ಹೀಗೊಂದು ವೀಡಿಯೋ ಕಣ್ಣಿಗೆ ಬಿತ್ತು. ಬಹುಶ: ಮೂರು ನಿಮಿಷಗಳ ವೀಡಿಯೋ, ನೋಡಲು ಶುರು ಮಾಡಿದಾಗ ಚೆನ್ನಾಗಿದೆ ಅನ್ನಿಸಿ ಮುಂದುವರೆಸಿದೆ. ಮೊದಲ ಸನ್ನಿವೇಶದಲ್ಲಿ, ಅಲಾರಂ ಹೊಡೆದು ಕೊಂಡಾಗ, ಮನೆಯಾತ ಏಳುತ್ತಾನೆ. ಪಕ್ಕದಲ್ಲೇ ಇರುವ ಮೊಬೈಲ್ ಕೈಗೆತ್ತಿಕೊಂಡು ನೋಡಿದಾಗ ಚಾರ್ಜ್‌ಗೆ ಹಾಕೋದು ಮರೆತಿರುವುದು ತಿಳಿಯುತ್ತದೆ. ಆಗಲೇ ಮನಸ್ಸಿಗೆ ಇರುಸು ಮುರುಸು. ಮೊಬೈಲನ್ನು ಚಾರ್ಜ್‌ಗೆ ಹಾಕಿ ಬಚ್ಚಲಿಗೆ ನಡೆದು, ಸ್ನಾನಾದಿಗಳನ್ನು ಮುಗಿಸಿ ಬರುತ್ತಾನೆ. ಅಷ್ಟು ಹೊತ್ತಿಗೆ ಡಬ್ಬಿಯೂ ಸಿದ್ಧವಾಗಿರುತ್ತದೆ.
ಸರಸರ ಅಂತ ಟೀ ಕುಡಿಯುವಾಗ ಕೈಲಿ ಪೇಪರ್. ಗಬಗಬ ಅಂತ ತಿಂಡಿ ತಿನ್ನುವಾಗ ಕೈಲಿ ಮೊಬೈಲ್. ಅದೇನೋ ಧುಮಧುಮ, ಮಾತಿಲ್ಲ ಕಥೆಯಿಲ್ಲ. ಸಿಕ್ಕಾಪಟ್ಟೆ ಧಾವಂತ, ಹೆಂಡತಿಯು ಕಣ್ಣಲ್ಲೇ ಬಾಯ್ ಹೇಳಿದಾಗಲೂ ಅವಳತ್ತ ನೋಟವೇ ಇಲ್ಲ. ಬಾಯ್ತೆರೆದು ಹೇಳಿದಾಗ ಉತ್ತರವೇ ಇಲ್ಲ. ಮೆಟ್ಟಿಲಿಳಿದು ಬೀದಿಯಲ್ಲಿ ಸಾಗುವ ಈಕೆ ಕಿಟಕಿಯಿಂದ ನೋಡುವಾಗಲೂ ಅವಳತ್ತ ಹಿಂದಿರುಗಿ ನೋಡುವುದೂ ಇಲ್ಲ. ಬರೀ ಧಾವಂತ. ಬಹಳಷ್ಟು ಮನೆಗಳ ನಿತ್ಯೋತ್ಸವ. ಅವನಿಗೆ ಬಸ್ ತಪ್ಪಿ ಹೋಗುತ್ತೆ. ಬೇರೆ ಬಸ್ ಬರೋದಿಲ್ಲ. ಬೇಗ ಆಟೋ ಸಿಗೋದಿಲ್ಲ.
