ಬರಲ್ಲೂ ನಿಷ್ಠುರತೆ ಇರಬೇಕು, ಪ್ರೀತಿ ಕಳೆದುಕೊಳ್ಳಬಾರದು, ಟೀಕೆಗಳು ಇರಲಿ, ದ್ವೇಷ ಬೇಡ ಎಂದರು.

Advertisement

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆದ್ಯತೆಯ ಚಟುವಟಿಕೆಗಳು ನಡೆಯುವಂತಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸ್ವಂತಿಕೆಯೊಂದಿಗೆ ಬೆಳೆಯಬೇಕು. ಪ್ರತಿ ತರಗತಿಯ ಪ್ರತಿ ಬೋಧನೆಯೂ ಸೆಮಿನಾರ್‌ ರೂಪ ಪಡೆಯಬೇಕಾಗಿದೆ. ಒಂದು ತರಗತಿ ನಡೆಯಬೇಕೆಂದರೆ ಎಲ್ಲ ವೆಚ್ಚ ಸೇರಿ ಅಂದಾಜು 30-40 ಸಾವಿರ ರೂ. ದಿನಕ್ಕೆ ವೆಚ್ಚ ಆಗುತ್ತದೆ. ಇದು ಸಾರ್ಥಕತೆ ಪಡೆಯದಿದ್ದರೆ ಏನು ಪ್ರಯೋಜನ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಡಾ| ಲಿಂಗರಾಜ ಅಂಗಡಿ, ಉಪನ್ಯಾಸಕಿ ಶಶಿಲಿಯಾ ಡಿಕ್ರೂಜ್‌ ಇದ್ದರು. ಡಾ| ಜಿ.ಎಸ್‌. ನವಲಗುಂದ ಸ್ವಾಗತಿಸಿದರು. ಡಾ| ಸುಪ್ರಿಯಾ ಮಲಶೆಟ್ಟಿ ನಿರೂಪಿಸಿದರು. ಡಾ| ಮಮತಾಜಬೇಗಂ ತಹಶೀಲ್ದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next