ಬೃಹತ್ ಹಡಗಿನ ಇಂಜಿನ್‌ಕೆಟ್ಟು ನಿಂತಿತ್ತು. ಹತ್ತಾರು ತಜ್ಞರು ಬಂದು ಪರೀಕ್ಷಿಸಿದರು. ಆದರೇನಂತೆ? ಸಾಕಷ್ಟು ಹಳೆಯ ಹಡಗು ಅದಾಗಿದ್ದರಿಂದ, ಅದನ್ನು ಸರಿಪಡಿಸುವುದು ಸಾಧ್ಯವಾಗಲಿಲ್ಲ. ಹಳೆಯದೆನ್ನುವ ಕಾರಣಕ್ಕೇ ಅದು ಸಾವಿರಾರು ಪಯಣಿಗರನ್ನು ಆಕರ್ಷಿಸುತ್ತಿತ್ತು. ಲಕ್ಷಾಂತರ ರೂಪಾಯಿಗಳಷ್ಟು ಆದಾಯವನ್ನು ತಂದುಕೊಡುತ್ತಿತ್ತು. ಹಾಗಾಗಿ, ಮಾಲೀಕರಿಗೆ ನಿಂತು ಹೋದ ಆದಾಯದ ಚಿಂತೆ. ಹಡಗಿನ ಎಂಜಿನ್ ರಿಪೇರಿ ಮಾಡುವಂತೆ ಮಾಲೀಕರು ಅದೆಷ್ಟೋ ಜನರಿಗೆ ಹೇಳಿನೋಡಿದರು. ಆದರೆ ಹಲವರು ಪ್ರಯತ್ನಿಸಿದರೂ ಎಂಜಿನ್ ರಿಪೇರಿಯಾಗಲಿಲ್ಲ.
ಹೀಗಿರುವಾಗಲೇ, ಸುಕ್ಕು ಗಲ್ಲದ, ಬಿಳಿಯ ಗಡ್ಡದ ಗೂನು ಬೆನ್ನಿನ ವೃದ್ಧನೊಬ್ಬ, ತಾನು ಎಂಜಿನ್ ರಿಪೇರಿ ಮಾಡುವುದಾಗಿ ಬಂದ.ಗಂಟೆಗಟ್ಟಲೆಕಾಲ ಏನನ್ನೂ ಮಾಡದೇ ಸುಮ್ಮನೇ ಇಂಜಿನನ್ನು ದಿಟ್ಟಿಸುತ್ತಕುಳಿತಿದ್ದ ಅವನೆಡೆಗೆ ಹಡಗಿನ ಮಾಲೀಕರಿಗೆ ಸಣ್ಣದ್ದೊಂದು ಅಸಹನೆ. ಆದರೆ ವೃದ್ಧನಿಗೆ ಅವರೆಡೆಗೆ ಲಕ್ಷ್ಯವಿಲ್ಲ. ಸಾಕಷ್ಟುಕಾಲ ಇಂಜಿನ್ ಗಮನಿಸಿದ ವೃದ್ಧ,ಕೊನೆಯಲ್ಲೊಮ್ಮೆ ಎದ್ದು ನಿಂತ. ಹಾಗೆ ನಿಂತವನು ತನ್ನ ಚೀಲದಲ್ಲಿದ್ದ ಸಣ್ಣದೊಂದು ಸುತ್ತಿಗೆಯಿಂದ ಇಂಜಿನ್‌ನ ಮೂಲೆಯೊಂದಕ್ಕೆ ಎರಡು ಪೆಟ್ಟು ಹಾಕಿದ.