ಅಂತೂಇಂತೂ ಒಂದು ಆಟೋ ಹಿಡಿದು ರೈಲ್ವೇ ಸ್ಟೇಷನ್ ಕಡೆ ಸಾಗಿ ದುಡ್ಡು ತೆರೆಯುವಾಗ ಎಷ್ಟೆಲ್ಲ ಖರ್ಚಾಯ್ತು ಎಂಬ ದುಗುಡ, ಸಿಟ್ಟು ಇತ್ಯಾದಿ. ಈ ಮಧ್ಯೆ ನಾಲ್ಕಾರು ಬಾರಿ ಹೆಂಡತಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸುವುದೇ ಇಲ್ಲ. ಅಂತೂ ಇಂತೂ ಸ್ಟೇಷನ್ ತಲುಪಿದಾಗ ಮತ್ತೆ ಕರೆ ಬಂದಾಗ ಅದನ್ನು ಸ್ವೀಕರಿಸಿ ಸಿಡುಕುತ್ತಾ “ಏನು?’ ಎನ್ನುತ್ತಾನೆ. ಆ ಕಡೆಯಿಂದ ಬಂದ ಮಾತುಗಳನ್ನು ಆಲಿಸುತ್ತಾ ಅವನ ಮುಖಚರ್ಯೆ ಬದಲಾಗುತ್ತಾ ಸಾಗುತ್ತದೆ. ಅಲ್ಲೇ ಇರುವ ಸಿಮೆಂಟಿನ ಬೆಂಚಿನ ಮೇಲೆ ಕೂತು ಮೊಬೈಲ್ ಡಿಸ್ಕನೆಕ್ಟ್ ಮಾಡುತ್ತಾನೆ. ಸಾಗುವ ರೈಲನ್ನು ನೋಡುತ್ತಾ ಕೂರುತ್ತಾನೆ. ಅವನಿಗೆ ಕಳೆದ ವಾರಂತ್ಯದಲ್ಲೇ ನಿವೃತ್ತಿಯಾಗಿರುತ್ತದೆ. ಈ ಧಾವಂತದಲ್ಲಿ ಅವನಿಗೆ ನೆನಪೇ ಇರುವುದಿಲ್ಲ. ಸೋಮವಾರದ ಬೆಳಗಿನ ಜೀವನ ಅವನಲ್ಲಿ ಬೇರೆಲ್ಲ ವಿಷಯಗಳನ್ನೂ ಮರೆಸಿರುತ್ತದೆ. ಬೆಳಗಿನ ಧಾವಂತ, ಸುಮ್ ಸುಮ್ನೆ ಸಿಟ್ಟು ಸೆಡವು ತೋರಿದ್ದು ಅವನಿಗೆ ನಾಚಿಕೆ ತರಿಸಿತ್ತು ಎಂದುಕೊಳ್ಳಬಹುದೇ?
ವೀಡಿಯೋ ಮುಗಿದಂತೆ ನೆನಪುಗಳು ಶಾಲಾ ದಿನಕ್ಕೆ ಹೋದವು. ಶನಿವಾರ ಬೆಳಗಿನ ವೇಳೆ ಶಾಲೆ. ಹತ್ತೂವರೆಯ ಸಮಯಕ್ಕೆ ಅರ್ಧ ದಿನದ ಶಾಲೆ ಮುಗಿಸಿ ಬಸ್ ಹಿಡಿಯಲು ಕೊಂಚ ದೂರ ನಡೆಯಬೇಕಿತ್ತು. ಹಾಗೆ ನಡೆಯುವಾಗ ಒಂದಷ್ಟು ಮನೆಗಳ ಮುಂದೆಯೇ ಹೋಗಬೇಕಿತ್ತು. ಚಾಮರಾಜಪೇಟೆ ಆ ದಿವ್ಯ ನೋಟ ಹೇಗಿತ್ತು ಎಂದರೆ ಮರೆಯಲಾಗದಷ್ಟು. ಕೆಲವೊಮ್ಮೆ ಆ ಶನಿವಾರ ದ್ವಾದಶಿಯ ದಿನವಾಗಿರುತ್ತಿತ್ತು.
