ವೃತ್ತಿ ಜೀವನದಲ್ಲಿ ಸಾಧನೆಯ ಶಿಖರವನ್ನೇರಿದ ನಂತರ ತೆಗೆದುಕೊಂಡ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಸಂಪೂರ್ಣವಾಗಿ ಉರುಳಿ ಬಿದ್ದವರನ್ನು ನಾವು ಕಂಡಿದ್ದೇವೆ. ಅಂತವರ ಸಾಲಿಗೆ ಸೇರುವವರು ನ್ಯೂಜಿಲ್ಯಾಂಡ್ ದೇಶದ ಮಾಜಿ ಕ್ರಿಕೆಟಿಗ ಲೂ ವಿನ್ಸೆಂಟ್!
ಒಂದು ಕಾಲದಲ್ಲಿ ತನ್ನ ಹೊಡಿಬಡಿ ಆಟದಿಂದ ನ್ಯೂಜಿಲ್ಯಾಂಡ್ ಕ್ರಿಕೆಟ್ ನ ಭರವಸೆಯ ಬೆಳಕಾಗಿ ಮಿಂಚಿದ್ದ ವಿನ್ಸೆಂಟ್ ನ ಜೀವನ ಸದ್ಯ ಕತ್ತಲೆಯಲ್ಲಿದೆ. ಕಾರಣ ವಿನ್ಸೆಂಟ್ ತೆಗೆದುಕೊಂಡ ಒಂದು ತಪ್ಪು ನಿರ್ಧಾರ. ಅದುವೆ ಮ್ಯಾಚ್ ಫಿಕ್ಸಿಂಗ್ !
ಲೂ ವಿನ್ಸೆಂಟ್ ಜನಿಸಿದ್ದು 1978ರ ನವೆಂಬರ್ 11ರಂದು, ಆಕ್ಲಂಡ್ ನ ವಾರ್ಕ್ ವರ್ತ್ ನಲ್ಲಿ. ತಂದೆ ಮೈಕ್ ವಿನ್ಸೆಂಟ್ ಪ್ರಸಿದ್ದ ಕ್ರೀಡಾ ಪತ್ರಕರ್ತರಾಗಿದ್ದರು. ಹೀಗಾಗಿ ಲೂ ವಿನ್ಸೆಂಟ್ ಗೆ ಸಹಜವಾಗಿಯೇ ಕ್ರೀಡೆಯ ಮೇಲೆ ವ್ಯಾಮೋಹ ಬೆಳೆದಿತ್ತು. ಆದರೆ ಲೂ ವಿನ್ಸೆಂಟ್ ಗೆ 15 ವರ್ಷ ತುಂಬುವಷ್ಟರಲ್ಲಿ ತಂದೆ ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಹೀಗಾಗಿ ಲೂ ತಂದೆಯ ಜೊತೆಗೆ ಆಸ್ಟ್ರೇಲಿಯಾಗೆ ತೆರಳುತ್ತಾರೆ.
ಆದರೆ ಕಾಂಗರೂ ನೆಲದಲ್ಲಿ ತನ್ನ ಆಟಕ್ಕೆ ಸರಿಯಾದ ಅವಕಾಶ ಸಿಗದ ಕಾರಣ ಲೂ ವಿನ್ಸೆಂಟ್ 18ನೇ ವಯಸ್ಸಿನಲ್ಲಿ ಮತ್ತೆ ಕಿವೀಸ್ ಗೆ ಮರಳುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ನ್ಯೂಜಿಲ್ಯಾಂಡ್ ಅಂಡರ್ 19 ತಂಡಕ್ಕೆ ಲೂ ವಿನ್ಸೆಂಟ್ ಆಯ್ಕೆಯಾಗುತ್ತಾರೆ. ಈ ಮೂಲಕ 1998ರ ಅಂಡರ್ 19 ವಿಶ್ವಕಪ್ ನಲ್ಲಿ ಲೂ ವಿನ್ಸೆಂಟ್ ಕಿವೀಸ್ ಪರವಾಗಿ ಆಡುತ್ತಾರೆ.
ನಂತರ ಪ್ರಥಮ ದರ್ಜೆ ಕ್ರಿಕೆಟ್, ಕೌಂಟಿ ಕ್ರಿಕೆಟ್ ನಲ್ಲಿ ಲೂ ವಿನ್ಸೆಂಟ್ ಅದ್ಭುತ ಆಟವಾಡುತ್ತಾರೆ. ಬಲಗೈ ಬ್ಯಾಟ್ಸಮನ್ ಆಗಿದ್ದ ಲೂ ವಿನ್ಸೆಂಟ್ ಅದ್ಭುತ ಫೀಲ್ಡರ್ ಕೂಡಾ. ಆಕ್ಲಂಡ್ ತಂಡ ಪರ ರನ್ ಮಳೆ ಹರಿಸುವ ಆತ 2001ರಲ್ಲಿ ಲಂಕಾ ವಿರುದ್ಧದ ಸರಣಿಗಾಗಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಅದೇ ವರ್ಷ ಆಸೀಸ್ ವಿರುದ್ಧದ ಪರ್ತ್ ಪಂದ್ಯದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಲೂ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಬಾರಿಸುತ್ತಾರೆ. ಈ ಇನ್ನಿಂಗ್ಸ್ ನಲ್ಲಿ ಕಿವೀಸ್ ನ ನಾಲ್ವರು ಬ್ಯಾಟ್ಸಮನ್ ಗಳು ಶತಕ ಬಾರಿಸಿದ್ದರು ಎನ್ನುವುದು ವಿಶೇಷ.