ಏನಾಶ್ಚರ್ಯ..!! ತಕ್ಷಣವೇ ಇಂಜಿನ್ ಸದ್ದು ಮಾಡಿತ್ತು. ಮಾಲೀಕರಿಗೆ ಖುಷಿಯೋ ಖುಷಿ. ಕೆಲಸ ಮುಗಿಸಿದ ವೃದ್ಧ ಒಂದೂ ಮಾತಾಡದೆ ಎದ್ದು ಹೋದ. ಮರುದಿನ ಆತ ಬಿಲ್ ಕಳಿಸಿದಾಗ, ಮಾಲೀಕರಿಗೆ ಗಾಬರಿ. ಬಿಲ್ಲಿನ ಮೊತ್ತ- 25000 ರೂ. ಎಂದಿತ್ತು! ಸುತ್ತಿಗೆಯಿಂದ ಎರಡು ಸಲ ಬಾರಿಸಿದ್ದು ಬಿಟ್ಟರೇ ಬೇರಿನ್ನೇನೂ ಮಾಡಿಲ್ಲ. ಅಷ್ಟುಕೆಲಸಕ್ಕೇ ಯಾರಾದರೂ 25000 ರೂ.ಕೇಳಬಹುದಾ? ಮುದಿಯನಿಗೆ ತಲೆಕೆಟ್ಟಿರಬೇಕು. ಸರಿಯಾದ ಬಿಲ್‌ಕಳಿಸಲು ಹೇಳಿ ಎಂದ ಹಡಗಿನೆ ಮಾಲೀಕ. ಮರುದಿನ, ಆ ವೃದ್ಧ ಮತ್ತೂಂದು ಬಿಲ್‌ಕಳುಹಿಸಿದ್ದ. ಅದು ಹೀಗಿತ್ತು. “ಒಟ್ಟು ಶುಲ್ಕ: 25000/-, ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಶುಲ್ಕ:50/-, ಎಲ್ಲಿ ಬಾರಿಸಬೇಕೆನ್ನುವ ನನ್ನ ಅನುಭವದ ಜ್ಞಾನಕ್ಕೆ:24950/-‘. ಅದನ್ನು ಕಂಡ ಹಡಗಿನ ಮಾಲೀಕರ ತುಟಿಯಂಚಲ್ಲಿ ಅರ್ಥಪೂರ್ಣ ಮೆಚ್ಚುಗೆಯ ಕಿರುನಗು.
ಬದುಕಿಗೆ ತುಂಬ ಹತ್ತಿರವೆನಿಸುವ ಅರ್ಥಪೂರ್ಣ ಕತೆಯಿದು.ಕಷ್ಟಗಳಿಗೆ ಬೆದರಿ ನಿಲ್ಲುವ ಬದುಕು ಸಹ ಥೇಟು ಈ ಕೆಟ್ಟುನಿಂತ ಹಡಗಿನ ಇಂಜಿನ್‌ನಂಥದ್ದು. ಅದನ್ನು ಸಂಭಾಳಿಸುವುದಕ್ಕೆ ಪ್ರಯತ್ನ, ಪರಿಶ್ರಮಗಳು ಬೇಕು. ಆದರೆ ಹಾಗೆ ಮಾಡುವ ಪ್ರಯತ್ನಕ್ಕೊಂದು ಗೊತ್ತುಗುರಿಯಿರದಿದ್ದರೇ ಎಲ್ಲವೂ ವ್ಯರ್ಥವೇ. ಸಡ್ಡು ಹೊಡೆಯುವ ಮುನ್ನ ಸರಿಯಾದ ಮಾರ್ಗ ಯಾವುದೆನ್ನುವುದರ ಅರಿವಿರಬೇಕು. ಸರಿಯಾದ ದಿಕ್ಕಿಗಿರುವ ಪರಿಶ್ರಮಕ್ಕೆ ಮಾತ್ರವೇ ಬೆಲೆ. ಅದಕ್ಕೆ ಮಾತ್ರ ಗೆಲುವು ಅಲ್ಲವಾ..?
ಮೂಲ : ಕ್ರಿಸಾಂತಾ ಬೆಲ್ಲಾ
ಅನುವಾದ : ಗುರುರಾಜ ಕೊಡ್ಕಣಿ ಯಲ್ಲಾಪುರ