ಮನೆಯ ಜಗಲಿಯ ಮೇಲೆ ಲಕ್ಷಣವಾಗಿ ಬೆಳಗಿನ ಊಟ ಮುಗಿಸಿ, ಎಲೆ ಅಡಿಕೆ ಮೆಲ್ಲುತ್ತ, ಬಿಸಿಲಿಗೆ ಮೈಯೊಡ್ಡಿ ಕೂತ ಹಿರಿಯರು ಬೀದಿಯಲ್ಲಿ ಸಾಗುವ ಮಂದಿಯನ್ನು ನೋಡುತ್ತಾ ಕೂತಿರುತ್ತಿದ್ದರು. ಪರಿಚಯದವರನ್ನು ಮಾತನಾಡಿಸುತ್ತಾ, ಪರಿಚಯ ಇಲ್ಲದವರತ್ತ ನಗೆ ಸೂಸುತ್ತಾ ಕೂತಿರುತ್ತಿದ್ದರು. ಆ ನೋಟ ಮತ್ತು ಕೂತ ಬಗೆಯು ನಿರಾಳತನವನ್ನು ಸಾರಿಸಾರಿ ಹೇಳುತ್ತಿತ್ತು. ದಿನ ಬೆಳಗಾದರೆ ಅದೇನು ಉಧೋ ಅಂತ ಹೋಗಿ ಬಂದು ಮಾಡ್ತಾರೋ ಜನ ಅಂತ ಅವರ ಮನಸ್ಸಿನಲ್ಲಿ ಮೂಡಿರಬಹುದೇ? ಹೀಗೆ ಒಮ್ಮೆ ಕೂತಲ್ಲೇ ಹಿಂದಿನ ದಿನಗಳನ್ನು ಮೆಲಕು ಹಾಕುವಾಗ ಅನ್ನಿಸಿದ್ದು, ಈವರೆಗೆ ನಾನು ಏನೇನು ಘನಂಧಾರಿ ಆಲೋಚನೆಗಳನ್ನು ಮಾಡಿದ್ದೆ ಅಂತ.
ಒಂದು ರೀತಿಯಲ್ಲಿ ಹೇಳುವುದಾದರೆ ದಿನನಿತ್ಯದಲ್ಲಿ ಇದೊಂದು ನಿತ್ಯೋತ್ಸವ. ಈ ಆಟದಲ್ಲಿ ನಾವೂ ಭಾಗಿಗಳು. ರಂಗದ ಮೇಲೆ ಇರುವ ದೃಶ್ಯವನ್ನು ನೋಡುವ ವೀಕ್ಷಕರಾದರೆ ನಾವು ನೋಡುವ ರೀತಿ ಬೇರೆ. ನಾವೇ ಪಾತ್ರಧಾರಿಗಳಾದಾಗ ಅನುಭವಿಸುವ ಪರಿಯೇ ಬೇರೆ. ಒಂದು ಸಣ್ಣ ಉದಾಹರಣೆಯೊಂದಿಗೆ ಆರಂಭಿಸುವೆ. ಕೆಲವೊಮ್ಮೆ ನಾನು ಹೊರಗೆ ಹೋಗಬೇಕಾದಾಗ ಮನೆಯ ಬದಿಯ ಗ್ಯಾರೇಜ್‌ನಿಂದ ಕಾರನ್ನು ಹೊರ ತೆಗೆಯುವಾಗ, ಬೀದಿಯಲ್ಲಿ ಮತ್ಯಾರೋ ಸಾಗಿ ಬಂದಾಗ ಅವರು ಹೋಗುವ ತನಕ ನಾನು ಕಾಯಲೇಬೇಕು ಅಲ್ಲವೇ? ಆಗ ನನಗೆ ಅನ್ನಿಸುತ್ತೆ, “ಇಷ್ಟೂ ಹೊತ್ತು ನಿಮಗೆ ಟೈಮ್ ಕೊಟ್ಟಿದ್ನಲ್ಲಾ, ನಾನು ಗಾಡಿ ಹೊರಗೆ ತೆಗೆಯುವಾಗಲೇ ನೀವೂ ಯಾಕೆ ಹೋಗೋದು? ಮುಂಚೆಯೋ, ಅನಂತರವೋ ಹೋಗಬಹುದಿತ್ತಲ್ಲ? ಅಂತ! ಈ ನನ್ನ ಅನಿಸಿಕೆಯಲ್ಲಿ ಲಾಜಿಕ್ ಇದೆ ಅನ್ನಿಸಿದರೂ, ಕೊಂಚ ಯೋಚಿಸಿದರೆ ಲಾಜಿಕ್ ಲವಲೇಶವೂ ಇಲ್ಲ ಅನ್ನಿಸುತ್ತದೆ.
