Advertisement

ಬದುಕಿನ ಪ್ರತೀ ಕ್ಷಣ ಜಾಗೃತಾವಸ್ಥೆ

12:52 AM Jan 14, 2021 | Team Udayavani |

ಮೃತ್ಯು ಬೆನ್ನ ಹಿಂದೆಯೇ ಇದೆ ಎನ್ನುವುದು ನಮ್ಮೆಲ್ಲರ ಅರಿವಿನಲ್ಲಿ ಸದಾ ಜಾಗೃತವಾಗಿರಬೇಕು ಎಂಬುದಾಗಿ ಬುದ್ಧ ಹೇಳುತ್ತಾನೆ. ಇದು ನಿರಾಶಾವಾದ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಬದುಕಿನ ಪ್ರತೀ ಕ್ಷಣವನ್ನೂ ಇದೇ ಅಂತ್ಯ ಎಂಬಂತೆ ಪರಿಗ್ರಹಿಸಿ ಅತ್ಯುತ್ಸಾಹದಿಂದ ಪ್ರಜ್ಞಾಪೂರ್ವಕವಾಗಿ ಬದುಕುವುದಕ್ಕೆ ಇದು ಕೀಲಿಕೈ. ಪ್ರತೀ ಕ್ಷಣವೂ ಜಾಗೃತವಾಗಿ ಬದುಕುವುದಕ್ಕೆ ಇದು ಮೂಲಮಂತ್ರ.

Advertisement

ಒಮ್ಮೆ  ಹೀಗಾಯಿತು. ಒಬ್ಬ ಗುರು ತನ್ನ ಶಿಷ್ಯ ಸನ್ಯಾಸಿಯೊಬ್ಬನನ್ನು ಅರಸ ಜನಕನ ಅರ ಮನೆಗೆ ಹೋಗಲು ಹೇಳಿದ. ಶಿಷ್ಯನಿಗೆ ಆಶ್ಚರ್ಯವಾಯಿತು. “ಅಲ್ಲಿ ಹೋಗಿ ನಾನೇನು ಮಾಡಬೇಕು’ ಎಂದು ಪ್ರಶ್ನಿಸಿದ.

“ನೀನು ಒಂದು ವಿಚಾರವನ್ನು ಕಲಿಯುವುದಿದೆ. ಅದನ್ನು ಬೇರೆಲ್ಲಿ ಗಿಂತಲೂ ಚೆನ್ನಾಗಿ ಅಲ್ಲಿ ಕಲಿಯ ಬಹುದು. ಹೀಗಾಗಿ ಕಳುಹಿಸುತ್ತಿದ್ದೇನೆ. ಮೈಯೆಲ್ಲ ಕಣ್ಣಾಗಿರು. ಅಲ್ಲಿನ ಅನುಭವ ಬಹಳಷ್ಟನ್ನು ನಿನಗೆ ಕಲಿಸಲಿದೆ’ ಎಂದು ಗುರು ಹೇಳಿದ.

ಶಿಷ್ಯ ಒಳಗೊಳಗೇ ಮೂಗು ಮುರಿದ. ತನ್ನ ಗುರುಗಳಿಂದ ಕಲಿಯ ಲಾಗದಂಥದ್ದು ಆ ಪರಮಲೌಕಿಕ ರಾಜನಲ್ಲಿ ಏನಿರಬಹುದು. ಎಲ್ಲವನ್ನೂ ತ್ಯಜಿಸಿ ವಿರಾಗಿಗಳಾದ ತನ್ನಂಥವರಿಗೆ ರಾಜ ಕಲಿಸಬಲ್ಲನೇ ಎಂದುಕೊಂಡ.

ಶಿಷ್ಯ ಸನ್ಯಾಸಿ ಜನಕನ ಅರಮನೆ ಯನ್ನು ತಲುಪಿದಾಗ ಅವನ ಅನು ಮಾನ ನಿಜವಾಯಿತು. ಅಲ್ಲಿ ದೊರೆ ಪರಮ ವೈಭವದ ಒಡ್ಡೋಲಗದಲ್ಲಿ ಮಂಡಿಸಿದ್ದ. ಅವನ ಕೈಯಲ್ಲಿ ಪಾನ ಪಾತ್ರೆಯಿತ್ತು. ಸುಂದರಿಯರಾದ ಗಣಿಕಾಸ್ತ್ರೀಯರು ಅವನ ಸುತ್ತಲೂ ಸೇರಿ ನರ್ತಿಸುತ್ತಿದ್ದರು. ಬದಿಯಲ್ಲಿ ಬಗೆಬಗೆಯ ಭಕ್ಷ್ಯ-ಭೋಜ್ಯಗಳಿಂದ ಕೂಡಿದ ಭೋಜನವೂ ಸಿದ್ಧವಾಗಿತ್ತು.

