ಪುಂಜಾಲಕಟ್ಟೆ : ಕೋವಿಡ್ ಕುರಿತು ಜಾಗೃತಿ ಮೂಡಿಸಲು ತೆರಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಲು ಮುಂದಾಗಿ ಕೊಲೆ ಬೆದರಿಕೆ ಹಾಕಿರುವ ಪ್ರಕರಣದಡಿ ಇಬ್ಬರನ್ನು ಬಂಧಿಸಿರುವ ಘಟನೆ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಸಂದೀಪ್ ಹಾಗೂ ಸಂತೋಷ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ :
ಇಂದು ( ಮೇ.08) ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ಆಶಾ ಕಾರ್ಯಕತೆಯೊಬ್ಬರು ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದ್ದ ಸೋಂಕಿತೆಯ ಮನೆಗೆ ತೆರಳಿದ್ದರು. ಸೋಂಕಿತೆಗೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿ, ಹೊರಗೆ ತಿರುಗಾಡದಂತೆ ಸೂಚಿಸಿ, ವಾಪಾಸ್ ಮರಳುತ್ತಿದ್ದರು. ಈ ವೇಳೆ ಸೋಂಕಿತೆಯ ಸಂಬಂಧಿಕರಾದ ಸರಪಾಡಿಯ ಸಂದೀಪ್ ಮತ್ತು ಸಂತೋಷ ಎಂಬ ವ್ಯಕ್ತಿಗಳು ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
‘ನನ್ನ ಅತ್ತೆಗೆ ಕೋವಿಡ್ ಟೆಸ್ಟ್ ಮಾಡಿಸಿ ಪಾಸಿಟಿವ್ ಬರಿಸಿದ್ದೇ ನೀನು, ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ಇದೆ ಎಂದು ವರದಿ ಮಾಡುವುದರಿಂದ ನಿಮಗೆ ಹಣ ಬರುತ್ತದೆ ಎಂದು ಆರೋಪಿಸಿ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಆಶಾ ಕಾರ್ಯಕರ್ತೆಯು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಕಲಂ 354, 506, 269, 270 ಮತ್ತು ಕಲಂ 5 [1] ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.