ಮೊದಲಿಗೆ ನನ್ನಂತೆಯೇ ಅವರಿಗೂ ಅನ್ನಿಸಿರಬಹುದಲ್ಲವೇ? ನನ್ನ ಕೆಲಸಕ್ಕೆ ಅಂತ ಒಂದು ಸಮಯಕ್ಕೆ ಹೊರಗೆ ಹೊರಟಿದ್ದ ನಾನೇ ಅವರಿಗಿಂತ ಮುಂಚೆ ಅಥವಾ ಅನಂತರ ಹೊರಡಬಹುದಿತ್ತು ಅಲ್ಲವೇ? ಲಾಜಿಕ್ ಏಕೆ ಇಲ್ಲ ಎಂದರೆ, ಇನ್ನೆಷ್ಟು ಮಂದಿಗಿಂತ ಮುಂಚೆ ಹೊರಡುವುದು? ಇನ್ನೆಷ್ಟು ಮಂದಿ ಹೋದ ಅನಂತರ ಹೊರಡುವುದು? ಅಂತ ಏನಾದರೂ ಅರಿವು ಇರುತ್ತದೆಯೇ? ಇಷ್ಟಕ್ಕೂ ಮುಂಚೆ ಹೋದರೆ ನಮ್ಮ ಕೆಲಸ ಮುಂಚೆಯೇ ಆಗುತ್ತದೆಯೇ? ಅನಂತರ ಹೋದರೆ ಆ ಸಮಯ ದಾಟಿ ಹೋಗುವುದಿಲ್ಲವೆ? ನಮ್ಮ ಕೆಲಸದ ಸಮಯದ ಮೇಲೆ ನಮಗೇ ಕಂಟ್ರೋಲ್ ಇಲ್ಲ ಎಂದ ಮೇಲೆ ಇತರರ ಕೆಲಸದ ಸಮಯದ ಮೇಲೆ ಏನು ಹಿಡಿತ ಸಾಧಿಸಬಹುದು? ಕೆಲವೊಂದು ವಿಷಯದ ಆಳ ಅರ್ಥೈಸಿಕೊಳ್ಳಲು ಪಾದ ಒದ್ದೆಯಾದರೆ ಸಾಲದು ಮಂಡಿ ಒದ್ದೆಯಾಗಬೇಕು.