Advertisement

“ನಾನು ಅಂದುಕೊಂಡದ್ದೇ ಸರಿ’ ಎಂದು ಶಿಷ್ಯ ಸ್ವಗತವಾಡಿದ. ಅಷ್ಟರಲ್ಲಿ ಸನ್ಯಾಸಿಯನ್ನು ಕಂಡ ಅರಸ ಜನಕ ಗಹಗಹಿಸಿ ನಗುತ್ತ ಹೇಳಿದ, “ನಿನ್ನ ವೃದ್ಧ ಗುರು ಜ್ಞಾನಿ. ಆದರೆ ನಿನಗೇನೂ ಗೊತ್ತಿಲ್ಲ. ನಿನಗೆ ನಿನ್ನ ಗುರುವಿನ ಮೇಲೆ ವಿಶ್ವಾಸವಿಲ್ಲ. ನೀನಿಲ್ಲಿಗೆ ಬಂದದ್ದು ಅರೆಮನಸ್ಸಿನಿಂದ, ಅಲ್ಲವೇ?’

ಸನ್ಯಾಸಿಗೆ ಆಶ್ಚರ್ಯವಾಯಿತು. “ನಿಮ್ಮ ಕೈಯಲ್ಲಿ ಪಾನಪಾತ್ರೆಯಿದೆ. ಆದರೂ ನನ್ನ ಒಳ ಮನಸ್ಸು ನಿಮಗೆ ಹೇಗೆ ತಿಳಿಯಿತು’ ಎಂದು ಪ್ರಶ್ನಿಸಿದ. “ಅದರ ಬಗ್ಗೆ ಮತ್ತೆ ಮಾತಾಡೋಣ. ಈಗ ನಿನಗೊಂದು ಪರೀಕ್ಷೆ ಇದೆ. ನಾನು ಒಂದು ಪೂರ್ತಿ ಎಣ್ಣೆ ತುಂಬಿದ ಬೋಗುಣಿ ತರಿಸುತ್ತೇನೆ. ಅದನ್ನು ತಲೆಯ ಮೇಲೆ ಹೊತ್ತುಕೊಂಡು ಈ ದರಬಾರಿಗೆ ಏಳು ಸುತ್ತು ಹಾಕಬೇಕು. ಇದರಿಂದ ತಪ್ಪಿಸಿ ಕೊಂಡರೂ ಒಂದೇ ಒಂದು ಹನಿ ಎಣ್ಣೆ ಹೊರಚೆಲ್ಲಿದರೂ ತಲೆ ಹಾರುತ್ತದೆ’ ಎಂದು ಜನಕ ಹೇಳಿದ. ಅದಕ್ಕೆ ತಕ್ಕುದಾಗಿ ಎಣ್ಣೆ ತುಂಬಿದ ಬೋಗುಣಿ ಬಂತು. ಸೈನಿಕರು ಖಡ್ಗಗಳನ್ನು ಒರೆಯಿಂದ ಸೆಳೆದು ಸನ್ನದ್ಧರಾದರು.

ಈ ಮೂರ್ಖರಲ್ಲಿಗೆ ಬಂದದ್ದೇ ತಪ್ಪಾಯಿತು ಎಂದು ಸನ್ಯಾಸಿ ಯೋಚಿಸಿದ. ಆದರೆ ವಿಧಿಯಿಲ್ಲವಲ್ಲ! ತಲೆಯ ಮೇಲೆ ಎಣ್ಣೆ ಹೊತ್ತುಕೊಂಡ. ಈ ನಡುವೆ ಸಂಗೀತ, ನೃತ್ಯ ಮುಂದುವರಿಯಿತು. ಭೋಜನದ ಸುವಾಸನೆ ಸೆಳೆಯುತ್ತಿತ್ತು. ಆದರೂ ಅತ್ಯಂತ ಕಷ್ಟಪಟ್ಟು ಏಳು ಸುತ್ತು ಬಂದ.

ಬಳಿಕ ದೊರೆ ಜನಕ ಕೇಳಿದ, “ಹೇಗೆ ಸಾಧ್ಯವಾಯಿತು?’

“ಸುತ್ತಲೂ ಖಡ್ಗಗಳು ಕಾವಲಿದ್ದವಲ್ಲ! ಮೃತ್ಯು ಹಿಂದೆಂದೂ ಇಷ್ಟು ನಿಕಟವಾಗಿ ರಲಿಲ್ಲ. ಭೋಜನ, ಸುಂದರ ಸ್ತ್ರೀಯರು ಸುತ್ತ ಇದ್ದರೂ ಮರಣಭಯ ನನ್ನನ್ನು ಜಾಗೃತ ಸ್ಥಿತಿಯಲ್ಲಿ ಇರಿಸಿತ್ತು…’

“ನೀನು ಯಾವುದನ್ನು ಕಲಿಯಬೇಕು ಎಂದು ನಿನ್ನ ಗುರು ನಿನ್ನನ್ನು ಇಲ್ಲಿಗೆ ಕಳಿಸಿದ್ದನೋ ಅದು ಇದೇ’ ಎಂದ ಜನಕ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next