2005ರ ಜಿಂಬಾಬ್ವೆ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಲೂ ವಿನ್ಸೆಂಟ್ 172 ರನ್ ಗಳಿಸಿದ್ದರು. 120 ಎಸೆತಗಳಲ್ಲಿ 172 ರನ್ ಗಳಿಸಿದ್ದ ವಿನ್ಸೆಂಟ್ 16 ಬೌಂಡರಿ ಮತ್ತು ಒಂಬತ್ತು ಸಿಕ್ಸರ್ ಬಾರಿಸಿದ್ದರು. ಲೂ ವಿನ್ಸೆಂಟ್ ರ 172 ರನ್ ಕಿವೀಸ್ ಪರ ಏಕದಿನ ಕ್ರಿಕೆಟ್ ನ ಗರಿಷ್ಠ ಮೊತ್ತವಾಗಿತ್ತು. ( ನಂತರ ಮಾರ್ಟಿನ್ ಗಪ್ಟಿಲ್ ದ್ವಿಶತಕ [237 ರನ್] ಬಾರಿಸಿ ದಾಖಲೆ ಮುರಿದರು)
2007ರ ವಿಶ್ವಕಪ್ ನಲ್ಲಿ ಆರಂಭಿಕ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಲೂ ವಿನ್ಸೆಂಟ್, ನೆಟ್ಸ್ ನಲ್ಲಿ ಶೇನ್ ಬಾಂಡ್ ಬೌಲಿಂಗ್ ಎದುರಿಸುವಾಗ ಗಾಯಗೊಂಡರು. ಇದರಿಂದ ಕೂಟವನ್ನು ಅರ್ಧದಲ್ಲಿ ತೊರೆಯುವಂತಾಯಿತು. ನಂತರ ಅಸ್ಥಿರ ಪ್ರದರ್ಶನಗಳಿಂದಾಗಿ ತಂಡದಿಂದ ಹೊರಬೀಳಬೇಕಾಯಿತು. ಇದರಿಂದ ಲೂ ವಿನ್ಸೆಂಟ್ ಮಾನಸಿಕವಾಗಿಯೂ ಕುಗ್ಗಿದ್ದರು.
2008ರಲ್ಲಿ ಬಿಸಿಸಿಐ ಗೆ ಸಡ್ಡು ಹೊಡೆದು ಆಯೋಜಿಸಲಾಗಿದ್ದ ಐಸಿಎಲ್ ಕೂಟದಲ್ಲಿ ಲೂ ವಿನ್ಸೆಂಟ್, ಚಂಡಿಗಡ್ ಲಯನ್ಸ್ ಪರ ಕಾಣಿಸಿಕೊಂಡರು. ಇಂಗ್ಲೆಂಡ್ ಕೌಂಟಿಯಲ್ಲಿ ಫಿಕ್ಸಿಂಗ್ ನಡೆಸಿದ್ದಾರೆಂದು ಲೂ ವಿನ್ಸೆಂಟ್ ಮೇಲೆ ಆರೋಪಿಸಿಲಾಯಿತು. ಐಸಿಎಲ್ ನಲ್ಲೂ ಫಿಕ್ಸಿಂಗ್ ನಡೆಸಿದ ಮಾಹಿತಿ ಹೊರಬಿತ್ತು. ಐಸಿಎಲ್ ನಲ್ಲಿ ಭಾರತೀಯ ಆಟಗಾರ ದಿನೇಶ್ ಮೋಂಗಿಯಾ ಕೂಡಾ ತನ್ನ ಜೊತೆಗೆ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ಲೂ ವಿನ್ಸೆಂಟ್ ಸ್ವತಃ ಹೇಳಿಕೊಂಡಿದ್ದರು. ಇದರೊಂದಿಗೆ ಪ್ರತಿಭಾನ್ವಿತ ಆಟಗಾರ ಕ್ರಿಕೆಟ್ ಜೀವನ ಕರಾಳ ಅಂತ್ಯ ಕಂಡಿತು.
ಸದ್ಯ ಕ್ರಿಕೆಟ್ ನಿಂದ ಜೀವಮಾನದ ನಿಷೇಧಕ್ಕೆ ಒಳಗಾಗಿರುವ ಲೂ ವಿನ್ಸೆಂಟ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದಾನೆ ಎಂದು ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ತನ್ನ ಪ್ರತಿಭೆಯಿಂದ ದೇಶದ ಯೂತ್ ಐಕಾನ್ ಬೆಳೆದಿದ್ದ ವ್ಯಕ್ತಿಯೊಬ್ಬ ತನ್ನ ತಪ್ಪಿನಿಂದ ಕೆಳ ಮಟ್ಟಕ್ಕೆ ಜಾರಿದ್ದಾನೆ. ತಮ್ಮ ವೃತ್ತಿಗೆ ಎಂದಿಗೂ ನಿಷ್ಠರಾಗಿರಬೇಕು ಎನ್ನುವುದಕ್ಕೆ ಲೂ ವಿನ್ಸೆಂಟ್ ಜೀವನಗಾಥೆ ಒಂದು ಉತ್ತಮ ನಿದರ್ಶನ.
ಕೀರ್ತನ್ ಶೆಟ್ಟಿ ಬೋಳ