ಟ್ರಾಫಿಕ್ ಲೈಟಿನಲ್ಲಿ ನಿಂತಿರುತ್ತೇವೆ ಎಂದುಕೊಳ್ಳಿ. ನಮ್ಮ ಸರದಿಯ ಹಸುರು ನಿಶಾನೆಗೆ ಕಾಯುತ್ತಿರುವಾಗ, ಮತ್ತೊಂದು ಬದಿಯಲ್ಲಿ ಸಾಗುತ್ತಿರುವ ಅದಾವುದೋ ವಾಹನ ನಿಧಾನವಾಗಿ ಹಸುರು ದೀಪ ದಾಟಿ ಸಾಗುತ್ತಿದ್ದಾಗ ಅನ್ನಿಸೋದು “ಆ ಗಾಡಿಯವರಿಗೆ ಏನೂ ಧಾವಂತ ಇಲ್ಲ ಅಂಥವರಿಗೆ ಹಸುರು ದೀಪ ಸಿಗುತ್ತೆ. ನಮಗೂ ಅರ್ಜೆಂಟ್ ಆಗಿ ಹೋಗೋದಿದೆ, ನಮಗೆ ಹಸುರು ದೀಪ ಕೊಡೋದಿಲ್ಲ, ಥತ್ ಅದೇನು ಟ್ರಾಫಿಕ್ ಸಿಸ್ಟಮ್ ರೂಪಿಸಿದ್ದಾರೋ ಏನೋ? ಅಂತ. ಈ ಆಲೋಚನೆಗೆ ಏನಾದರೂ ತರ್ಕವಿದೆಯೇ? ಆ ಸಮಯದಲ್ಲಿ ಮನಸ್ಸು ಕೇವಲ “ನುಗ್ಗಿ ಸಾಗಿ ಬಿಡಬೇಕು’ ಅಂತ ಮಾತ್ರ ಆಲೋಚಿಸುತ್ತಿರುತ್ತದೆಯೇ ವಿನಃ, ನಮ್ಮ ಬಾಲಿಶ ಆಲೋಚನೆಗಳಿಗೆ ತಡೆಯೇ ಹಾಕುವುದಿಲ್ಲ.
ಹಗಲಿನ ವೇಳೆಯ ಕಚೇರಿಯ ಕೆಲಸದ ವಿಚಾರವಾಗಿ ಒಮ್ಮೆ ಹೀಗೆ ಯೋಚಿಸಿದ್ದೆ. ಜಯನಗರದಲ್ಲಿ ಇರುವವರು ವಿಜಯನಗರಕ್ಕೆ ಕೆಲಸಕ್ಕೆ ಹೋಗೋದು, ಆ ವಿಜಯನಗರದವರು ಜಯನಗರಕ್ಕೆ ಕೆಲಸಕ್ಕೆ ಬರೋದು ಅಂತ ಇರುವಾಗ ತಾನೇ ವಿಪರೀತ ಟ್ರಾಫಿಕ್ ತೊಂದರೆ. ಅವರುಗಳು ಎಲ್ಲಿ ಕೆಲಸ ಮಾಡುತ್ತಾರೋ, ಅಲ್ಲೇ ಏಕೆ ಮನೆ ಮಾಡಿಕೊಳ್ಳಬಾರದು? ಅವರುಗಳು ಎಲ್ಲಿ ಮನೆ ಹೊಂದಿರುತ್ತಾರೋ ಅಲ್ಲೇ ಏಕೆ ಕೆಲಸ ಹುಡುಕಿಕೊಳ್ಳಬಾರದು? ಅಂತ. ತೋಟ ಇಟ್ಟುಕೊಂಡವನು ತೋಟದಲ್ಲೇ ಮನೆಯನ್ನು ಮಾಡಿಟ್ಟುಕೊಂಡಿರುವಂತೆ, ಅವರೆಲ್ಲಿರುತ್ತಾರೋ ಅಲ್ಲಲ್ಲೇ ಇರಬೇಕಪ್ಪಾ ಅಂತ. ಇಂಥಾ ಘನವಾದ ಆಲೋಚನೆ ಅದೆಷ್ಟು ಅರ್ಥಹೀನ ಅಂತ ನಾನು ಕೆಲಸ ಶುರು ಮಾಡಿದ ಮೇಲೆ ಅರಿವಾಯ್ತು. ಹಾಗೆ ಅರಿವಾದ ಮೇಲೆಯೇ ನಾನು ಒಂದೊಳ್ಳೆ ನಿರ್ಧಾರ ಮಾಡಿದ್ದು. ಅಮೆರಿಕದಲ್ಲಿ ಕೆಲಸವಾದ ಮೇಲೆ, ಅಮೆರಿಕದಲ್ಲೆ ಮನೆ ಮಾಡಿದ್ದು. ದಿನಾ ಹೋಗಿ ಬಂದು ಮಾಡಿ ಟ್ರಾಫಿಕ್ ತೊಂದರೆ ಮಾಡೋದು ಬೇಡಾ ಅಂತ.
ಈ ಧಾವಂತ ಎಂಬ ವಿಷಯ ಬಂದಾಗಲೆಲ್ಲ ಬಸ್ ಪ್ರಯಾಣ ಮೊದಲು ತಲೆಗೆ ಬರುತ್ತದೆ. ಬೇಗ ಇಳಿದು ಕಚೇರಿಗೆ ಓಡಬೇಕು ಅಂತ ತಾವಿಳಿಯುವ ನಿಲ್ದಾಣವು ಇನ್ನೂ ಎರಡು ಸ್ಟಾಪ್ ಗಳ ಅನಂತರ ಇದ್ದರೂ ಫುಟ್‌ಬೋರ್ಡ್ ಮೇಲೆ ಪ್ರಾಣಾಚಾರ ಒಪ್ಪಿಸುವ ಮಂದಿ. ಒಮ್ಮೆಯಂತೂ ಒಬ್ಬಾತ ಬಸ್ ನಿಲ್ದಾಣಕ್ಕೆ ಬರುವಾಗ ನಿಧಾನ ಮಾಡುತ್ತಿದ್ದಂತೆ, ತಾನಿಳಿದು ವಿರುದ್ಧ ದಿಕ್ಕಿಗೆ ಓಡಿದ. ಯಾವ ಪರಿ ಬಿದ್ದ ಎಂದರೆ, ಪುಣ್ಯಕ್ಕೆ ತಲೆ ಒಡೆಯಲಿಲ್ಲ. ಅವಸರವೇ ಅಪಘಾತಕ್ಕೆ ಮೂಲ ಅಂತ ಬಸ್ಸಿನ ಒಳಗೆ ಅಲ್ಲಲ್ಲೇ ಕೆಂಪು ಪಾಯಿಂಟಿನಲ್ಲಿ ಬರೆದಿದ್ದರೂ ಓದುವವರಾರು?
ಒಮ್ಮೆ ನಮ್ಮದೇ ಕಚೇರಿಗೆ ಒಬ್ಬಾತ ತಡವಾಗಿ ಬಂದ, ಬರುವವನೇನೋ ಬಂದ ಸರಿ ಆದರೆ ಬಂದವನು ಧಡಧಡ ಅಂತ ಬಂದು ತನ್ನ ಗಾಲಿಯುಳ್ಳ ಕುರ್ಚಿಯಲ್ಲಿ ಕೂರಲು ಹೋಗಿ ಬಿದ್ದ. ಅವನನ್ನು ಎಬ್ಬಿಸಲು ಮಿಕ್ಕವರು ಕೆಲಸ ಬಿಟ್ಟು ಅವನ ಬಳಿ ಬಂದರು. ಕುರ್ಚಿಯಲ್ಲಿ ಕೂತವನಿಗೆ ಮತ್ತೊಬ್ಬ ಹೇಳಿದ “ತಡವಾಗಿದೆ ನಿಜ, ಐದು ನಿಮಿಷ ತಡವಾದರೂ ತಡ, ಅರ್ಧಘಂಟೆ ತಡವಾದರೂ ತಡವೇ. ನಿನಗೆ ತಡವಾಯ್ತು ಅಂತ ಬೇರೆಯವರಿಗೆಲ್ಲ ತೊಂದರೆ ಮಾಡೋದು ಯಾಕೆ?’. ನಾನಂತೂ ಧಾವಂತದಲ್ಲಿ ಈ ಬರಹ ಬರೆಯಲಿಲ್ಲ. ನೀವೂ ಆರಾಮವಾಗಿ ಓದಿ, ಧಾವಂತ ಬೇಡಾ ಆಯ್ತಾ…
*ಶ್ರೀನಾಥ್ ಭಲ್ಲೇ, ರಿಚ್ಮಂಡ್